ಗೋಕರ್ಣ ಧಾರವಾಡದ ಮುಸ್ಲಿಂ ಕುಟುಂಬವೊಂದು ಇಲ್ಲಿಗೆ ಆಗಮಿಸಿ ಪಿತೃಕಾರ್ಯ ನೆರವೇರಿಸಿದ ಘಟನೆ ನಡೆದಿದೆ. ಧಾರವಾಡದ ಧಾನೇಶ್ವರಿ ನಗರದ ಶಂಸಾದ್ ಎನ್ನುವವರ ಕುಟುಂಬ ಈ ಕಾರ್ಯ ನೆರವೇರಿಸಿದೆ. ಜ್ಯೋತಿಷಿಯೊಬ್ಬರ ಸಲಹೆಯಂತೆ ಮುಸ್ಲಿಂ ಕುಟುಂಬ ಪಿತೃ ಪಕ್ಷದ ಪರ್ವಕಾಲದಲ್ಲಿ ನಾರಾಯಣ ಬಲಿ, ತ್ರಿಪಿಂಡಿ ಶ್ರಾದ್ಧ ಮತ್ತು ತಿಲಹವನ ವನ್ನು ಪಿತೃಶಾಲೆಯಲ್ಲಿ ಪೂರೈಸಿದರು. ಈ ಕುಟುಂಬ ಹಿಂದಿನಿಂದಲೂ ಜಾತಕ, ಕುಂಡಲಿ ಹೀಗೆ ಹಿಂದೂ ಸಂಪ್ರದಾಯ, ಆಚರಣೆಯ ಮೇಲೆ ನಂಬಿಕೆ ಇಟ್ಟಿದ್ದರು. ಸಹೋದರನ ವಿವಾಹ ಸಂದರ್ಭದಲ್ಲೂ ಸೂಕ್ತ ಹೆಣ್ಣು ಸಿಗದೆ ಇದ್ದಾಗ ಜ್ಯೋತಿಷಿಯ ಮೊರೆ ಹೋಗಿದ್ದರು. ಪುರೋಹಿತರಾದ ನಾಗರಾಜ ಭಟ್ ಗುರುಲಿಂಗ ಹಾಗೂ ಸುಬ್ರಹಣ್ಯ ಚಿತ್ರಿಗಿಮಠ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿಸಲಾಯಿತು. ಕ್ರೈಸ್ತ ಸಮುದಾಯದವರು ಇಲ್ಲಿ ಆಗಾಗ ಪಿತೃಕಾರ್ಯ ನೆರವೇರಿಸುತ್ತಾರೆ. ಈಗ ಮೊದಲ ಬಾರಿಗೆ ಮುಸ್ಲಿಂ ಕುಟುಂಬ ಪಿತೃ ಕಾರ್ಯ ನೆರವೇರಿಸಿದೆ.