ರೇಣುಕಾಸ್ವಾಮಿ ಎದೆ, ವೃಷಣ ತುಳಿದು ಡಿ’ಗ್ಯಾಂಗ್‌ ಹಿಂಸೆ!

KannadaprabhaNewsNetwork |  
Published : Jun 20, 2024, 01:04 AM ISTUpdated : Jun 20, 2024, 05:10 AM IST
Shed | Kannada Prabha

ಸಾರಾಂಶ

3 ಹಂತದಲ್ಲಿ ಹಲ್ಲೆ ಮಾಡಿ ಕೊನೆಯಲ್ಲಿ ಲಾರಿಗೆ ತಲೆ ಗುದ್ದಿಸಿದ್ದರಿಂದ ಸಾವು ಸಂಭವಿಸಿದ್ದು, ಪಟ್ಟಣಗೆರೆಯ ಶೆಡ್‌ನಲ್ಲಿ ಹಲ್ಲೆ ನಡೆದಿದೆ.

 ಬೆಂಗಳೂರು :  ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ಮೂರು ಹಂತದಲ್ಲಿ ದರ್ಶನ್‌ ಗ್ಯಾಂಗ್ ದೈಹಿಕ ಹಲ್ಲೆ ನಡೆಸಿದ್ದು, ಪಟ್ಟಣಗೆರೆ ಶೆಡ್‌ನಲ್ಲಿ ಮೃತನ ಎದೆ ಹಾಗೂ ವೃಷಣದ ಮೇಲೆ ಕಾಲಿಟ್ಟು ದರ್ಶನ್‌ ಕ್ರೌರ್ಯ ಮೆರೆದಿದ್ದರು ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.

ಈ ಕೊಲೆ ಪ್ರಕರಣ ಸಂಬಂಧ ಬಂಧಿತರಾಗಿರುವ ದರ್ಶನ್‌ ಹಾಗೂ ಅವರ 15 ಮಂದಿ ಸಹಚರರನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿದಾಗ ರೇಣುಕಾಸ್ವಾಮಿ ಮೇಲೆ ನಡೆದಿದ್ದ ದೈಹಿಕ ಹಲ್ಲೆಯ ಭೀಭತ್ಸ ಕೃತ್ಯಗಳು ಬೆಳಕಿಗೆ ಬಂದಿವೆ.

ಹಲ್ಲೆ ಮೊದಲ ಹಂತ:

ತಮ್ಮ ಪ್ರಿಯತಮೆ ಪವಿತ್ರಾಗೌಡಳಿಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಬುದ್ಧಿ ಕಲಿಸಲು ರೇಣುಕಾಸ್ವಾಮಿಯನ್ನು ಕರೆತರುವಂತೆ ಚಿತ್ರದುರ್ಗದ ಜಿಲ್ಲೆಯ ತಮ್ಮ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಅವರಿಗೆ ದರ್ಶನ್ ಸೂಚಿಸಿದ್ದರು. ಅಂತೆಯೇ ಜೂ.8ರಂದು ಶನಿವಾರ ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತರುವಾಗ ದಾರಿಯುದ್ದಕ್ಕೂ ರೇಣುಕಾಸ್ವಾಮಿ ಮೇಲೆ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ಆತನ ಸಹಚರರಾದ ಜಗದೀಶ್ ಅಲಿಯಾಸ್ ಜಗ್ಗ, ಅನುಕುಮಾರ್ ಹಾಗೂ ರವಿಶಂಕರ್ ತಲೆ ಮೇಲೆ ಹೊಡೆದುಕೊಂಡೇ ಕರೆತಂದಿದ್ದರು. ಈ ಹಲ್ಲೆಯಿಂದಲೇ ಆತ ಸ್ವಲ್ಪ ಮಟ್ಟಿಗೆ ಹೈರಾಣಾಗಿದ್ದ. ತಮ್ಮ ಅತ್ತಿಗೆಗೆ (ಪವಿತ್ರಾಗೌಡ) ಅಶ್ಲೀಲ ಮೆಸೇಜ್ ಕಳುಹಿಸುತ್ತೀಯಾ ಏನೋಲೇ ಎಂದು ನಿಂದಿಸಿ ರೇಣುಕಾಸ್ವಾಮಿ ಮೇಲೆ ಚಿತ್ರದುರ್ಗದ ದರ್ಶನ್‌ ಸಹಚರರು ಹಲ್ಲೆ ಮಾಡಿದ್ದರು ಎಂದು ಮೂಲಗಳು ಹೇಳಿವೆ. 

ಎರಡನೇ ಹಂತ ಕರೆಂಟ್ ಶಾಕ್:

ಪಟ್ಟಣಗೆರೆ ಶೆಡ್‌ಗೆ ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ರೇಣುಕಾಸ್ವಾಮಿಯನ್ನು ದರ್ಶನ್ ಸಹಚರರು ಕರೆತಂದಿದ್ದರು. ಶೆಡ್‌ಗೆ ಬಂದ ರೇಣುಕಾಸ್ವಾಮಿ ಮೇಲೆ ನಂದೀಶ, ಧನರಾಜ್ ಅಲಿಯಾಸ್ ರಾಜು, ಪವನ್‌, ಕಾರ್ತಿಕ್ ಅಲಿಯಾಸ್ ಕಪ್ಪೆ ಹಾಗೂ ದೀಪಕ್‌ ಸೇರಿದಂತೆ ಇತರರು ಹಲ್ಲೆ ನಡೆಸಿದ್ದರು. ಇದೇ ವೇಳೆ ಆತನಿಗೆ ಕರೆಂಟ್ ಶಾಕ್ ಸಹ ನೀಡಲಾಗಿತ್ತು. ಅಷ್ಟರಲ್ಲಿ ರೇಣುಕಾಸ್ವಾಮಿ ಕರೆತಂದ ಸಂಗತಿ ತಿಳಿದು ದರ್ಶನ್ ಎಂಟ್ರಿಯಾಗಿದೆ.

ವೃಷಣ, ಎದೆ ಮೇಲೆ ಕಾಲಿಟ್ಟು ಕ್ರೌರ್ಯ:ರೇಣುಕಾಸ್ವಾಮಿ ಮೇಲೆ ಕೊನೆಯ ಹಂತದ ಹಲ್ಲೆಯಲ್ಲೇ ದರ್ಶನ್‌ ನೇರವಾಗಿ ಪಾಲ್ಗೊಂಡಿದ್ದು. ತಮ್ಮ ಪ್ರಿಯತಮೆಗೆ ಮರ್ಮಾಂಗದ ಪೋಟೋ ಕಳುಹಿಸಿದ್ದಕ್ಕೆ ಕ್ರುದ್ಧರಾಗಿದ್ದ ದರ್ಶನ್‌, ರೇಣುಕಾಸ್ವಾಮಿ ಕಂಡಕೂಡಲೇ ರೋಷಾವೇಷ ತೋರಿಸಿದ್ದಾರೆ.

 ಈ ಹಂತದಲ್ಲಿ ಆತನ ವೃಷಣ ಹಾಗೂ ಎದೆಯನ್ನು ತುಳಿದು ಹಿಂಸಿಸಿದ್ದಾರೆ. ದರ್ಶನ್ ಹಲ್ಲೆಯಿಂದ ಪ್ರಚೋದನೆಗೊಳಗಾಗಿರುವ ಅವರ ಸಹಚರರು, ರೇಣುಕಾಸ್ವಾಮಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ಆತನನ್ನು ಹಿಡಿದು ಅಲ್ಲೇ ನಿಂತಿದ್ದ ಲಾರಿಗೆ ಗುದ್ದಿಸಿದ್ದಾರೆ. ಆಗ ತಲೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿ ಆತ ಪ್ರಜ್ಞೆ ತಪ್ಪಿದ್ದಾನೆ. ಕೂಡಲೇ ಭದ್ರತಾ ಕೋಣೆಗೆ ಕರೆದೊಯ್ದು ಆತನ ತಲೆಗೆ ಪ್ರದೂಷ್‌, ವಿನಯ್‌, ದೀಪಕ್‌ ಹಾಗೂ ನಂದೀಶ ಅರಿಷಣ ಮೆತ್ತಿ ರಕ್ತ ಸೋರದಂತೆ ತಡೆಹಿಡಿದ್ದಾರೆ. ಇದರಿಂದ ಆತಂಕಗೊಂಡ ದರ್ಶನ್‌, ಕೂಡಲೇ ತಮ್ಮ ಪ್ರಿಯತಮೆ ಕರೆದುಕೊಂಡು ಶೆಡ್‌ನಿಂದ ತೆರಳಿದ್ದಾರೆ. ಕೊನೆಗೆ ತಲೆಗೆ ಬಿದ್ದ ಪೆಟ್ಟಿನಿಂದ ಮೆದುಳಿನಲ್ಲಿ ರಕ್ತಸ್ರಾವವಾಗಿ ರೇಣುಕಾಸ್ವಾಮಿ ಕೊನೆಯುಸಿರೆಳೆದಿದ್ದಾನೆ. ಆರ್‌.ಆರ್‌.ನಗರದ ಐಡಿಯಲ್‌ ಹೋಮ್ಸ್ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿದ್ದ ದರ್ಶನ್‌ ಅವರಿಗೆ ರೇಣುಕಾಸ್ವಾಮಿ ಮೃತಪಟ್ಟ ಸಂಗತಿ ಗೊತ್ತಾಗಿದೆ ಎಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!