ಧರ್ಮಸ್ಥಳದಲ್ಲಿ ಪತ್ತನಾಜೆ ಪೂಜೆ: ಸೇವೆಗಳು ಸಮಾಪನ

KannadaprabhaNewsNetwork | Published : May 27, 2024 1:02 AM

ಸಾರಾಂಶ

ಶ್ರೀ ಮಂಜುನಾಥ ಸ್ವಾಮಿ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಪತ್ತನಾಜೆ ಪ್ರಯುಕ್ತ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ರಂಗ ಪೂಜೆ, ಬಲಿ ಉತ್ಸವ, ವಸಂತ ಮಂಟಪದಲ್ಲಿ ಕಟ್ಟೆಪೂಜೆ, ಅಷ್ಟಾವಧಾನ ಸೇವೆ ಹಾಗೂ ಧ್ವಜ ಮರ ಇಳಿಸುವ ಕಾರ್ಯಕ್ರಮ, ವಿಶೇಷ ಉತ್ಸವ, ಸೇವೆಗಳು ಸಮಾಪನ ಗೊಂಡವು.

ಮುಂದಿನ ದೀಪಾವಳಿ ವೇಳೆಗೆ ಮತ್ತೆ ಎಂದಿನಂತೆ ಉತ್ಸವ, ವಿಶೇಷ ಸೇವೆಗಳು ಪ್ರಾರಂಭಗೊಳ್ಳುತ್ತವೆ.

ಕ್ಷೇತ್ರದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವಾರ್ಷಿಕ ತಿರುಗಾಟ ಸಮಾಪ್ತಿಗೊಳಿಸಿ, ಬೆಳಗ್ಗೆ ಮೇಳದ ಶ್ರೀ ಮಹಾಗಣಪತಿ ದೇವರನ್ನು ಹಿಂದಿನ ದಿನದ ಮುಂಡಾಜೆ ಕ್ಯಾಂಪಿನಿಂದ ಧರ್ಮಸ್ಥಳದ ಮಂಜುಕೃಪಾಕ್ಕೆ ಬರಮಾಡಿಕೊಂಡು ಅಲ್ಲಿ ಮಧ್ಯಾಹ್ನ ಗಣಹೋಮ, ಮಹಾಪೂಜೆ ನಡೆಯಿತು.

ಮೇಳದ ಯಜಮಾನ ಡಿ.ಹರ್ಷೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಸಂಜೆ ವೈಭವದ ಮೆರವಣಿಗೆಯಲ್ಲಿ ಕ್ಷೇತ್ರದ ಸಕಲ ಗೌರವ, ಬಸವ, ಆನೆಗಳು, ಚೆಂಡೆ, ತಾಳ ಮೇಳ, ವಾದ್ಯ ಬ್ಯಾಂಡ್ ವಾದನದೊಂದಿಗೆ ಶ್ರೀ ಮಹಾಗಣಪತಿ ದೇವರನ್ನು ಅರ್ಚಕರ ನೃತ್ಯ ಸೇವೆಯೊಂದಿಗೆ ಬರಮಾಡಿಕೊಳ್ಳಲಾಯಿತು.

ಶ್ರೀ ದೇವಳದ ಎದುರು ಮತ್ತು ಬೀಡಿನ ಮುಂಭಾಗದಲ್ಲಿ ನರ್ತನ ಸೇವೆ ನಡೆಸಿ ದೇವರನ್ನು ಛತ್ರ ಗಣಪತಿ ಗುಡಿಯಲ್ಲಿರಿಸಿ ಪೂಜಿಸಲಾಯಿತು.

ಪತ್ತನಾಜೆ ಪ್ರಯುಕ್ತ ಮೇಳಕ್ಕೆ ರಜೆಯಾಗಿದ್ದು, ಮುಂದಿನ ಮೂರು ದಿನ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಮೇಳ ಹಾಗೂ ಸೇವಾಕರ್ತರ ಸೇವೆಯಾಟದೊಂದಿಗೆ ವಾರ್ಷಿಕ ತಿರುಗಾಟಕ್ಕೆ ಮಂಗಳ ಹಾಡಲಾಗುತ್ತದೆ.

ಹೇಮಾವತಿ ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಸೀತಾರಾಮ ತೋಳ್ಪಡಿತ್ತಾಯ, ಮಣೆಗಾರ್ ವಸಂತ ಮಂಜಿತ್ತಾಯ, ಪಾರುಪತ್ಯದಾರ ಲಕ್ಷ್ಮೀನಾರಾಯಣ ರಾವ್, ಬಿ.ಭುಜಬಲಿ, ಉಜಿರೆ ಅಶೋಕ ಭಟ್, ಕ್ಷೇತ್ರದ ಸಿಬಂದಿ ವರ್ಗ, ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

* ಉಜಿರೆಯಲ್ಲಿ ಪತ್ತನಾಜೆ

ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಪತ್ತನಾಜೆ ಪ್ರಯುಕ್ತ ಶ್ರೀ ಜನಾರ್ದನ ಸ್ವಾಮಿ ಹಾಗೂ ಪರಿವಾರ ದೇವರ ಸನ್ನಿಧಿಯಲ್ಲಿ ರಂಗಪೂಜೆ, ಬಲಿ ಉತ್ಸವ ನಡೆದು ಉತ್ಸವ ಮೂರ್ತಿ ಗರ್ಭಗುಡಿ ಸೇರಿತು.

ಅರ್ಚಕರಾದ ಶ್ರೀನಿವಾಸ ಹೊಳ್ಳ, ರಾಮಚಂದ್ರ ಹೊಳ್ಳ, ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಅನಂತಕೃಷ್ಣ ಮೂಡಣ್ಣಾಯ, ಜಯರಾಮ ಪಡ್ಡಿಲ್ಲಾಯ, ಧನಂಜಯ ರಾವ್, ಅರವಿಂದ ಭಾಗವತ, ಮೋಹನ ಶೆಟ್ಟಿಗಾರ್ ಮತ್ತು ಊರ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಮುಂದಿನ ದೀಪಾವಳಿಗೆ ಮತ್ತೆ ರಂಗಪೂಜೆ, ಉತ್ಸವಗಳು ಪ್ರಾರಂಭಗೊಳ್ಳುತ್ತವೆ.

ತಾಲೂಕಿನ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನ, ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಸೇರಿದಂತೆ ಎಲ್ಲ ಧಾರ್ಮಿಕ ದೇವಸ್ಥಾನಗಳಲ್ಲಿ ಪತ್ತನಾಜೆಯಂದು ಉತ್ಸವ, ವಿಶೇಷ ಸೇವೆಗಳು ಸಮಾಪ್ತಿಗೊಂಡವು.

Share this article