ಕಂಪ್ಲಿ: ತಾಲೂಕಿನ ನಂ.3 ಸಣಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಭೇಟಿ ನೀಡಿದ ಕುರುಗೋಡು ಬಿಇಒ ಟಿ.ಎಂ. ಸಿದ್ಧಲಿಂಗಮೂರ್ತಿ ಮಕ್ಕಳೊಂದಿಗೆ ಬೆರೆತು ಅವರ ಕಲಿಕಾ ಸಾಮರ್ಥ್ಯ ಹಾಗೂ ಪಾಠದ ಗ್ರಹಿಕೆ ಮಟ್ಟ ಪರಿಶೀಲಿಸಿದರು.
ನಂತರ ಶಿಕ್ಷಕರೊಂದಿಗೆ ಮಾತನಾಡಿದ ಬಿಇಒ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯವಿರುವ ಹೆಚ್ಚುವರಿ ಬೋಧನೆ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಮುಖ್ಯವಾಹಿನಿಗೆ ತರಬೇಕು. ಶಾಲೆಗೆ ನಿರಂತರವಾಗಿ ಗೈರಾಗುವ ಮಕ್ಕಳನ್ನು ಗುರುತಿಸಿ ಅವರ ಪಾಲಕರೊಂದಿಗೆ ಸಂಪರ್ಕ ಸಾಧಿಸಿ ನಿತ್ಯವೂ ಶಾಲೆಗೆ ಹಾಜರಾಗುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಪರೀಕ್ಷಾ ಫಲಿತಾಂಶ ನಿಗದಿತ ಅವಧಿಯಲ್ಲಿ ಆನ್‌ಲೈನ್‌ನಲ್ಲಿ ದಾಖಲಿಸುವಂತೆ ಶಿಕ್ಷಕರಿಗೆ ಸೂಚಿಸಿದರು. ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ನಿರಂತರವಾಗಿ ಮಕ್ಕಳ ಪ್ರಗತಿ ಗಮನಿಸಿ ಅಗತ್ಯ ಶೈಕ್ಷಣಿಕ ಚಟುವಟಿಕೆ ರೂಪಿಸಬೇಕು ಎಂದರು.ಶಾಲೆಯಲ್ಲಿ ಮೂಲ ಸೌಕರ್ಯಗಳ ಕುರಿತು ಪರಿಶೀಲಿಸಿದ ಬಿಇಒ, ಶಾಲೆಗೆ ಇನ್ನೂ ಆರು ಕೊಠಡಿ ಅಗತ್ಯವಿದ್ದು, ಕೆಎಂಇಆರ್‌ಸಿ ಅನುದಾನದಡಿ ಕೊಠಡಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿಆರ್‌ಪಿಗಳಾದ ಎನ್.ಬಿ.ರೇಣುರಾಧ್ಯ, ಎ.ಎಸ್. ಭೂಮೇಶ್ವರ, ಎ. ಗಂಗಾಧರ, ಮುಖ್ಯಶಿಕ್ಷಕಿ ಕೆ. ಸುನಿತಾಕುಮಾರಿ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.