ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಬಾಲಭವನದಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಸೀಮಂತ ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿರು. ಅಂಗನವಾಡಿ ನೌಕರರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಿಂದ ವೇತನ ನೀಡಲಾಗುತ್ತಿದೆ. ಈ ಬಾರಿ ಕೇಂದ್ರ ದಿಂದ ಅನುದಾನ ಬರುವುದು ವಿಳಂಬವಾಗಿದೆ. ಹಾಗಾಗಿ ಈ ಮೂರು ಜಿಲ್ಲೆಗಳ ನೌಕರರಿಗೆ ವೇತನ ತಡವಾಗಿದೆ ಎಂದರು.ಈ ಸಂಬಂಧ ರಾಜ್ಯ ಸರ್ಕಾರದಿಂದ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಶೀಘ್ರ ಕೇಂದ್ರದಿಂದ ಅನುದಾನ ಬರುವ ನಿರೀಕ್ಷೆಯಿದ್ದು, ಗಣಪತಿ ಹಬ್ಬದ ಒಳಗಾಗಿ ಕೋಲಾರ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯ ಅಂಗನವಾಡಿ ನೌಕರರಿಗೆ ವೇತನ ಪಾವತಿಸಲಾಗುವುದು ಎಂದು ಹೇಳಿದರು.
ಅಂಗನವಾಡಿ ನೌಕರರಿಗೆ ವೇತನ ವಿಳಂಬವಾಗಿರುವುದು ಇದೇ ಮೊದಲಲ್ಲ. ಹಾಗೆಯೇ ಈ ಮೂರು ಜಿಲ್ಲೆಗಳಿಗೆ ಮಾತ್ರವಲ್ಲ, ರಾಜ್ಯದ ಕೆಲ ಜಿಲ್ಲೆಗಳಲ್ಲೂ ಈ ರೀತಿಯ ಸಮಸ್ಯೆ ಆಗುತ್ತಿರುತ್ತದೆ. ಹಾಗಂತ ನಾನು ಯಾವ ಸರ್ಕಾರಗಳ ಮೇಲೂ ಆರೋಪ ಮಾಡುವುದಿಲ್ಲ. ಈ ರೀತಿಯ ವಿಳಂಬ ಮೊದಲಿನಿಂದಲೂ ಆಗುತ್ತಲೇ ಬಂದಿದೆ ಎಂದರು.ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ವಿಳಂಬ ಮಾಡಿದಾಗ ಈ ಸಮಸ್ಯೆ ಎದುರಾಗುತ್ತದೆ. ನಂತರ ಸರಿ ಹೋಗುತ್ತದೆ. ನಮ್ಮ ಇಲಾಖೆಯ ಬಹಳಷ್ಟು ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಣ ಬರುತ್ತದೆ. ಹಾಗಾಗಿ ಎರಡೂ ಇಲಾಖೆಗಳ ಅನುದಾನದಿಂದಲೇ ವೇತನ ನೀಡಬೇಕಾಗಿದೆ ಎಂದು ತಿಳಿಸಿದರು.
ಅದ್ದೂರಿ ಸ್ವಾಗತ: ಇದಕ್ಕೂ ಮೊದಲು ಬಾಲಭವನದಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನ ಹಾಗೂ ಸೀಮಂತ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಎಂ.ಜಿ. ರಸ್ತೆಯಲ್ಲಿ ಪೂರ್ಣಕುಂಭ ಕಳಸ ಹೊತ್ತ ಸುಮಂಗಲಿಯರು ಅದ್ಧೂರಿಯಾಗಿ ಸ್ವಾಗತಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಫಲಾನುಭವಿಗಳು ಪಾಲ್ಗೊಂಡಿದ್ದರು.