ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪುರಸಭೆ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಅಧ್ಯಕ್ಷರು ಕೋಕಿಲ ಅರುಣ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಅಪೂರ್ಣ ಕಾಮಗಾರಿಗೆ ಬಿಲ್ ಪಾವತಿ ಮಾಡಿರುವ ಬಗ್ಗೆ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿದ್ದರೂ ಸಹ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಜಾಣ ಕುರುಡು ಪ್ರದರ್ಶನ ನಡೆಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಯಿತು.
ಜೆಡಿಎಸ್ ಸದಸ್ಯರಾದ ಎಂ.ಐ.ಪ್ರವೀಣ್, ಮನೋಜ್, ಪ್ರಿಯಾಂಕ, ಅಪ್ಪು ಗೌಡ ಹಾಗೂ ನಂದೀಶ್ ಅವರು, ಪುರಸಭೆ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿರುವ ಕಾಮಗಾರಿಗಳನ್ನು ಗುತ್ತಿಗೆದಾರರು ಅಪೂರ್ಣಗೊಳಿಸಿದ್ದಾರೆ. ಈ ಬಗ್ಗೆ ಸದಸ್ಯರ ಗಮನಕ್ಕೆ ತಾರದೆ ಬಿಲ್ ಪಾವತಿ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಪಟ್ಟಣ ವ್ಯಾಪ್ತಿಯಲ್ಲಿ ಹಿಂದೆ ನಡೆದಿರುವ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗಳ ಕಾಮಗಾರಿಗಳು ಸಮರ್ಪಕವಾಗಿ ನಡೆಯದಿರುವ ಬಗ್ಗೆ ಹತ್ತಾರು ಬಾರಿ ಸಭೆ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.ಅನುದಾನ ಹಂಚಿಕೆ, ಕ್ರಿಯಾಯೋಜನೆಗಳ ಕಾಮಗಾರಿಗಳ ಅನುಷ್ಠಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿರೋಧ ಪಕ್ಷಗಳ ಸದಸ್ಯರನ್ನು ಹಿಂದಿನಿಂದಲೂ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಜೆಡಿಎಸ್ ಸದಸ್ಯರು ಸಭೆಯಲ್ಲಿ ಗಂಭೀರ ಆರೋಪ ಮಾಡಿದರು.
ಅನುದಾನ ಬಿಡುಗಡೆ ಸಂಬಂಧ ಮುಂದಿನ ಸಭೆಗಳಲ್ಲಿ ಕ್ರಿಯಾಯೋಜನೆ ತಯಾರಿಸುವ ಮೂಲಕ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪೂರ್ಣ ಗೊಳಿಸುವ ಬಗ್ಗೆ ಸದಸ್ಯರಿಗೆ ಮಾಹಿತಿ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯ ಅಧಿಕಾರಿ ಮೀನಾಕ್ಷಿ ಆಶ್ವಾಸನೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಟಿ.ಆರ್. ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.