ನಗರ ಗ್ರಂಥಾಲಯದಲ್ಲಿ ಪಿಡಿಓ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕಾರ್ಯಾಗಾರ

KannadaprabhaNewsNetwork | Updated : Nov 13 2024, 12:10 AM IST

ಸಾರಾಂಶ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ)ಗಳ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಕುರಿತು ಉಚಿತ ತರಬೇತಿಯ ಕಾರ್ಯಾಗಾರ ಉಡುಪಿ ನಗರದ ಕೇಂದ್ರ ಗ್ರಂಥಾಲಯದಲ್ಲಿ

ಕನ್ನಡಪ್ರಭ ವಾರ್ತೆ ಉಡುಪಿ

ಸಾರ್ವಜನಿಕ ಗ್ರಂಥಾಲಯ ಇಲಾಖೆ, ಉಡುಪಿಯ ನಗರ ಕೇಂದ್ರ ಗ್ರಂಥಾಲಯ ಹಾಗೂ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತರ ಅಧ್ಯಯನ ಕೇಂದ್ರದ ರಾಜ್ಯ ಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ)ಗಳ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಕುರಿತು ಉಚಿತ ತರಬೇತಿಯ ಕಾರ್ಯಾಗಾರ ನಗರದ ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಾಗಾರವನ್ನು ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಗುಂಡಿಬೈಲು ಅವರು ಉದ್ಘಾಟಿಸಿದರು. ಇಂತಹ ಪರೀಕ್ಷೆಗಳಿಗೆ ಅಗತ್ಯ ಪುಸ್ತಕಗಳಿರುವ ಗ್ರಂಥಾಲಯದಲ್ಲಿಯೇ ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ತರಬೇತಿಗಳನ್ನು ಮಾಡುತ್ತಿರುವುದು ಶ್ಗಾಘನೀಯ, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸ್ಪರ್ಧಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು. ಸ್ಥಳೀಯ ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್ ಅವರು ಮಾತನಾಡಿ, ಸಕರಾತ್ಮನೆ ಯೋಚನೆ, ಶಿಸ್ತು, ಜೀವನದಲ್ಲಿ ರೂಢಿಸಿಕೊಳ್ಳಿ, ಇಂತಹ ಉತ್ತಮ ಕಾರ್ಯಾಗಾರವನ್ನು ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದರು.ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ ಗಾಂವ್ಕರ್ ಅವರು ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಅದರಲ್ಲಿ ಪಾಲ್ಗೊಳ್ಳುವವರ ಮನಸ್ಥಿತಿ, ಆಸಕ್ತಿ ತುಂಬಾ ಮುಖ್ಯ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಗೆ ನೌಕರಿಯಾದರೆ, ಅದು ಅವನನ್ನೆ ನಂಬಿಕೊಂಡು ಇರುವ ಇಡೀ ಕುಟುಂಬಕ್ಕೆ ಆಧಾರವಾಗುತ್ತದೆ. ಇಲ್ಲಿ ನಡೆಯುತ್ತಿರುವ 35 ಗಂಟೆಗಳ ತರಬೇತಿಯನ್ನು ಚೆನ್ನಾಗಿ ಉಪಯೋಗ ಮಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪಶ್ರಾಂತ್ ನೀಲಾವರ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ. ಉಪಸ್ಥಿತರಿದ್ದರು. ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಥಮ ದರ್ಜೆ ಸಹಾಯಕಿ ಶಕುಂತಳಾ ಕುಂದರ್ ವಂದಿಸಿದರು. ಗ್ರಂಥಪಾಲಕಿ ರಂಜಿತ ಸಿ. ಕಾರ್ಯಕ್ರಮ ನಿರೂಪಿಸಿದರು.

Share this article