ಕನ್ನಡಪ್ರಭ ವಾರ್ತೆ ಕಾರವಾರ
ಇಲ್ಲಿನ ಜಿಪಂನಿಂದ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ ಪಿಡಿಒ ಆಫ್ ದಿ ಮಂತ್ ಸೆಪ್ಟೆಂಬರ್ ತಿಂಗಳ ಪ್ರಶಸ್ತಿಗೆ ಹಳಿಯಾಳ ತಾಲೂಕಿನ ಹವಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನುಪಮಾ ಬೆನ್ನೂರ ಭಾಜನರಾಗಿದ್ದಾರೆ.ಅನುಪಮಾ ಅವರಿಗೆ ದಾಂಡೇಲಿಯಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು.
ಅನುಪಮಾ ಬೆನ್ನೂರ ಎಂಕಾಂ ಪದವೀಧರೆಯಾಗಿದ್ದು, 2010ರಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಪ್ರಾರಂಭಿಸಿದ್ದಾರೆ. ಹಳಿಯಾಳ ತಾಲೂಕಿನ ಹವಗಿ ಗ್ರಾಪಂ ಅನುಪಮಾ ಬೆನ್ನೂರ ಅವರು 2019-20ನೇ ಸಾಲಿನ ಕೋವಿಡ್ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಸ್ಥಳೀಯ ಶಾಸಕರಿಂದ ತಾಲೂಕು ಮಟ್ಟದ ಅತ್ಯುತ್ತಮ ಕೋವಿಡ್ ವಾರಿಯರ್ ಪ್ರಶಸ್ತಿ ಪಡೆದುಕೊಂಡಿದ್ದರು. ಜತೆಗೆ ಎಸ್‌ಬಿಎಂ ಯೋಜನೆಯಡಿ ಕಸ ವಿಲೇವಾರಿ ಘಟಕ ನಿರ್ಮಾಣ, ಡಿಜಿಟಲ್ ಗ್ರಂಥಾಲಯ ಅಭಿವೃದ್ಧಿ, ಗ್ರಾಪಂ ನವೀಕರಣ ಕಾರ್ಯ ಮಾಡಿದ್ದಾರೆ. ಹವಗಿ ಗ್ರಾಪಂ ವ್ಯಾಪ್ತಿಯ ಕೆರವಾಡ, ತಿಮ್ಮಾಪುರ, ಮಂಗಳವಾಡ ಹಾಗೂ ಗೌಳಿವಾಡ ಗ್ರಾಮಗಳಲ್ಲಿ ಜೆಜೆಎಂ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಾರೆ. ಮಹಾತ್ಮ ಗಾಂಧಿ ನರೇಗಾದಡಿ ತಿಮ್ಮಾಪುರ ಗ್ರಾಮದ ಸಕಿಪ್ರಾ ಶಾಲೆಗೆ ಕಾಂಪೌಂಡ್ ನಿರ್ಮಾಣ, ಸ್ಮಶಾನ ಅಭಿವೃದ್ಧಿ, ಹವಗಿ ಮತ್ತು ಕೆರವಾಡ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಆಟದ ಮೈದಾನ ಅಭಿವೃದ್ಧಿ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲ ಯೋಜನೆಗಳ ಕಾಮಗಾರಿಗಳನ್ನು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಗುರಿಗೆ ಅನುಗುಣವಾಗಿ ಅನುಷ್ಠಾನಗೊಳಿಸುತ್ತಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಪ್ರಶಸ್ತಿ ಪ್ರಮಾಣ ಪತ್ರ ವಿತರಣೆ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ, ಡಿ.ಎಂ. ಜಕ್ಕಪ್ಪಗೋಳ, ಮುಖ್ಯ ಲೆಕ್ಕಾಧಿಕಾರಿ ಸತೀಶ ಪವಾರ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ, ಯೋಜನಾ ನಿರ್ದೇಶಕ (ಡಿಆರ್‌ಡಿಎ) ಕರೀಂ ಅಸದಿ ಇದ್ದರು.ಈ ಕುರಿತು ಪ್ರತಿಕ್ರಿಯಿಸಿರುವ ಅನುಪಮಾ ಬೆನ್ನೂರ, ಗ್ರಾಮೀಣ ಭಾಗದಲ್ಲಿ ಎಲ್ಲ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಕಾನೂನುಬದ್ಧವಾಗಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಮೇಲಧಿಕಾರಿಗಳ ಆದೇಶಗಳ ಕಟ್ಟುನಿಟ್ಟಿನಿಂದ ಪಾಲಿಸಿ ಸಮಗ್ರವಾಗಿ ಗ್ರಾಪಂ ಅಭಿವೃದ್ಧಿಗೆ ಆದ್ಯತೆ ಕೊಡಲಾಗುತ್ತಿದೆ ಎಂದರು.