ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಶಾಸಕ ಎಚ್.ಟಿ.ಮಂಜು ತೀವ್ರ ಅಸಮಧಾನ ವ್ಯಕ್ತಪಡಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯ್ತಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕಾದ ಪಿಡಿಒಗಳು ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿಸಿದರೆ ಸಾರ್ವಜನಿಕರ ಸಮಸ್ಯೆಗಳು ಬಗೆ ಹರಿಯುವುದಾರೂ ಹೇಗೆ ಎಂದು ಪ್ರಶ್ನೆ ಮಾಡಿದರು.
ಗ್ರಾಪಂ ಮಟ್ಟದಲ್ಲಿ ಅನುಷ್ಠಾನವಾಗುವ ಎಲ್ಲಾ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಗಾಗಿ ಸಭೆ ನಡೆಸಲಾಗುತ್ತದೆ. ಆದರೆ, ಸಭೆಗೆ ತಾಲೂಕಿನ 34 ಗ್ರಾಪಂ ಪೈಕಿ ಕೇವಲ ಎರಡು ಗ್ರಾಮ ಪಂಚಾಯ್ತಿಗಳ ಪಿಡಿಒಗಳು ಮಾತ್ರ ಪ್ರಗತಿಯ ವರದಿ ತಂದಿದ್ದಾರೆ. ಇತರ ಗ್ರಾಪಂ ಪಿಡಿಓಗಳಿಗೆ ಸಾರ್ವಜನಿಕ ಜವಾಬ್ದಾರಿ ಇಲ್ಲವೇ ಎಂದು ಕಿಡಿಕಾರಿದರು.ಪ್ರತಿ ಸಭೆಯಲ್ಲಿಯೂ ಪಿಡಿಒಗಳ ನಿರ್ಲಕ್ಷ್ಯ ಧೋರಣೆ ಪುನರಾವರ್ತನೆಯಾಗುತ್ತಿದೆ. ತಾಪಂ ಇಒ ಕರ್ತವ್ಯದಲ್ಲಿ ಸಡಿಲ ನೀತಿ ಅನುಸರಿಸುತ್ತಿರುವುದು ಇದಕ್ಕೆ ಕಾರಣ. ಮುಂದಿನ ಸಭೆಗಳಲ್ಲಿ ಪೂರ್ಣ ಮಾಹಿತಿಯೊಂದಿಗೆ ಬರುತ್ತೇವೆ ಎಂದು ಹೇಳುತ್ತಾರೆ. ಆದರೆ, ಅದನ್ನು ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಪಿಡಿಒಗಳ ಕಾರ್ಯ ವೈಖರಿ ಬದಲಾಗುತ್ತಿಲ್ಲ. ತಾಪಂ ಇಒ ಆಡಳಿತದಲ್ಲಿ ಬಿಗಿ ಧೋರಣೆ ಪ್ರದರ್ಶಿಸಬೇಕು. ಕರ್ತವ್ಯ ಲೋಪ ಹಾಗೂ ಸಭಾ ಗೌರವ ಪಾಲಿಸದ ಪಿಡಿಒಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ತಾಲೂಕಿಗೆ 4600 ಮನೆ ಮಜೂರಾಗಿದೆ. ಆದರೆ, 34 ಗ್ರಾಪಂಗಳ ಮೂಲಕ ಕೇವಲ 1300 ಫಲಾನುಭವಿಗಳನ್ನು ಮಾತ್ರ ಗುರುತಿಸಲಾಗಿದೆ. ಬಸವ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ತಾಲೂಕಿನ ದಬ್ಬೇಘಟ್ಟ ಗ್ರಾಪಂ 100, ಹಿರೀಕಳಲೆ ಗ್ರಾಪಂ 100, ವಿಠಲಾಪುರ ಗ್ರಾಪಂ 112 ಮತ್ತು ಅಘಲಯ ಗ್ರಾಪಂನಿಂದ 75 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದರು.
ಉಳಿದ ಗ್ರಾಮ ಪಂಚಾಯ್ತಿಗಳು ಇದುವೆರಗೂ ಫಲಾನುಭವಿಗಳ ಆಯ್ಕೆಗೆ ಮುಂದಾಗಿಲ್ಲ. ಆಶ್ರಯ ಸಮಿತಿಗೆ ಆಯಾ ಭಾಗದ ಶಿರಸ್ತೆದಾರರು ಮುಖ್ಯಸ್ಥರಾಗಿದ್ದು, ಕಾಲ ಕಾಲಕ್ಕೆ ಸಭೆ ನಡೆಸಿ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ಹಂಚಿಕೆಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.ಆರ್‌ಐಗಳು ಮತ್ತು ಪಿಡಿಒಗಳು ಸಮನ್ವದಿಂದ ಕೆಲಸ ಮಾಡಿ ಸರ್ಕಾರಿ ಜಾಗವನ್ನು ಗುರುತಿಸಿ ಆಶ್ರಯ ಸಮಿತಿಗೆ ಪಡೆದುಕೊಂಡು ನಿವೇಶನಗಳ ಹಂಚಿಕೆ ಮಾಡಬೇಕು. ಆದರೆ, ತಾಲೂಕಿನ ಯಾವುದೇ ಒಂದು ಗ್ರಾಪಂ ಜಾಗ ಗುರುತಿಸಿ ನಿವೇಶನ ರಹಿತರಿಗೆ ಹಕ್ಕು ವಿತರಿಸಿಲ್ಲ ಎಂದರು.
ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ. ಶುದ್ಧ ಕುಡಿಯುಇವ ನೀರು ಪೂರೈಕೆಗೆ ಕ್ರಮ ವಹಿಸುತ್ತಿಲ್ಲ. ನೀರಿನ ವಾಟರ್ ಟ್ಯಾಂಕ್ ಗಳ ಸುತ್ತ ಗಿಡಗೆಂಟೆಗಳು ಬೆಳೆದು ಕೊಂಡಿವೆ. ಸ್ವಚ್ಛತೆಗೂ ಮುಂದಾಗುತ್ತಿಲ್ಲ. ಹಳ್ಳಿಯ ಜನರು ಸಣ್ಣಪುಟ್ಟ ಸಮಸ್ಯೆಗಳಿಗೂ ಜನ ಶಾಸಕರ ಬಳಿಗೆ ಬರುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನರೇಗಾ ಸಪ್ಲೆ ಬಿಲ್ ಪಾವತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ರೈತರ ಖಾತೆಗೆ ಸಪ್ಲೆ ಬಿಲ್ ಹಣ ಪಾವತಿಸದೆ ಪಿಡಿಒಗಳು ಏಜೆನ್ಸಿ ಖಾತೆಗೆ ಹಣ ಹಾಕಿ ಪರ್ಸಂಟೇಜ್ ಪಡೆಯುತ್ತಿದ್ದಾರೆ. ರೈತರಿಗೆ ತಿಳಿಯದಂತೆ ಹೆಚ್ಚುವರಿ ಜಾಬ್ ಕಾರ್ಡುಗಳನ್ನು ಸೃಷ್ಟಿಸಿ ಸರ್ಕಾರದ ಹಣವನ್ನು ದೋಚುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳಿವೆ. ಇದರ ಬಗ್ಗೆ ನಿಗಾ ವಹಿಸುವಂತೆ ಇಒ ಕೆ.ಸುಷ್ಮಾ ಅವರಿಗೆ ಸೂಚಿಸಿದರು.
ದನದ ಕೊಟ್ಟಿಗೆ, ಬದು ನಿರ್ಮಾಣ, ಅರಣ್ಯೀಕರಣ, ಶಾಲಾ ಶೌಚಾಲಯ, ಕೆರೆಗಳ ಅಭಿವೃದ್ಧಿ ಮುಂತಾದ 26 ಅಂಶಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಇಒ ಕೆ.ಸುಷ್ಮಾ, ಜಿಪಂ ಕುಡಿಯುವ ನೀರು ವಿಭಾಗದ ಸಹಾಯಕ ಎಂಜಿನಿಯರ್ ರಶ್ಮಿ, ತಾಪಂ ಯೋಜನಾಧಿಕಾರಿ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪಿಡಿಒಗಳು ಇದ್ದರು.