ಹೂವಿನಹಡಗಲಿ: ಗ್ರಾಮೀಣ ಭಾಗದಲ್ಲಿ ಇ-ಸ್ವತ್ತು ನೀಡಲು ಪಿಡಿಒಗಳು ಜನರ ರಕ್ತ ಹೀರುತ್ತಿದ್ದಾರೆ. ತಮಗಿಷ್ಟ ಬಂದಂತೆ ನಿಯಮಗಳನ್ನು ಮೀರಿ ಕಾಮಗಾರಿ ಮಾಡಿ, ಹಣ ಲೂಟಿ ಮಾಡುತ್ತಿದ್ದಾರೆ. ಜನರ ಕೆಲಸ ಮಾಡದ ಅಧಿಕಾರಿಗಳ ಕುತ್ತಿಗೆಗೆ ಕೈ ಹಾಕಿ, ಹೊರಕ್ಕೆ ತಳ್ಳಬೇಕಾಗುತ್ತದೆ ಎಂದು ಶಾಸಕ ಕೃಷ್ಣನಾಯ್ಕ ಪಿಡಿಒಗಳು, ಅಧಿಕಾರಿಗಳ ವಿರುದ್ಧ ಗರಂ ಆದರು.
ದಾಸನಹಳ್ಳಿ ಗ್ರಾಪಂಗೆ 6 ಸಿಬ್ಬಂದಿ ಮಂಜೂರು ಮಾಡಲಾಗಿದೆ. ಇವರಿಗೆ ಸರ್ಕಾರದಿಂದ ವೇತನ ಬರುತ್ತಿದೆ. ಆದರೆ ಕೆಲಸ ಮಾಡುವವರು ಮಾತ್ರ 5 ಜನರಿದ್ದಾರೆ. ಇದರಲ್ಲಿ ಒಂದೇ ಹೆಸರಿನ ವ್ಯಕ್ತಿ ತನ್ನ ಎರಡು ರೀತಿಯ ಹೆಸರುಗಳನ್ನು ಹಾಜರಾತಿ ಪುಸ್ತಕದಲ್ಲಿ ಬರೆದು 2021ರಿಂದ ಎರಡು ವೇತನ ಪಡೆಯುತ್ತಿದ್ದಾರೆ. ಜಿಪಂ, ತಾಪಂ ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ಇಷ್ಟೊಂದು ಅಕ್ರಮ ನಡೆದರೂ ಸುಮ್ಮನೆ ಇದ್ದರೆ ಸರಿಯಲ್ಲ. ಈ ಕುರಿತು ತನಿಖೆ ಮಾಡಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಪಂ ಇಒ ಸೂಚಿಸಿದರು.
ಈ ಹಿಂದೆ ಗ್ರಾಪಂ 15ನೇ ಹಣಕಾಸಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಂಪೌಂಡ್, ಕುಡಿಯುವ ನೀರು, ಕೊಳವೆಬಾವಿ ಹಾಗೂ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಿರುವೆ. ಆದರೆ ಹಿರೇಮಲ್ಲನಕೆರೆ ಗ್ರಾಪಂನಲ್ಲಿ 15ನೇ ಹಣಕಾಸಿನ ಕ್ರಿಯಾ ಯೋಜನೆ ಮಂಜೂರಾಗುವ ಮೊದಲೇ ಆ ಗ್ರಾಪಂ ಸದಸ್ಯರು ಗುಣಮಟ್ಟ ಇಲ್ಲದ ಸಿಸಿ ಕ್ಯಾಮರಾ ಅಳವಡಿಸಿ, ಪಿಡಿಒಗೆ ಬಿಲ್ ಬರೆಯುವಂತೆ ದುಂಬಾಲು ಬಿದ್ದಿದ್ದಾರೆ. ನೀವು ಏನು ಮಾಡುತ್ತಿದ್ದೀರಿ, ಪಿಡಿಒಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ಜಿಪಂಗೆ ಬಂದು ಅಲ್ಲಿನ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಪಂ ಯೋಜನಾಧಿಕಾರಿ ಅಶೋಕ ತೋಟದ್ ವಿರುದ್ಧ ಶಾಸಕರು ಗರಂ ಆದರು.ಪಿಡಿಒಗಳಿಗೆ ಕಾನೂನಿನ ಭಯವಿಲ್ಲ. ಹಳ್ಳಿಗಳಲ್ಲಿ ಎನ್‌ಎ ಆದ ಖಾಲಿ ಸೈಟ್‌ಗಳಿಗೆ ಇ-ಸ್ವತ್ತು ನೀಡುತ್ತಿದ್ದಾರೆ. ಆದರೆ ಅಲ್ಲಿ ಈವರೆಗೂ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಇಂತಹ ಅಕ್ರಮ ನಡೆದರೂ ಯಾರು ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
ತಾಪಂ ಕೆಡಿಪಿ ಮತ್ತು ಸಾಮಾನ್ಯ ಸಭೆಗೆ ಗೈರಾದ, 9 ಜನ ವಿವಿಧ ಇಲಾಖೆ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ತಾಪಂ ಆಡಳಿತಾಧಿಕಾರಿ ಅಶೋಕ ತೋಟದ್ ತಾಪಂ ಇಒಗೆ ಸೂಚಿಸಿದರು.