ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕೆಜಿ ಒಂದಕ್ಕೆ ರೈತರಿಗೆ ದೊರಕುತ್ತಿರುವ ಬೆಲೆ 25 ರು.ನಿಂದ ಮೇಲೇರುತ್ತಿಲ್ಲ. ಒಂದೊಂದು ದಿನ 25ಕ್ಕಿಂತ ಕಡಿಮೆಯಾಗುತ್ತದೆ ಎಂಬ ಮಾತು ರೈತರಿಂದ ಕೇಳಿ ಬರುತ್ತಿದೆ. ನಗರದ ಭುವನೇಶ್ವರಿ ವೃತ್ತ, ಸರ್.ಎಂ.ವಿ. ವೃತ್ತ , ಎಂಜಿ ರಸ್ತೆ,ಗಂಗಮ್ಮ ಗುಡಿ ರಸ್ತೆಯ ಬದಿಯ ಅವರೆ ಮಾರುಕಟ್ಟೆಯಲ್ಲಿ ಈಗ ಸೂರ್ಯಾಸ್ತದ ನಂತರ ರಾಶಿಯಾಗಿ ಬಂದು ಬೀಳುತ್ತಿದೆ.
ಚಳಿಗಾಲ ಶುರುವಾಗಿ, ಇಬ್ಬನಿ ಸುರಿಯುತ್ತಿದ್ದಂತೆ ಜಿಲ್ಲೆಯ ಹೊಲಗಳಲ್ಲಿ ಅವರೆ ಕಟಾವು ಆರಂಭವಾಗುತ್ತದೆ. ಮಾರುಕಟ್ಟೆಯಲ್ಲಿ ಈಗ ಸಾಲು ಸಾಲು ಅವರೆ ಕಾಯಿ ರಾಶಿ ಮೇಳೈಸುತ್ತದೆ. ಗ್ರಾಹಕರು ಬೆಳೆಗಾರರ ನಡುವೆ ಚೌಕಾಶಿ ವ್ಯಾಪಾರ ನಡೆದು, ಅತ್ತ ಅಡುಗೆ ಮನೆಯಲ್ಲಿ ಘಮಘಮ ಅವರೆ ಖಾದ್ಯಗಳು ತಯಾರಿಯಾಗುತ್ತಿವೆ.ಹಿಂದೆಲ್ಲ ಇಲ್ಲಿಯ ನಾಟಿ (ಸ್ಥಳೀಯ)ಅವರೆಗೆ ಭಾರೀ ಡಿಮ್ಯಾಂಡ್ ಇತ್ತು. ಮಳೆ ವೈಪರಿತ್ಯದಿಂದ ಬಹಳಷ್ಟು ರೈತರು ಕಡಿಮೆ ಮಳೆಯಲ್ಲಿಯೇ ಬೆಳೆಯುವ ಅವರೆಯತ್ತ ಆಸಕ್ತಿ ತೋರಿಸಿದ್ದರಿಂದ ಮಾರುಕಟ್ಟೆಗೆ ಭಾರೀ ಪ್ರಮಾಣದ ಫಸಲು ಬಂದಿದೆ. ಹೀಗಾಗಿ ಅವರೆ ಬೆಲೆ ಕುಸಿದು ಬೆಳೆಗಾರರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕದೆ ಪರದಾಡುವಂತಾಗಿದೆ.ಒಂದು ತಿಂಗಳಿಂದ ಅವರೆಕಾಯಿ ಬೆಲೆ ಕೆಜಿಗೆ 20ರಿಂದ 25 ರು.ಗೆ ಬೆಲೆ ಕುಸಿದು ಬೆಳೆಗಾರರು ಕಂಗಾಲಾಗಿದ್ದಾರೆ. ಈ ವರ್ಷ ಮಳೆ ಹೆಚ್ಚಾಗಿ ಬಿದ್ದು ಬಿತ್ತನೆ ಮಾಡಿದ್ದ ಪ್ರದೇಶ ಕಡಿಮೆಯಾಗಿದ್ದರೂ ಇರುವ ತೋಟಗಳು ಮಳೆಗೆ ಸಿಲುಕಿ ನಾಶವಾಗಿದೆ. ಅಲಲ್ಲಿ ಮಳೆಯಾಶ್ರಿತ ಬಿತ್ತನೆ ಮತ್ತು ಕೊಳವೆ ಬಾವಿಗಳ ಬಳಿ ನೀರಾವರಿ ಬೆಳೆಯಾಗಿ ಬೆಳೆದಿರುವ ಅವರೆಕಾಯಿ ಫಸಲು ಶೇ. 30ರಷ್ಟು ಭಾಗ ಫಸಲು ಬಂದಿದೆಯಾದರೂ ಆರಂಭದಲ್ಲಿ 55ರಿಂದ 70 ರು.ವರೆಗೆ ಮಾರಾಟ ಆಗುತ್ತಿದ್ದ ಅವರೆಕಾಯಿ ಸಂಕ್ರಾಂತಿ ಮುನ್ನಾ ಎರಡು ದಿನಗಳಿಂದ ಸಂಪೂರ್ಣ ಬೆಲೆ ಕುಸಿದಿದೆ.
ದ್ರಾಕ್ಷಿ , ದಾಳಿಂಬೆ, ಮಾವು ಸೇರಿದಂತೆ ವಿವಿಧ ಫಲ-ಪುಷ್ಪ, ತರಕಾರಿ ಮತ್ತು ರೇಷ್ಮೆಗೆ ಪ್ರಸಿದ್ಧಿಯಾದ ಜಿಲ್ಲೆಯಲ್ಲಿ ತೋಟಗಾರಿಕೆ ಸೇರಿದಂತೆ , ಹೊಲದ ಬೆಳೆಯಾಗಿ ಬೆಳೆದಿದ್ದ ಅವರೆಕಾಯಿ ಫಸಲು ಶಿವರಾತ್ರಿ ಬರುವ ಮುನ್ನವೇ ಕ್ಷೀಣಿಸುತ್ತಿದೆ. ಈ ವರ್ಷ ಮಳೆ ಹೆಚ್ಚಾಗಿ ಬಹುತೇಕ ಬೆಳೆಗಳು ಕೈಕೊಟ್ಟಿವೆ. ನೀರಾವರಿ ಅನುಕೂಲ ಇರುವ ಕೆಲವು ರೈತರು ಕೊಳವೆಬಾವಿಗಳ ಬಳಿ ಅವರೆ ಬಿತ್ತನೆ ಮಾಡಿದ್ದಾರೆ.ರೈತರಿಗೆ ಆದಾಯ ಬಾರದಿದ್ದರೂ ದಲ್ಲಾಳಿಗಳಿಗೆ ಕಮೀಷನ್, ಚಿಲ್ಲರೆ ದಲ್ಲಾಳಿಗಳಿಗೆ ಕಮೀಷನ್, ಚಿಲ್ಲರೆ ವ್ಯಾಪಾರಿಗಳಿಗೆ ಕೆಜಿಗೆ 5 ರಿಂದ 10 ರು. ಆದಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹುಲುಸಾಗಿ ಫಸಲು ಬಂದಿದ್ದರೆ ಲಾಭವಾಗುತ್ತಿತ್ತು. ಫಸಲು ಕಡಿಮೆಯಾಗಿದ್ದು ಇರುವ ಫಸಲಿಗೆ ಹುಳ ಕೀಟ ರೋಗ ಬಾಧೆ ಹೆಚ್ಚಾಗಿ ಕಮರಿ ಹೋಗಿ ಬೆಳೆಗಾರರಿಗೆ ಕತ್ತರಿ, ವ್ಯಾಪಾರಿಗಳಿಗೆ ಆದಾಯ ಎನ್ನುವಂತಾಗಿದೆ.ಜಿಲ್ಲೆಯ ಬಯಲು ಪ್ರದೇಶ, ನೆರೆಯ ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳು ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದಲೂ ಅವರೆ ಭಾರೀ ಪ್ರಮಾಣದಲ್ಲಿ ನಗರದ ಮಾರುಕಟ್ಟೆ ಪ್ರವೇಶಿಸುತ್ತದೆ. ಹೀಗಾಗಿ ಅವರೆ ಬೆಲೆ ಕುಸಿಯುತ್ತಿದೆ ಎಂಬ ಮಾತು ರೈತರಿಂದ ಕೇಳಿ ಬರುತ್ತಿದೆ.ಮಾರುಕಟ್ಟೆಗೆ ದಿನಕ್ಕೆ 500ರಿಂದ 800 ಕ್ವಿಂಟಲ್ ಕಾಯಿ ಬರುತ್ತಿದೆ ಎಂದು ವರ್ತಕರು ಹೇಳುತ್ತಾರೆ. ಒಣಗಿದ ಅವರೆ ಬೇಳೆ ಕೆಜಿ 95ರಿಂದ 100 ರು.ವರೆಗೆ ಮಾರಾಟವಾಗುತ್ತಿದ್ದರೂ ಹಸಿ ಅವರೆ ಕಾಯಿ ಕೆಜಿ 30 ರು.ಗೆ ರೀಟೆಲ್ ಮಾರಾಟವಾಗುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ.ಸಿಕೆಬಿ-1 ನಗರದ ಸರ್.ಎಂ.ವಿ. ವೃತ್ತದಲ್ಲಿ ಅವರೆ ಕಾಯಿಗೆ ಗ್ರಾಹಕರನ್ನು ಎದುರು ನೋಡುರುತ್ತಿರುವ ತಳ್ಳು ಬಂಡಿ ವ್ಯಾಪಾರಿ