ಪೊಲೀಸರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ: ಡಾ. ವಸಂತ ರೆಡ್ಡಿ

KannadaprabhaNewsNetwork | Published : Dec 7, 2024 12:33 AM

ಸಾರಾಂಶ

ಶ್ರಮದ ಜೀವನ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿಯ ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರವಾಗಲಿದ್ದು, ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಸ್ಪರ್ಧಿಸುವುದು ಮುಖ್ಯವಾಗಿದೆ.

ಕಾರವಾರ: ಸಾರ್ವಜನಿಕರು ರಾತ್ರಿ ಹೊತ್ತು ನೆಮ್ಮದಿಯಾಗಿ ನಿದ್ರೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಪೊಲೀಸ್ ಇಲಾಖೆಯವರೇ ಮುಖ್ಯ ಕಾರಣರಾಗಿದ್ದಾರೆ. ದಿನದ 24 ಗಂಟೆಯೂ ತಮ್ಮನ್ನು ತಾವು ಕರ್ತವ್ಯದಲ್ಲಿ ತೊಡಗಿಸಿಕೊಂಡು ನಮ್ಮನ್ನು ರಕ್ಷಣೆ ಮಾಡುವುದರಲ್ಲಿ ಪೊಲೀಸರ ಪಾತ್ರ ಅಪಾರವಾದುದು ಎಂದು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಸಂತ ರೆಡ್ಡಿ ಕೆ.ವಿ. ತಿಳಿಸಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ನಡೆದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಶ್ರಮದ ಜೀವನ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿಯ ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರವಾಗಲಿದ್ದು, ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಸ್ಪರ್ಧಿಸುವುದು ಮುಖ್ಯವಾಗಿದೆ. ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಮಾತನಾಡಿ, ಪೊಲೀಸರು ಕ್ರೀಡಾಕೂಟದ ಸ್ಪರ್ಧೆಯಲ್ಲಿ ತೋರಿದ ಪ್ರಾವೀಣ್ಯ, ಶಕ್ತಿ-ಸಾಮರ್ಥ್ಯ, ಚಾತುರ್ಯ, ಉತ್ಸಾಹವನ್ನು ಠಾಣೆಯಲ್ಲಿ ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಮತ್ತು ಸಮಾಜದಲ್ಲಿನ ಘಾತಕ ಶಕ್ತಿಯ ವಿರುದ್ಧ ತೋರಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಇನ್ನಷ್ಟು ಹೆಸರು ತರಲು ಕಾರಣಕರ್ತರಾಗಿ ಎಂದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಪುರುಷ ಸಿಬ್ಬಂದಿಗೆ ಅಂತಿಮ 100 ಮೀ. ಓಟ, ಹಗ್ಗ ಜಗ್ಗಾಟ, 4x100 ಮೀ. ರಿಲೆ ಸ್ಪರ್ಧೆಗಳು ನಡೆದವು. ಹಾಗೇ ಅತಿಥಿಗಳಿಗೆ ಕ್ರೀಡೆ ಏರ್ಪಡಿಸಲಾಗಿತ್ತು. ಪೊಲೀಸ್ ಕವಾಯತು ತಂಡದಿಂದ ಪಥ ಸಂಚಲನ, ಸಿಡಿಮದ್ದುಗಳ ಪ್ರದರ್ಶನ ನಡೆಯಿತು.

ದಾಂಡೇಲಿಯ ವೆಸ್ಟ್‌ಕೋಸ್ಟ್ ಪೇಪರ್ ಮಿಲ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್, ಬಿಣಗಾದ ಗ್ರಾಸಿಮ್ ಕೆಮಿಕಲ್ಸ್ ಲಿಮಿಟೆಡ್‌ನ ಯುನಿಟ್ ಹೆಡ್ ಕುಶ್ ಶರ್ಮಾ, ಕ್ರೀಡಾಪಟು ಇನಾಯಿತ್ ವುಲ್ಲಾ, ಹೆಚ್ಚುವರಿ ಪೊಲೀಸ್ ವರಿಷ್ಠ ಜಗದೀಶ ಇದ್ದರು.ಡಾ. ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

ಶಿರಸಿ: ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಅಧ್ಯಕ್ಷ ಬಸವರಾಜ ದೊಡ್ಮನಿ, ಕೆಪಿಸಿಸಿ ಸದಸ್ಯ ದೀಪಕ್ ದೊಡ್ಡೂರು, ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಶ್ರೀನಿವಾಸ ನಾಯ್ಕ, ಮುಖಂಡರಾದ ರಘು ಕಾನಡೆ, ಅಮರ ನೆರಲಕಟ್ಟೆ, ಮಾಧವ ರೇವಣಕರ್, ಸುಭಾಸ ಕಾನಡೆ, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಚಂದ್ರಕಾಂತ ರೇವಣಕರ್, ಗೀತಾ ಭೋವಿ, ಪೂಜಾ ವೈದ್ಯ, ತಾರಾ ಮೇಸ್ತಾ, ಶಾಂತಾರಾಂ ನಾಯ್ಕ, ಎನ್.ವಿ. ನಾಯ್ಕ, ನಂದಕುಮಾರ್, ವಿಶ್ವನಾಥ ಶರ್ಮಾ, ನಾರಾಯಣ ವೈದ್ಯ ಮುಂತಾದವರು ಉಪಸ್ಥಿತರಿದ್ದರು.

Share this article