ಆ.21ರಿಂದ 23ರವರೆಗೆ ಸಮಾಧಾನ ಸಮಾರೋಹ: ನ್ಯಾ. ಎಂ.ಎಸ್‌.ಸಂತೋಷ್

KannadaprabhaNewsNetwork |  
Published : May 12, 2026, 01:45 AM IST
ಪೊಟೋ: 11ಎಸ್‌ಎಂಜಿಕೆಪಿ03ಶಿವಮೊಗ್ಗದ ನ್ಯಾಯಾಲಯ ಆವರಣದ ವಿಸಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್‌. ಸಂತೋಷ್‌ ಮಾತನಾಡಿದರು.  | Kannada Prabha

ಸಾರಾಂಶ

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಆ.21ರಿಂದ 23ರವರೆಗೆ "ಸಮಾಧಾನ ಸಮಾರೋಹ " ಎಂಬ ವಿಶೇಷ ಲೋಕ್ ಅದಾಲತ್ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್‌. ಸಂತೋಷ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಆ.21ರಿಂದ 23ರವರೆಗೆ "ಸಮಾಧಾನ ಸಮಾರೋಹ " ಎಂಬ ವಿಶೇಷ ಲೋಕ್ ಅದಾಲತ್ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್‌. ಸಂತೋಷ್‌ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಮುಂಬರುವ ತಿಂಗಳುಗಳಲ್ಲಿ ಸರಣಿ ಲೋಕ್ ಅದಾಲತ್ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಆ. 21 ರಿಂದ 23 ರಂದು ಸಮಾಧಾನ ಸಮಾರೋಹ ಎಂಬ ವಿಶೇಷ ಲೋಕ್ ಅದಾಲತ್ ನಡೆಯಲಿದೆ ಎಂದರು.

ಜಿಲ್ಲೆಯಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಬಹುಕಾಲದಿಂದ ಬಾಕಿ ಇರುವ 47 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಹೀಗೆ ಸುಪ್ರೀಂ ಕೋರ್ಟ್‌ನಲ್ಲಿ ಬಹುಕಾಲದಿಂದ ಬಾಕಿ ಇದ್ದು, ರಾಜೀ ಸಂಧಾನಕ್ಕೆ ಸಿದ್ದವಿರುವವರು ಈಗಲೂ ಸಹ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಸಮಾಧಾನ ಸಮಾರೋಹಕ್ಕೆ ಗುರುತಿಸಲಾದ ಪ್ರಕರಣಗಳಲ್ಲಿ ಪಕ್ಷಗಾರರಿಗೆ ನೋಟಿಸ್ ಹೊರಡಿಸಲಾಗುತ್ತದೆ. ನಿಗದಿತ ದಿನಾಂಕದಂದು ನುರಿತ ಮಧ್ಯಸ್ಥಗಾರರ ವಿಚಾರಣೆ ನಡೆದು, ಸುಪ್ರೀಂ ಕೋರ್ಟ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.

ಈ ರೀತಿಯ ವಿಲೇವಾರಿಯಿಂದ ಪಕ್ಷಗಾರರಿಗೆ ಯಾವುದೇ ಹಣ ವ್ಯಯ ಆಗುವುದಿಲ್ಲ. ಹಾಗೂ ಸಮಾಧಾನದ ನ್ಯಾಯ ಒದಗುತ್ತದೆ, ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಸಾರ್ವಜನಿಕರು ತಮ್ಮ ಪ್ರಕರಣಗಳ ಸುಲಭ ವಿಲೇವಾರಿಗಾಗಿ samadhansamaroh@gmail.com ಗೆ ಇಮೇಲ್ ಮಾಡುವ ಮೂಲಕ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸುವ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಹೇಳಿದರು.

ರಾಷ್ಟ್ರೀಯ ಲೋಕ್ ಅದಾಲತ್ : ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಜುಲೈ 11 ರಂದು ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಈ ವರ್ಷದ ಎರಡನೇ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ.

ವೈವಾಹಿಕ ವಿವಾದಗಳು ಹಾಗೂ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಅಪಘಾತ ಪರಿಹಾರ ಹಾಗೂ ವಿಮಾ ಪ್ರಕರಣಗಳು, ಸಿವಿಲ್ ವ್ಯಾಜ್ಯಗಳು, ಆಸ್ತಿ ವಿಭಾಗ ಹಾಗೂ ಭೂಸ್ವಾಧೀನ ಪ್ರಕರಣಗಳು, ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಹಾಗೂ ಗ್ರಾಹಕ ವೇದಿಕೆಯ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.

ಕಳೆದ ಮಾರ್ಚ್ 14 ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 14,501 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು 28.48 ಕೋಟಿ ರು.ಗೂ ಅಧಿಕ ಪರಿಹಾರವನ್ನು ವಿತರಿಸಲಾಗಿತ್ತು. ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ 2026 ಏಪ್ರಿಲ್‌ 30ರವರೆಗೆ ಒಟ್ಟು 7427 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದರು.

ಬಂಜಾರ ಸಮುದಾಯಕ್ಕೆ ವಿಶೇಷ ಶಿಬಿರ: ಶಿವಮೊಗ್ಗ ನಗರದ ಬಂಜಾರ ಸಮುದಾಯ ಭವನದಲ್ಲಿ ಮೇ 30 ರಂದು ಬಂಜಾರ ಸಮುದಾಯದವರಿಗಾಗಿ ವಿಶೇಷ ಕಾನೂನು ಅರಿವು ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದ್ದು, ಸಮುದಾಯಕ್ಕೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ಸ್ಥಳದಲ್ಲಿಯೇ ನೀಡಲಾಗುತ್ತಿದ್ದು ಸಮುದಾಯದವರು ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.

ಚೆಕ್‌ಬೌನ್ಸ್ ಪ್ರಕರಣ(ಎನ್.ಐ. ಆಕ್ಟ್) ಇತ್ಯರ್ಥಕ್ಕೆ ವಿಶೇಷ ಲೋಕ್ ಅದಾಲತ್: ಚೆಕ್ ಅಮಾನ್ಯ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಜುಲೈ 18 ಮತ್ತು ನವೆಂಬರ್ 21 ರಂದು ವಿಶೇಷ ಲೋಕ್ ಅದಾಲತ್‌ಗಳನ್ನು ಹಮ್ಮಿಕೊಳ್ಳಲಾಗಿದ್ದು, ಉಭಯ ಪಕ್ಷಗಾರರ ಉಪಸ್ಥಿತಿಯಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಿಕೇತರ ಸಂಧಾನಕಾರರು ರಾಜೀ ಸಂಧಾನದ ಪ್ರಕ್ರಿಯೆಯನ್ನು ಕೈಗೊಂಡು ಪಕ್ಷಗಾರರು ವಿವಾದವನ್ನು ಇತ್ಯರ್ಥಪಡಿಸಿ ಅದೇ ದಿನ ಅಂತಿಮ ಆದೇಶ ನೀಡಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೇರುಕುಪ್ಪೆ ಹಾಲು ಉತ್ಪಾದಕರ ಮಹಿಳಾ ಸಂಘ ಉದ್ಘಾಟನೆ
ಬೇಲೂರು ಪುರಸಭೆ ಅಧ್ಯಕ್ಷರಾಗಿ ಅಕ್ರಮ್ ಶರೀಫ್ ಆಯ್ಕೆ