- ಶರಣರ ಸಮ್ಮೇಳನ, ಧರ್ಮಸಭೆಯಲ್ಲಿ ಸಿರಿಗೆರೆ ಶ್ರೀ ಅಭಿಮತ
- - -ಹೊನ್ನಾಳಿ: ಜಗತ್ತಿನಲ್ಲಿ ಶಾಂತಿ, ನೆಮ್ಮದಿ ನೆಲಸಬೇಕೆಂದರೆ ಸಂಪೂರ್ಣವಾಗಿ ಭಯೋತ್ಪಾದನೆ, ಉಗ್ರಗಾಮಿತ್ವ ನಾಶವಾಗಬೇಕು. ಇಲ್ಲದಿದ್ದರೆ ಶಾಂತಿ ನೆಲಸಲು ಸಾಧ್ಯವಿಲ್ಲ ಎಂದು ತರಳಬಾಳು ಜಗದ್ಗುರು ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಶನಿವಾರ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಡಿ.ಜಿ. ವಿಶ್ವನಾಥ್ ಅವರ ತಂದೆ ದಿವಂಗತ ಡಿ.ಜಿ.ಚನ್ನವೀರಪ್ಪ ಅವರ ಕೈಲಾಸ ಶಿವಗಣಾರಾಧನೆ ಹಾಗೂ ಸರ್ವಶರಣರ ಸಮ್ಮೇಳನದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.ಭಾರತ ಯುದ್ಧ ಪಾಕಿಸ್ತಾನದ ವಿರುದ್ಧವಲ್ಲ. ಬದಲಿಗೆ ಅಮಾಯಕ ಜನರನ್ನು ವಿನಾಕಾರಣ ಕೊಲ್ಲುತ್ತಿರುವ ಉಗ್ರರ ವಿರುದ್ಧವಾಗಿದೆ. ಉಗ್ರರನ್ನು ಮಟ್ಟಹಾಕುತ್ತಿರುವ ಕ್ರಮದ ಹಿನ್ನೆಲೆ ಪಾಕಿಸ್ತಾನ ಜನತೆ ಭಾರತಕ್ಕೆ ಅಭಿನಂದನೆ ಸಲ್ಲಿಸಬೇಕು. ಜಗತ್ತಿನಲ್ಲಿ ಶಾಂತಿ ನೆಲಸಲು ಅಶಾಂತಿ ಕದಡುವ ಉಗ್ರರನ್ನು ಭಾರತ ನಿಗ್ರಹಿಸುತ್ತಿದೆ ಎಂದರು.
ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಕೇವಲ ತನ್ನ ಕುಟುಂಬಕ್ಕಾಗಿ ಬದುಕವವರು ಇದ್ದಾರೆ. ಕೆಲವರು ಕುಟುಂಬದೊಂದಿಗೆ ಸಮಾಜಕ್ಕಾಗಿ ಸಮಾಜಮುಖಿ ಕೆಲಸ ಮಾಡುವವರೂ ಇದ್ದಾರೆ. ಇಂತಹವರು ಅವರ ನಿಧನದ ನಂತರವೂ ಜನರ ಮನಸ್ಸಿನಲ್ಲಿ ಸದಾ ಜೀವಂತವಿರುತ್ತಾರೆ ಎಂದರು.ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ದಿವಂಗತ ಡಿ.ಜಿ. ಚನ್ನವೀರಪ್ಪ ಕಾಯಕಯೋಗಿ. ಜೊತೆಗೆ ಕೃಷಿಯನ್ನು ಬಹುವಾಗಿ ಪ್ರೀತಿಸುವ ಅಪರೂಪದ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದರು.
ಸಾಧು ವೀರಶೈವ ಸಮಾಜ ಸಿರಿಗೆರೆಯ ಅಧ್ಯಕ್ಷ ಎಚ್.ಆರ್ ಬಸವರಾಜಪ್ಪ, ಇತರರು ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ವಿಶ್ವನಾಥ್ ತಮ್ಮ ತಂದೆಯವರ ಬದುಕು ಮತ್ತು ಸಾಧನೆಗಳು ಕುರಿತು ಮಾತನಾಡಿದರು.ದರ್ಶನ್ ಬಳ್ಳೇಶ್ವರ ದಿ।। ಡಿ.ಜಿ. ಚನ್ನವೀರಪ್ಪ ಗೌರವಾರ್ಥ ನುಡಿನಮನ ಸಲ್ಲಿಸಿದರು. ಅಧ್ಯಕ್ಷತೆಯನ್ನು ಡಿ.ಜಿ. ಪರಮೇಶ್ವರಪ್ಪ ವಹಿಸಿದ್ದರು.
ಮಾಜಿ ಶಾಸಕ ಡಾ. ಡಿ.ಬಿ. ಗಂಗಪ್ಪ, ನ್ಯಾಮತಿ ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಶಿವಪ್ಪ, ಹೊನ್ನಾಳಿ ತಾಲೂಕು ಅಧ್ಯಕ್ಷ ಎಚ್.ಎ.ಗದ್ದಿಗೇಶ್, ಡಿ.ಜಿ. ಬಸವರಾಜ್, ಪ್ರದೀಪ್ ಗೌಡ, ಹಲವಾರು ಗಣ್ಯರು ಭಾಗವಹಿಸಿದ್ದರು. ಅನ್ನ ಸಂತರ್ಪಣೆ ನಡೆಯಿತು.- - -
-10ಎಚ್.ಎಲ್.ಐ1: ಹೊನ್ನಾಳಿ ತಾಲೂಕಿನ ದೊಡ್ಡೇರಿಯಲ್ಲಿ ಶನಿವಾರ ಸರ್ವಶರಣರ ಸಮ್ಮೇಳನದ ಧರ್ಮ ಸಭೆಯಲ್ಲಿ ಸಿರಿಗೆರೆ ಜಗದ್ಗುರು ಡಾ.ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.