ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಳೆದ 6 ತಿಂಗಳ ಹಿಂದೆ ದೇವಾಲಯದ ಮುಂಭಾಗದ ಕಾಂಪೌಂಡ್ ಗೇಟ್ ಶಿಥಿಲಗೊಂಡು ಗೇಟು ಮುರಿದು ಬಿದ್ದು ಒಂದು ಮಗು ಸಾವನ್ನಪ್ಪಿ ಗ್ರಾಮದಲ್ಲಿ ಮನಸ್ತಾಪ ಉಂಟಾಗಿದ್ದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮೂಲಕ ತಾಲೂಕು ಆಡಳಿತ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿತು.
ಗ್ರಾಮದಲ್ಲಿ ದೇವರ ಪೂಜೆಗಳಿಗೆ ಪ್ರವೇಶ ಕಲ್ಪಿಸಿಕೊಡುವುದು ಮತ್ತು ಹಬ್ಬ ಹರಿದಿನದ ಪೂಜೆ ಪುರಸ್ಕಾರಗಳಲ್ಲಿ ವಾರ್ಷಿಕವಾಗಿ ನಡೆಯುವ ದೇವರ ಮೆರವಣಿಗೆ, ಉತ್ಸವಗಳಲ್ಲಿ ತಾರತಮ್ಯ ರಹಿತ ಮುಕ್ತವಾಗಿ ಎಲ್ಲರೊಂದಿಗೆ ಪಾಲ್ಗೊಳ್ಳಲು ಸಮಾನ ಅವಕಾಶ ಒದಗಿಸಿಕೊಡುವಂತೆ ತಾಲೂಕು ಕಚೇರಿಗೆ ಅರ್ಜಿ ಬಂದಿತ್ತು.ಈ ಹಿನ್ನೆಲೆಯಲ್ಲಿ ಗ್ರಾಮದ ದೇವಾಲಯದ ಬಳಿ ತಹಸೀಲ್ದಾರ್ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಗ್ರಾಮದ ಎಲ್ಲಾ ಜಾತಿ, ಜನಾಂಗ, ಸಮುದಾಯದ ಯಜಮಾನರು ಮತ್ತು ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿದರು.
ತಮ್ಮ ನಡುವಿನ ಎಲ್ಲಾ ಮನಸ್ತಾಪಗಳನ್ನು ಮರೆತು ಪರಿಶಿಷ್ಟ ಜಾತಿ/ಜನಾಂಗದವರು ಸೇರಿದಂತೆ ಎಲ್ಲಾ ಸಮುದಾಯದವರು ಭ್ರಾತೃತ್ವ ಭಾವನೆಯಿಂದ ಒಟ್ಟಾಗಿ ಸೇರಿ ದೇವರ ಉತ್ಸವವನ್ನು ಆಚರಿಸಬೇಕೆಂದು ತಿಳಿವಳಿಕೆ, ಸಲಹೆಗಳನ್ನು ನೀಡಿದರು.ಜೊತೆಗೆ ಗ್ರಾಮದ ಪರಿಶಿಷ್ಟ ಜಾತಿ ಜನಾಂಗದ ಜೊತೆಗೂಡಿ ದೇವಾಲಯಕ್ಕೆ ಮುಕ್ತವಾಗಿ ಪ್ರವೇಶಿಸಿ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಗೆ ಭೇಟಿ ನೀಡಿ ಕುಂದುಕೊರತೆಗಳನ್ನು ವಿಚಾರಿಸಿದರು. ದೇವಸ್ಥಾನ ಮುಂಭಾಗದ ಶಿಥಿಲಗೊಂಡ ಗೇಟು ಮುರಿದು ಬಿದ್ದು ಸಾವನ್ನಪ್ಪಿದ ಮಗುವಿನ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನವನ್ನು ಹೇಳಿದರು.
ಸಭೆಯಲ್ಲಿ ಗ್ರಾಮದ ಎಲ್ಲಾ ಮುಖಂಡರು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.---------
31ಕೆಎಂಎನ್ ಡಿ34ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆ ಗ್ರಾಮದಲ್ಲಿ ತಹಸೀಲ್ದಾರ್ ಪರುಶುರಾಮ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.