ಸಂಸ್ಕಾರಯುಕ್ತ ಶಿಕ್ಷಣದಿಂದ ನೆಮ್ಮದಿ ಸಾಧ್ಯ

KannadaprabhaNewsNetwork |  
Published : Oct 06, 2024, 01:20 AM IST
ಸಸಸಸಸಸ | Kannada Prabha

ಸಾರಾಂಶ

ನಾವು ಶಿವನ ಆರಾಧಕರಾಗಿದ್ದೇವೆ. ಎಲ್ಲರನ್ನು ಸಮಾನವಾಗಿ ಕಾಣುವಂತ ಶಿವನ ಭಕ್ತರು ನಾವೇಲ್ಲ ಎನ್ನುವುದು ಹೆಮ್ಮೆ ಪಡುವ ವಿಷಯವಾಗಿದೆ

ಗದಗ: ಸಮಾಜಕ್ಕೆ ಇಂದು ಬೇಕಾಗಿರುವ ವಿವಿಗಳು ಕೊಡುವ ಡಿಗ್ರಿಗಳಲ್ಲ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ, ಯುವ ಸಮುದಾಯಕ್ಕೆ ದೊರೆಯುವ ಸಂಸ್ಕಾರಯುಕ್ತ ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ನೆಮ್ಮದಿ ಸಾಧ್ಯ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

ಅವರು ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 3ನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರು ಎನ್ನುವ ಇಂಗ್ಲಿಷ್‌ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಇಂದು ವಿಶ್ವ ವಿದ್ಯಾಲಯಗಳಲ್ಲಿ ಕಲಿಯುವ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಅಂಕಗಳು ಸಿಗುತ್ತವೆ, ಆದರೆ ಬದುಕಿನ ಮೌಲ್ಯಗಳ ಬಗ್ಗೆ ಯುವಕರು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಯಾವ ರೀತಿಯಲ್ಲಿ ಸಮಾಜದೊಂದಿಗೆ ಬೆರೆತು ಬಾಳಬೇಕು, ಸಹೋದರತ್ವದಿಂದ ನಡೆಯಬೇಕು, ಸಮಾಜದಲ್ಲಿರುವ ಪ್ರತಿಯೊಬ್ಬರ ಬದುಕಿನಲ್ಲಿ ಶಾಂತಿ ಹೇಗೆ ಕಾಪಾಡಬೇಕು, ಅದರಲ್ಲಿ ನನ್ನ ಪಾತ್ರವೇನು ಎನ್ನುವ ವಿಷಯಗಳು ಯುನಿವರ್ಸಿಟಿ ಡಿಗ್ರಿಗಳಲ್ಲಿ ಸಿಗುವುದಿಲ್ಲ. ಇದನ್ನೆಲ್ಲ ಸಮಾಜದಲ್ಲಿನ ಯುವಕರಿಗೆ ತಿಳಿಸಬೇಕು ಎನ್ನುವುದೇ ರಂಭಾಪುರಿ ಶ್ರೀಗಳ ಉದ್ದೇಶವಾಗಿದೆ. ಅದನ್ನು ಈ ರೀತಿಯ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಜಾೃಗತಗೊಳಿಸುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ನೆಲಸಬೇಕು ಎನ್ನುವುದು ಶ್ರೀಗಳ ಆಶಯವಾಗಿದೆ ಎಂದರು.

ನಾನು ಕೂಡಾ ಶೈವ ಸಂಸ್ಕೃತಿ ಮೈಗೂಡಿಸಿಕೊಂಡಿದ್ದು, ನಾವು ಶಿವನ ಆರಾಧಕರಾಗಿದ್ದೇವೆ. ಎಲ್ಲರನ್ನು ಸಮಾನವಾಗಿ ಕಾಣುವಂತ ಶಿವನ ಭಕ್ತರು ನಾವೇಲ್ಲ ಎನ್ನುವುದು ಹೆಮ್ಮೆ ಪಡುವ ವಿಷಯವಾಗಿದೆ. ಇದನ್ನೇ ನಮ್ಮ ಸಂವಿಧಾನದಲ್ಲಿ ಬರೆದಿದ್ದಾರೆ. ಸಮಾನತೆ ಪ್ರತಿಪಾದಿಸಿದ್ದಾರೆ. ನಾವು ಸಮಾನರಾಗಿರಬೇಕಿದೆ. ಭಾತೃತ್ವದಿಂದ ಇರಬೇಕು ಎಂದು ತಿಳಿಸಿದ್ದಾರೆ. ಅದನ್ನು ಸಮಾಜದಲ್ಲಿ ಜಾಗೃತಗೊಳಿಸಿ ಜನರಲ್ಲಿ ಸಹೋದರತ್ವದ ಭಾವನೆ ಮೂಡಿಸುವಲ್ಲಿ ನಾಡಿನ ಧರ್ಮಗುರುಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಕಳೆದ 32 ವರ್ಷಗಳಿಂದ ರಂಭಾಪುರಿ ಶ್ರೀಗಳು ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಆಯೋಜನೆ ಮಾಡುತ್ತಾ ಬಂದಿದ್ದು, ಹಲವಾರು ಬಾರಿ ನನಗೆ ಆಹ್ವಾನ ನೀಡಿದ್ದರು. ಬರಲು ಆಗಿರಲಿಲ್ಲ, ಈ ಬಾರಿ ಹೆಚ್ಚಿನ ಉತ್ಸಾಹದಿಂದ ಪಾಲ್ಗೊಂಡಿದ್ದು ಹೆಮ್ಮೆ ತಂದಿದೆ. ನಾವು ಚಾಮುಂಡೇಶ್ವರಿ ಎಂದು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಹೆಸರುಗಳಲ್ಲಿ ಆರಾಧಿಸುವ ದೇವಿಯು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ