ಕನ್ನಡಪ್ರಭ ವಾರ್ತೆ ನವಲಗುಂದ
44ನೇ ರೈತ ಹುತಾತ್ಮ ದಿನಾಚರಣೆ ನಿಮಿತ್ತ ಇಲ್ಲಿಯ ಲಿಂಗರಾಜ ವೃತ್ತ, ರೈತ ಭವನದ ಪಕ್ಕದಲ್ಲಿರುವ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಭಾನುವಾರ ಮಾಲಾರ್ಪಣೆ ಮಾಡಿದ ವಿವಿಧ ರೈತಪರ ಸಂಘಟನೆಗಳ ಮುಖಂಡರು ಮಹದಾಯಿ ಯೋಜನೆ ಜಾರಿ ಮಾಡದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡೆ ತೀವ್ರವಾಗಿ ಖಂಡಿಸಿದರು.ಯೋಜನೆ ಹೆಸರಿನಲ್ಲಿ ರಾಜಕೀಯ ಪಕ್ಷಗಳು, ಕೇಂದ್ರ, ರಾಜ್ಯ ಸರ್ಕಾರಗಳು ಬರೀ ರಾಜಕೀಯವನ್ನೇ ಮಾಡಿವೆಯೇ ಹೊರತು ಈ ಭಾಗದ ರೈತ ಪ್ರಮುಖ ಬೇಡಿಕೆ ಮಹದಾಯಿ ಯೋಜನೆ ಜಾರಿಗೊಳಿಸುವ ಇಚ್ಛಾಶಕ್ತಿ ತೋರುತ್ತಿಲ್ಲ. ರೈತರು ರೊಚ್ಚಿಗೇಳುವ ಮುಂಚೆಯೇ ಉಭಯ ಸರ್ಕಾರಗಳು ಯೋಜನೆಗೆ ಚಾಲನೆ ನೀಡಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ರೈತಾಪಿ ಕುಲವು ರವಾನಿಸಿತು.
ಪಟ್ಟಣದ ಗಣಪತಿ ಗುಡಿ ದೇವಸ್ಥಾನದಿಂದ ಚಕ್ಕಡಿ, ಡೊಳ್ಳುಗಳ ಮೆರವಣಿಗೆಯ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತ ಮುಖಂಡರು, ಮಹದಾಯಿ ಜಾರಿಯಾಗಲಿ, ಜೀವ ಹೋಗುವ ಮುನ್ನವೇ ಮಹದಾಯಿ ನೀರು ಕುಡಿದೇ ಪ್ರಾಣ ಬಿಡುತ್ತೇವೆ ಎಂಬ ಘೋಷಣೆಗಳ ಮುಖಾಂತರ ವಿವಿಧ ರೈತ ಪರ ಹಾಗೂ ಕನ್ನಡ ಪರ ಸಂಘಟನೆಗಳಿಂದ ರೈತ ಹುತಾತ್ಮ ವೀರಗಲ್ಲಿಗೆ ಮಲಾರ್ಪಣೆ ಮಾಡಿದರು.ಮಹದಾಯಿ-ಕಳಸಾ ಬಂಡೂರಿ ರೈತ ಹೋರಾಟ ಪಕ್ಷಾತೀತ ಸಮಿತಿ, ಅಸಂಘಟಿತ ಮತ್ತು ಕಾರ್ಮಿಕ ರೈತ ಹೋರಾಟ ಒಕ್ಕೂಟ ಸಮಿತಿ, ರೈತ ಸೇನಾ ಕರ್ನಾಟಕ, ಕರ್ನಾಟಕ ರಾಜ್ಯ ರೈತ ಸಂಘ, ಅಖಿಲ ಕರ್ನಾಟಕ ರೈತ ಹೋರಾಟ ಸಮಿತಿ, ಕರ್ನಾಟಕ ರೈತ ಸೇನಾ, ಸಿ.ಐ.ಟಿ.ಯು. ಹಸಿರು ಸೇನಾ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಕರುನಾಡ ವಿಜಯಸೇನೆ, ರಾಜಕುಮಾರ ಅಭಿಮಾನಿ ಬಳಗ, ವಿಷ್ಣುವರ್ಧನ ಅಭಿಮಾನಿ ಬಳಗ ಹಾಗೂ ಶಂಕರನಾಗ ಆಟೋ ಚಾಲಕ ಸಂಘ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
3ನೇ ಬಾರಿ ರಕ್ತದಲ್ಲಿ ಪತ್ರಯುವ ರೈತ ಹೋರಾಟಗಾರ ಮೈಲಾರೆಪ್ಪ ವೈದ್ಯ ಅವರು ರೈತ ಭವನ ವೇದಿಕೆಯ ಸ್ಥಳದಲ್ಲಿ ಕಳಸಾ ಬಂಡೂರಿ ತಿರುವು ಯೋಜನೆಯನ್ನು ಆದಷ್ಟು ಬೇಗ ರಾಜ್ಯ ಮತ್ತು ಕೇಂದ್ರ ಸರ್ಕರಗಳು ಜಾರಿಗೊಳಿಸಬೇಕು ಎಂದು ರಕ್ತದಲ್ಲಿ ಪತ್ರ ಬರೆದು ಆಗ್ರಹಿಸಿದರು. ಕಳೆದ ಮೂರು ವರ್ಷಗಳಿಂದ ರಕ್ತದಲ್ಲಿ ಪತ್ರ ಬರೆದರೂ ರೈತರ ರಕ್ತಕ್ಕೆ ಬೆಲೆ ಇಲ್ಲದಾಗಿದೆ. ರೈತ ಒಂದು ಹನಿ ರಕ್ತ ಹಾಗೂ ಬೆವರು ದೇಶಕ್ಕೆ ಅನ್ನ ನೀಡುವ ಶಕ್ತಿ ಹೊಂದಿದೆ. ಸರ್ಕಾರಗಳು ರೈತರನ್ನು ಆತನ ರಕ್ತ, ಬೆವರನ್ನು ಕಡೆಗಣಿಸಬಾರದು. ಮಹದಾಯಿ ಯೋಜನೆಗೆ ತಾರ್ಕಿಕ ಅಂತ್ಯ ಸಿಗುವ ವರೆಗೂ ಛಲ ಬಿಡದೇ ರೈತರು ಹೋರಾಡುತ್ತೇವೆ ಎಂದ ಮೈಲಾರಪ್ಪ, ತಹಸೀಲ್ದಾರ್ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ರಕ್ತದಲ್ಲಿ ಬರೆದ ಪತ್ರವನ್ನು ಅರ್ಪಿಸಿದರು.
ಈ ವೇಳೆ ಮಾತನಾಡಿದ ರೈತ ಸೇನೆ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ರೈತರನ್ನು ಹಾಗೂ ಮಹದಾಯಿ ಯೋಜನೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಸಮಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿವೆ. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ರೈತ ಕುಲವು ತಕ್ಕ ಉತ್ತರ ನೀಡಿದೆ. ಮುಂದಿನ ದಿನಮಾನಗಳಲ್ಲಿ ಮಹದಾಯಿ ಹೆಸರನ್ನು ಇಟ್ಟುಕೊಂಡು ರಾಜಕಾರಣ ಮಾಡುವವರಿಗೆ ತಕ್ಕ ಪಾಠ ಕಲಿಸಿವೆ. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಈಗಲೂ ರೈತರ ಕಡೆಗೆ ಗಮನ ಹರಿಸದಿದ್ದರೆ, ಮುಂದೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಕಳಸಾ ಬಂಡೂರಿ ನೀರು ಬಂದರೆ ಆಗ ಹುತಾತ್ಮರಾದ ರೈತರ ಆತ್ಮಕ್ಕೆ ಶಾಂತಿ ಸಿಗಲಿದೆ. ಈಗಲಾದರೂ ಜನ ಪ್ರತಿನಿಧಿಗಳು ಇದನ್ನು ಅರಿಯಬೇಕು ಎಂದರು.ಪರಿಸರವಾದಿ, ಚಿತ್ರನಟ ಸುರೇಶ ಹೆಬಳೀಕರ, ರೈತನಿಗೆ ಅವಶ್ಯವಿರುವ ಬೇಡಿಕೆ ನೀರು. ಆ ನೀರನ್ನು ಕೊಡಲು ಏಕೆ ಮೀನಾಮೇಷ ಏಕೆ. ನೆಲ, ಜಲ, ಭಾಷೆ ಹಾಗೂ ನೀರಿನ ಬಗ್ಗೆ ಸಾಕಷ್ಟು ಅಭಿಯಾನಗಳೇ ನಡೆದಿವೆ. ಮಹದಾಯಿ ನದಿ ನೀರನ್ನು ಮಲಪ್ರಭಾ ಜೋಡಣೆಗೆ ಇಲ್ಲಿಯ ಭಾಗದ ಸಾವಿರಾರು ಹಕ್ಟೇರ್ ಪ್ರದೇಶದ ರೈತರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗುತ್ತದೆ. ಕುಡಿಯಲು ನೀರಿಗೂ ಬರ ಬಾರದು. ವೈಜ್ಞಾನಿಕವಾಗಿ ಪರಿಶೀಲಿಸಿ ಈ ಭಾಗದ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದರು.
ತದನಂತರ ಮಾತನಾಡಿದ ಮೇಲುಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ, ಸರ್ಕಾರಗಳು ರೈತರ ಪರವಾಗಿ ಹೆಚ್ಚು ಗಮನ ಹರಿಸಬೇಕಾಗಿದೆ. ಈ ಭಾಗದಲ್ಲಿ ಪ್ರಮುಖ ರೈತರ ಬೇಡಿಕೆ ಮಹದಾಯಿ ಸಮಸ್ಯೆ, ಬೆಳೆ ಪರಿಹಾರ ಹಾಗೂ ಮಳೆ ಹೆಚ್ಚು ಮತ್ತು ಕಡಿಮೆಯಾದರೂ ರೈತನಿಗೆ ಹಾನಿ ಇವೆಲ್ಲವುಗಳನ್ನು ಗಣನೆಗೆ ತೆಗೆದುಕೊಂಡು ಸರ್ಕಾರ ಮುನ್ನಚ್ಚರಿಕೆ ವಹಿಸಿ ರೈತರ ಜೀವನವನ್ನು ಗಟ್ಟಿಗೊಳಿಸಲು ಮತ್ತು ಬೆಳೆಗಳಿಗೆ ಪರಿಹಾರ ಕೊಟ್ಟು ಸಹಕಾರ ನೀಡಬೇಕು ಎಂದು ಹೇಳಿದರು.ರೈತ ಮುಖಂಡರಾದ ಸುಭಾಸಚಂದ್ರಗೌಡ ಪಾಟೀಲ, ಶಿವಪ್ಪ ಸಂಗಳದ, ಮಹಾದೇವಿ ಕೊಂಡೂರ, ಸಿದ್ದಣ್ಣ ತೇಜಿ, ನಾಗಪ್ಪ ಉಂಡಿ, ನಾರಾಯಣ ಆರೇರ, ರವಿ ಕಂಬಳಿ, ಶಂಕರ ಅಂಬ್ಲಿ, ಶಂಕ್ರಮ್ಮ ತಿರಕಣ್ಣವರ, ಗಂಗವ್ವ ಎಣ್ಣಿ, ಹನಮಂತಪ್ಪ, ಮಾಬುಸಾಬ ಯರಗುಪ್ಪಿ, ಚಂದ್ರಶೇಖರ, ಸುರೇಶ ಅರಕೇರಿ, ಕುಮಾರ ಲಕ್ಕಮ್ಮನವರ, ಅರುಣ ಸುಣಗಾರ, ಶಿವು ಗುಡಲಸಮನಿ, ವಿಠ್ಠಲ ಯಾವಗಲ್, ಶರಣಪ್ಪ ದೊಡ್ಡಮನಿ, ಬಿಜೆಪಿ ಮುಖಂಡರಾದ ಎಸ್.ಬಿ. ದಾನಪ್ಪಗೌಡರ, ರಾಯನಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ಬಸವರಾಜ ಕುಂದಗೋಳಮಠ, ವಿನಾಯಕ ದಾಡಿಭಾವಿ, ಬಸವರಾಜ ಕಾತರಕಿ, ಜೆಡಿಎಸ ಮುಖಂಡರಾದ ಪ್ರಕಾಶ ಅಂಗಡಿ ಇದ್ದರು.