ಶಿರಹಟ್ಟಿ: ಜನರು ಶಾಂತಿ ಮತ್ತು ನೆಮ್ಮದಿಯಿಂದ ಜೀವನ ಸಾಗಿಸಲು ಇರುವ ಕಾನೂನು ಪಾಲನೆ ಮಾಡುವ ಕಡೆ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಗಮನ ನೀಡಬೇಕು ಎಂದು ಶಿರಹಟ್ಟಿ ಪೊಲೀಸ್ ಠಾಣೆ ಪಿಎಸ್‌ಐ ಈರಪ್ಪ ರಿತ್ತಿ ತಿಳಿಸಿದರು.
ಪಟ್ಟಣದ ಎಫ್.ಎಂ. ಡಬಾಲಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶಿರಹಟ್ಟಿ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ನಿಮಿತ್ತ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲಾ ಕಾಲೇಜು ಹಂತದಲ್ಲಿ ಯುವ ಸಮೂಹ ಹೆಜ್ಜೆ ತಪ್ಪುವುದು ಸಹಜ. ಕಾರಣ ಕಾನೂನುಗಳ ಮಾಹಿತಿ ತಿಳಿದುಕೊಂಡು ಸಮಾಜದಲ್ಲಿ ನಡೆಯುವ ಸಮಾಜ ವಿರೋಧಿ ಕೃತ್ಯಗಳ ಬಗ್ಗೆ ತಿಳಿಸಬೇಕು ಎಂದರು.ಕೇವಲ ಪೊಲೀಸ್‌ರಿಂದ ಅಪರಾಧ ತಡೆ ಸಾಧ್ಯವಿಲ್ಲ. ಇದಕ್ಕೆ ನಿಮ್ಮೆಲ್ಲರ ಸಹಕಾರವೂ ಮುಖ್ಯವಾಗಿರುತ್ತದೆ. ಅಪರಾಧವನ್ನು ಕಂಡ ಸಂದರ್ಭದಲ್ಲಿ ಧೈರ್ಯವಾಗಿ ಮುಂದೆ ಬಂದು ಸಾಕ್ಷಿ ಹೇಳಬೇಕು. ಹೀಗಾಗದಿದ್ದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ತಪ್ಪಿತಸ್ಥರು ತಪ್ಪಿಸಿಕೊಂಡು ಮತ್ತೆ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಯುವಜನರು ಪೊಲೀಸರಿಗೆ ಸಹಕಾರ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಮಾಜ ಸುಸ್ಥಿರವಾಗಿ ನೆಲೆಗೊಳ್ಳಬೇಕಾದರೆ ಅಪರಾಧಗಳನ್ನು ತಡೆಗಟ್ಟುವಲ್ಲಿ ನಾವೆಲ್ಲರೂ ಜಾಗೃತರಾಗಬೇಕು. ನಮ್ಮ ರಕ್ಷಣೆ ನಮ್ಮ ಹೊಣೆ, ಯುವ ಜನಾಂಗದಲ್ಲಿ ಸರಿಯಾದ ತಿಳುವಳಿಕೆ ಇಲ್ಲದೆ ಎಷ್ಟೋ ಸಮಾಜದಲ್ಲಿ ಅಪರಾಧ ಕೃತ್ಯಗಳು ನಡೆಯುತ್ತಿವೆ. ನಮ್ಮ ಸುತ್ತಲೂ ಯಾವೆಲ್ಲ ರೀತಿಯಲ್ಲಿ ನಮಗರಿವಿಲ್ಲದಂತೆ ಅಪರಾಧ ಕೃತ್ಯಗಳು ಜರುಗುತ್ತವೆ ಎನ್ನುವ ಜಾಗೃತಿ ಇಂದಿನ ವಿದ್ಯಾರ್ಥಿಗಳು ಮನಗಾಣಬೇಕು. ೧೮ ವರ್ಷದ ಒಳಗಿನ ಮಕ್ಕಳು ಅದೆಷ್ಟೋ ಬಾರಿ ಇನ್ನೊಬ್ಬರ ಪ್ರೇರಣೆಯಿಂದ ಕೆಟ್ಟ ಕೃತ್ಯಗಳಲ್ಲಿ ತೊಡಗುತ್ತಾರೆ ಇಂತಹ ಅಹಿತಕರ ಘಟನೆಗಳು ಸಮಾಜದಲ್ಲಿ ನಡೆಯದಂತೆ ಇಂದಿನ ಯುವ ಪೀಳಿಗೆ ಸಕಾರಾತ್ಮಕ ಚಿಂತನೆಯಿಂದ ಸಮಾಜದ ಸುಸ್ಥಿರವನ್ನು ಕಾಪಾಡಬೇಕು. ಸಾರ್ವಜನಿಕ ಹಿತಾಸಕ್ತಿಗಾಗಿ ಎಂದಿಗೂ ನಮ್ಮ ಪೊಲೀಸ್ ಇಲಾಖೆ ಸೇವೆ ಸಲ್ಲಿಸುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಪನ್ಯಾಸಕ ಎನ್. ಹನಮರಡ್ಡಿ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಅಪರಾಧಗಳು ಜರುಗದಂತೆ ಎಚ್ಚರಿಕೆ ವಹಿಸಬೇಕು ಜೊತೆಗೆ ಜವಾಬ್ದಾರಿಯುತ ನಾಗರಿಕರಾಗಿ ಎಚ್ಚರಿಕೆಯಿಂದ ಕಾರ್ಯಪ್ರವೃತ್ತರಾಗಿ ಹೆತ್ತ ತಂದೆ ತಾಯಿಗೆ ಋಣಿಯಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಎಮ್.ಎಚ್. ಹನುಮಸಾಗರ, ಮಹಾದೇವಪ್ಪ ಲಮಾಣಿ, ಕಾಲೇಜಿನ ಉಪನ್ಯಾಸಕರಾದ ವಾಯ್.ಎಸ್. ಪಂಗಣ್ಣವರ, ಪಿ.ಎನ್. ಕುಲಕರ್ಣಿ, ಸುಧಾ ಎಸ್. ಹುಚ್ಚಣ್ಣವರ, ಎಫ್.ಎ. ಬಾಬುಖಾನವರ, ಬಸವರಾಜ್ ಶಿರುಂದ್, ಶಿಕ್ಷಕರಾದ ಸುನಿಲ್ ಲಮಾಣಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೈಹಿಕ ಉಪನ್ಯಾಸಕರಾದ ಎಂ.ಕೆ. ಲಮಾಣಿ ಅವರು ನಿರೂಪಿಸಿದರು.