ಮೈಸೂರು: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಏಳು ತಿಂಗಳ ವೇತನ ನೀಡಲು ಆಗ್ರಹಿಸಿ ಕರ್ನಾಟಕ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದವರು ಜಿಪಂ ಕಚೇರಿ ಮುಂಭಾಗದಲ್ಲಿ ಸೋಮವಾರ ಶಾಂತಿಯುತವಾಗಿ ಪ್ರತಿಭಟಿಸಿದರು.
ವೇತನ ಸ್ಥಗಿತಗೊಂಡಿರುವುದರಿಂದ ನೌಕರರು ಸಾಲ ಮಾಡಿ ಜೀವನ ಸಾಗಿಸುವಂತಾಗಿದೆ. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಹಂತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ವೇತನವಿಲ್ಲದೆ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಮಕ್ಕಳ ಶಾಲಾ ಪ್ರಾವೇಶಾತಿ ಶುಲ್ಕ, ವಯಸ್ಸಾದ ತಂದೆ- ತಾಯಿಗಳ ಆರೋಗ್ಯ ಸಮಸ್ಯೆಗೆ ಆಸ್ಪತ್ರೆ ವೆಚ್ಚ, ದಿನನಿತ್ಯ ಖರ್ಚುಗಳನ್ನು ನಿಭಾಯಿಸುವುದು ಸವಾಲಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರತಿಭಟನಾಕಾರರ ಮನವಿಯನ್ನು ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್ ಸ್ವೀಕರಿಸಿದರು. ನರೇಗಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ಲೋಕೇಶ್, ಜಿಪಂ ಎಡಿಪಿಸಿ, ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು, ಎಂಐಎಸ್ ಸಂಯೋಜಕರು, ತಾಂತ್ರಿಕ ಸಹಾಯಕ ಎಂಜಿನಿಯರ್ ಗಳು, ಲೆಕ್ಕ ಸಹಾಯಕರು, ಬಿ.ಎಫ್.ಟಿ, ಗ್ರಾಮ ಕಾಯಕ ಮಿತ್ರರು, ಕಂಪ್ಯೂಟರ್ ಆಪರೇಟರ್ ಹಾಗೂ ನರೇಗಾ ನೌಕರರು ಇದ್ದರು.