-ಶಿವಮೊಗ್ಗದ ಪೆಸಿಟ್ ಕಾಲೇಜಿನ ಪ್ರೇರಣ ಸಭಾಂಗಣದಲ್ಲಿ ಮಾಮ್‌ಕೋಸ್‌ನಿಂದ 86ನೇ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟನೆ
---
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಳೆದ ಐದು ವರ್ಷದಲ್ಲಿ ದೇಶದ ಜಿಎಸ್‌ಟಿಗೆ ₹19,220 ಕೋಟಿ ಅಡಕೆಯಿಂದ ಬಂದಿದೆ. ರಾಜ್ಯ ಶೇ.75 ರಷ್ಟು ಅಡಕೆ ಜಿಎಸ್‌ಟಿ ಕಟ್ಟಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಪೆಸಿಟ್ ಕಾಲೇಜಿನ ಪ್ರೇರಣ ಸಭಾಂಗಣದಲ್ಲಿ ಮಾಮ್‌ಕೋಸ್ ವತಿಯಿಂದ ಹಮ್ಮಿಕೊಂಡಿದ್ದ 86ನೇ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಡಕೆ ಪ್ರದೇಶದಲ್ಲಿ ರಾಜ್ಯ 71.6 ಪಾಲು ಹೊಂದಿದೆ. ಅಡಕೆ ಬೆಳೆಯಲ್ಲಿ ರಾಜ್ಯದ ಪಾಲು ಇಷ್ಟು ಇರಲು ಎಲ್ಲ ರೈತರು ಕಾರಣ. ಆದರೆ, ಇತ್ತೀಚೆಗೆ ಇಳುವರಿ ಕುಸಿತವಾಗುತ್ತಿದ್ದು, ರಾಜ್ಯದಲ್ಲಿ ಶೇ. 34 ಕುಸಿತವಾಗಿದೆ ಎಂದು ತಿಳಿಸಿದರು.
ದೇಶ ಎಷ್ಟೆ ಎತ್ತರಕ್ಕೆ ಬೆಳೆದರೂ, ವಿಜ್ಞಾನ ಎಷ್ಟೆ ಮುಂದುವರೆದರೂ ರೈತರು ಬೆಳೆ ಬೆಳೆಯದಿದ್ದರೆ ಸಮಸ್ಯೆ ಆಗುತ್ತದೆ. ಈ ಬಾರಿಯ ಅಧಿವೇಶನದ ಸಮಯದಲ್ಲಿ ಅಡಕೆ ತೇವಾಂಶವನ್ನು ಶೇ.11ಕ್ಕೆ ಇರಿಸಲು ಮನವಿ ಮಾಡಿದ್ದೆವು. ಅದಕ್ಕೆ ಪ್ರತಿಫಲ ಸಿಕ್ಕಿದೆ. ಅಡಕೆ ಕೊಯ್ಲಿಗೆ ಬೇಕಾದ ಯಂತ್ರಗಳಿಗೆ ₹4 ಸಾವಿರ ಮಾತ್ರ ಸಿಗುತ್ತಿತ್ತು. ಅಡಕೆ ಟೆಲಿಸ್ಕೋಪಿಕ್ ದೋಟಿಗೆ ಸಹಾಯಧನ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಮಾಹಿತಿ ನೀಡಿದರು.
1939ರಲ್ಲಿ ಪ್ರಾರಂಭವಾದ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಕಾರಣರಾದ ಎಲ್ಲ ರೈತರು, ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶತಮಾನೋತ್ಸವದ ಹೊಸ್ತಿಲಿನಲ್ಲಿದೆ. ಪ್ರತಿವರ್ಷ ಸಭೆ ನಡೆಸುವ ಮೂಲಕ ಸಂಸ್ಥೆಯ ಪ್ರಗತಿ ಬಗ್ಗೆ ತಿಳಿಸುತ್ತೇವೆ. ಮಾಮ್ಕೊಸ್ ಸಂಸ್ಥೆ ಸುಧೀರ್ಘವಾಗಿ ನಡೆದು ಬಂದಿದೆ. ಆರೂವರೆ ಕೋಟಿ ರು. ಗೂ ಹೆಚ್ಚು ಲಾಭ ಮಾಡಿದೆ. ಈಗಾಗಲೆ ನಾಲ್ಕು ಲಕ್ಷ ಕೋಟಿಗೂ ಹೆಚ್ಚು ಮೂಟೆ ಬಂದಿದೆ. ಕಳೆದ 25 ವರ್ಷಗಳಿಂದ ಆಡಿಟ್‌ನಲ್ಲಿ ಎ ಗ್ರೇಡ್ ಪಡೆಯುತ್ತಾ ಬಂದಿದೆ ಎಂದು ತಿಳಿಸಿದರು.
ಮಾಮ್ಕೊಸ್ ಅಧ್ಯಕ್ಷ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ''''ಗುಂಪು ವಿಮೆ'''' ಯೋಜನೆಯಡಿ 2025-26ನೇ ಸಾಲಿನಲ್ಲಿ 15,501 ಸದಸ್ಯರು, 15,557 ಕೂಲಿ ಕಾರ್ಮಿಕರು ಮತ್ತು 344 ಕುಟುಂಬದ ಸದಸ್ಯರು ಸೇರಿದಂತೆ ಒಟ್ಟು 31,402 ನೋಂದಣಿಯಾಗಿದ್ದು, ಈ ಸಾಲಿನಲ್ಲಿ ಸದಸ್ಯರ ಹಿತದೃಷ್ಟಿಯಿಂದ ಗುಂಪು ವಿಮಾ ಅಭಿರಕ್ಷೆ ಯೋಜನೆ ಅಡಿ 70 ವರ್ಷದೊಳಗಿನ ಸದಸ್ಯರು ಅಥವಾ ಅವರ ಅವಲಂಬಿತ ಕೂಲಿ ಕಾರ್ಮಿಕರು ಮೃತರಾದ ಪ್ರಕರಣದಲ್ಲಿ ಕ್ರೈಮ್ ಮೊಬಲಗನ್ನು 6 ಲಕ್ಷದಿಂದ 7 ಲಕ್ಷಕ್ಕೆ ಮತ್ತು ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು 1.50 ಲಕ್ಷದಿಂದ ₹2 ಲಕ್ಷವರೆಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಮಲೆನಾಡು ಭಾಗಗಳಲ್ಲಿ ಕೆಲವೆಡೆ ರೋಗಬಾಧೆಯಿಂದ ಅಡಕೆ ಫಸಲು ಕಡಿಮೆ ಇದ್ದು, ಕನಿಷ್ಠ ವ್ಯವಹಾರಕ್ಕೆ ಕಾಳುಮೆಣಸನ್ನು ಸಹ ಪರಿಗಣಿಸಲಾಗುತ್ತಿದ್ದು, 2025-26ನೇ ಸಾಲಿನಲ್ಲಿ 550 ಕ್ವಿಂಟಾಲ್ ಕಾಳುಮೆಣಸನ್ನು ಖರೀದಿಸಲಾಗಿದೆ. ಇ-ಟೆಂಡರ್ ಮೂಲಕ ಮಾರ್ಚ್ 31ರೊಳಗೆ ಸಂಘದಿಂದ 56,971 ಕ್ವಿಂಟಾಲ್ ಅಡಕೆಯನ್ನು ಹಾಗೂ ನೇರ
ಖರೀದಿ ಮೂಲಕ 34,049 ಕ್ವಿಂಟಾಲ್ ಅಡಕೆಯನ್ನು ಖರೀದಿಸಲಾಗಿದೆ. ಬೇರೆ ಸಹಕಾರ ಸಂಘಗಳಲ್ಲಿಯೂ 38,996 ಕ್ವಿಂಟಾಲ್ ಅಡಿಕೆಯನ್ನು ಖರೀದಿಸಲಾಗಿದೆ. ಇದೇ ಅವಧಿಯಲ್ಲಿ 1,30,216 ಕ್ವಿಂಟಾಲ್ ಅಡಕೆಯನ್ನು ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.
ಅಡಕೆ ತೋಟಕ್ಕೆ ತಗಲುವ ಎಲೆಚುಕ್ಕೆ ರೋಗ, ಹಳದಿ ಎಲೆ ರೋಗ ಮತ್ತಿತರ ರೋಗಗಳ ಸಂಶೋಧನೆಗಾಗಿ ಅಡಿಕೆ ತೋಟಕ್ಕೆ ವಿಜ್ಞಾನಿಗಳನ್ನು ಕಳುಹಿಸುವ ಸಲುವಾಗಿ ಮಾಮ್ ಕೋಸ್ ಮತ್ತಿತರ ಅಡಕೆ ಮಾರಾಟ ಸಹಕಾರ ಸಂಘಗಳ ಸಹಯೋಗದೊಂದಿಗೆ ಅಡಿಕೆ ಸಹಕಾರ ಮಹಾಮಂಡಳದಿಂದ ಬೆಂಗಳೂರಿನ '''' ಪ್ರಯೋಗ'''' ಸಂಸ್ಥೆಯವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಸಂಶೋಧನೆಗೆ ಮಾಮ್ ಕೋಸ್ ಸಂಸ್ಥೆಯಿಂದ ₹21 ಲಕ್ಷ ಸಂಘದ ಅಡಕೆ ಸಂಶೋಧನಾ ನಿಧಿಯಿಂದ ನೀಡಲಾಗಿದೆ ಎಂದು ವಿವರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.