ಶಿವಮೊಗ್ಗ: 2013ರಲ್ಲಿ ಡಾ.ಮನಮೋಹನ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ವಕ್ಫ್ ಕಾಯ್ದೆ ಒಂದು ಕರಾಳ ಶಾಸನವಾಗಿದ್ದು, ಈಗ ಅದರ ಪೆಡಂಭೂತ ಶಿವಮೊಗ್ಗಕ್ಕೂ ವಕ್ಕರಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ ಕಿಡಿಕಾರಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಕ್ಫ್ ಕಾಯ್ದೆಯ ಕರಾಳ ಛಾಯೆ ಶಿವಮೊಗ್ಗಕ್ಕೂ ವಕ್ಕರಿಸಿದೆ. ಜಿಲ್ಲೆಯಲ್ಲಿ 32 ಆಸ್ತಿಗಳು ವಕ್ಫ್ ಆಸ್ತಿಯೆಂದು ಪರಿಗಣಿಸಲು ಪ್ರಸ್ತಾವನೆಯೊಂದು ಜಿಲ್ಲಾಧಿಕಾರಿ ಕೈ ಸೇರಿದೆ. ಇದರ ವಿರುದ್ಧ ನ.21 ಮತ್ತು 22ರಂದು ರಾಜ್ಯಾದ್ಯಂತ ಪ್ರತಿಭಟಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನ.22ರಂದು ಡಿ.ಸಿ.ಕಚೇರಿ, ಎಲ್ಲ ತಾಲೂಕು ಕಚೇರಿಗಳ ಮುಂದೆ ಬೆಳಗಿನಿಂದ ಸಂಜೆಯವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಧರಣಿಯಲ್ಲಿ ಮಠಾಧೀಶರು, ಸಂಸದರು, ಶಾಸಕರು, ಸಂಘ ಸಂಸ್ಥೆಯವರು, ಸಾರ್ವಜನಿಕರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.ರಾಜ್ಯದಲ್ಲಿ ರೈತರ, ಶಾಲಾ ಕಾಲೇಜು, ಮಠ ಮಾನ್ಯಗಳ ಆಸ್ತಿಯನ್ನು ವಕ್ಫ್ ಆಸ್ತಿಯನ್ನಾಗಿಸುವಲ್ಲಿ ವಸತಿ ಸಚಿವ ಜಮೀರ್ ಅಹಮ್ಮದ್ ಅವರ ಪಾತ್ರ ಪ್ರಮುಖವಾಗಿದೆ. ರೈತ ವಿರೋಧಿ, ಜನ ವಿರೋಧಿ ಸಚಿವ ಜಮೀರ್ ಅಹಮ್ಮದ್ ಅವರನ್ನು ತಕ್ಷಣ ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.ಎರಡನೇ ಹಂತದ ಹೋರಾಟವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಮೂರು ತಂಡ ರಚನೆಯಾಗಿದ್ದು, ಅವರು ಕೂಡ ರಾಜ್ಯಾದ್ಯಂತ ಸಂಚರಿಸಿ ವಕ್ಫ್ ಕಾಯ್ದೆ ವಿರುದ್ಧ ಜನ ಜಾಗೃತಿ ಮೂಡಿಸಲಿದ್ದಾರೆ ಮತ್ತು ಸ್ಥಳಕ್ಕೆ ತೆರಳಿ ಅಹವಾಲು ಸ್ವೀಕರಿಸಲಿದ್ದಾರೆ. ಜಮೀರ್ ಅಹಮ್ಮದ್ ಅವರನ್ನು ಸಂಪುಟದಿಂದ ಕೈಬಿಡಬೇಕು. ವಕ್ಫ್ ಪರಮಾಧಿಕಾರವನ್ನು ಹಿಂಪಡೆಯಬೇಕು ಮತ್ತು ನಿಯಂತ್ರಣ ಹಾಕಬೇಕು ಎಂದು ಆಗ್ರಹಿಸಲಿದ್ದೇವೆ ಎಂದರು.