ರಸ್ತೆ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಕಡ್ಡಾಯವಾಗಿ ಬ್ಯಾರಿಕೇಡ್ ಗಳನ್ನು ಅಳವಡಿಸಬೇಕು ಹಾಗೂ ಎಚ್ಚರಿಕೆಯ ನಾಮಫಲಕಗಳನ್ನು ಹಾಕಬೇಕು. ಆದರೆ, ಇಲ್ಲಿ 25 ಅಡಿ ಆಳದ ಅಪಾಯಕಾರಿ ಗುಂಡಿಯನ್ನು ತೆಗೆದಿದ್ದರೂ ಗುತ್ತಿಗೆದಾರರು ಯಾವುದೇ ತಡೆಗೋಡೆ, ಬ್ಯಾರಿಕೇಡ್ ಅಥವಾ ಎಚ್ಚರಿಕೆ ಫಲಕಗಳನ್ನು ಅಳವಡಿಸದೆ ನಿರ್ಲಕ್ಷ್ಯ ವಹಿಸಿದ್ದರು.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆರಾಷ್ಟ್ರೀಯ ಹೆದ್ದಾರಿ- 48ರ ನೆಲಮಂಗಲ- ತುಮಕೂರು ದಶಪಥ ರಸ್ತೆ ವಿಸ್ತರಣೆ ಕಾಮಗಾರಿಯ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಬೇಜವಾಬ್ದಾರಿಗೆ ಮತ್ತೊಂದು ಅಮಾಯಕ ಜೀವ ಬಲಿಯಾಗಿರುವ ಘಟನೆ ಸೋಂಪುರ ಹೋಬಳಿಯ ಚಂದನಹೊಸಹಳ್ಳಿ ಬಳಿ ನಡೆದಿದೆ.
ಹೊಸಹಳ್ಳಿ ಗ್ರಾಮದ ನಿವಾಸಿ ಪರಶುರಾಮ (60) ಮೃತಪಟ್ಟ ದುರ್ದೈವಿಯಾಗಿದ್ದು, ಮೃತರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪರಶುರಾಮ ಎಂಬುವವರಾಗಿದ್ದು, ಅವರು ಎಂದಿನಂತೆ ರಾತ್ರಿ ತಮ್ಮ ದಿನದ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ಮನೆಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ತರಲು ಸಮೀಪದ ಅಂಗಡಿಗೆ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಸರಿಯಾದ ಬೀದಿ ದೀಪದ ವ್ಯವಸ್ಥೆ ಇಲ್ಲದ ಕಾರಣ ಕತ್ತಲು ಆವರಿಸಿತ್ತು. ರಸ್ತೆ ಕಾಮಗಾರಿಗಾಗಿ ಹೆದ್ದಾರಿ ಬದಿಯಲ್ಲಿ ತೆಗೆಯಲಾಗಿದ್ದ 25 ಅಡಿ ಆಳದ ಗುಂಡಿ ಕತ್ತಲಲ್ಲಿ ಕಾಣಿಸದೆ ಪರಶುರಾಮ ಅವರು ಕಾಲುಜಾರಿ ನೇರವಾಗಿ ಗುಂಡಿಯೊಳಕ್ಕೆ ಬಿದ್ದಿದ್ದಾರೆ. ಆಳವಾದ ಗುಂಡಿಗೆ ಬಿದ್ದ ರಭಸಕ್ಕೆ ತಲೆ ಮತ್ತು ದೇಹಕ್ಕೆ ತೀವ್ರ ಪೆಟ್ಟಾಗಿ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಸುರಕ್ಷತಾ ಕ್ರಮಗಳ ಕೊರತೆ ಮತ್ತು ಸ್ಥಳೀಯರ ಆಕ್ರೋಶ:
ರಸ್ತೆ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಕಡ್ಡಾಯವಾಗಿ ಬ್ಯಾರಿಕೇಡ್ ಗಳನ್ನು ಅಳವಡಿಸಬೇಕು ಹಾಗೂ ಎಚ್ಚರಿಕೆಯ ನಾಮಫಲಕಗಳನ್ನು ಹಾಕಬೇಕು. ಆದರೆ, ಇಲ್ಲಿ 25 ಅಡಿ ಆಳದ ಅಪಾಯಕಾರಿ ಗುಂಡಿಯನ್ನು ತೆಗೆದಿದ್ದರೂ ಗುತ್ತಿಗೆದಾರರು ಯಾವುದೇ ತಡೆಗೋಡೆ, ಬ್ಯಾರಿಕೇಡ್ ಅಥವಾ ಎಚ್ಚರಿಕೆ ಫಲಕಗಳನ್ನು ಅಳವಡಿಸದೆ ನಿರ್ಲಕ್ಷ್ಯ ವಹಿಸಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಚಂದನ ಹೊಸಹಳ್ಳಿ ಗ್ರಾಮಸ್ಥರು ಮತ್ತು ಸಾರ್ವಜನಿಕರು ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿ ಗುತ್ತಿಗೆದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿ ಕಾಮಗಾರಿ ಆರಂಭವಾದಾಗಿನಿಂದಲೂ ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಮೃತರ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಘಟನೆಗೆ ಸಂಬಂಧಿಸಿದಂತೆ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.