ಬಳ್ಳಾರಿ: ಕರ್ನಾಟಕ ವೈದ್ಯಕೀಯ ಪರಿಷತ್ತಿನ (ಕೆಎಂಸಿ) ಅಧ್ಯಕ್ಷರಾಗಿ ಬಳ್ಳಾರಿಯ ಶಿಶು ವೈದ್ಯ ಡಾ.ಯೋಗಾನಂದ ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಮೈಸೂರಿನ ಕ್ಯಾನ್ಸರ್ ತಜ್ಞ ಡಾ.ರವಿ ಕೃಷ್ಣಪ್ಪ ಚುನಾಯಿತರಾಗಿದ್ದಾರೆ.
ಜುಲೈ 2ರಂದು ನಡೆದ ಆಂತರಿಕ ಚುನಾವಣೆಯಲ್ಲಿ ಕೆಎಂಸಿಯ 16 ವೈದ್ಯ ಸದಸ್ಯರು ತಮ್ಮೊಳಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಚುನಾಯಿಸಿದ್ದು, ಡಾ. ಯೋಗಾನಂದ ರೆಡ್ಡಿ ಹಾಗೂ ಡಾ. ರವಿ ಕೃಷ್ಣಪ್ಪ ಕೆಎಂಸಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಐದು ವರ್ಷಗಳ ಕಾರ್ಯಾವಧಿಗೆ ಆಯ್ಕೆಯಾಗಿದ್ದಾರೆ.2016ರಿಂದ ನ್ಯಾಯಬಾಹಿರವಾಗಿ ಮಾಡಿರುವ ಎಲ್ಲ ಮರುನೋಂದಣಿಗಳನ್ನು ಪುನರ್ ಪರಿಶೀಲಿಸಿ ಸರಿಪಡಿಸುವುದು. ಎನ್‌ಎಂಸಿಯು ವೈದ್ಯರ ನೋಂದಣಿಯ ಬಗ್ಗೆ ಮಾಡಿದ್ದ ನಿಯಮಗಳನ್ನು ಹಿಂಪಡೆದಿದ್ದು ಮತ್ತೆ ಅವನ್ನು ರೂಪಿಸುವಾಗ ವೈದ್ಯರಿಗೂ ಜನರಿಗೂ ಅನ್ಯಾಯವಾಗದಂತೆ ಸಮರ್ಥವಾಗಿ ಪ್ರತಿನಿಧಿಸುವುದು. ಕೆಎಂಸಿಯ ವಿಚಾರಣಾ ಪ್ರಕ್ರಿಯೆಯನ್ನು ಸರಳಗೊಳಿಸಿ, ಸುಲಭಗೊಳಿಸಿ, ವೈದ್ಯರಿಗೂ, ಜನರಿಗೂ ಕಷ್ಟಗಳಾಗದಂತೆ ಹೊಸ ವಿಧಾನಗಳನ್ನು ರೂಪಿಸುವುದು. ಕೆಎಂಸಿಯನ್ನು ಮಾಹಿತಿ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ಮಾಹಿತಿ ಆಯೋಗದಿಂದ ಪಡೆದಿರುವ ಆದೇಶವನ್ನು ಪುನರ್ ವಿಮರ್ಶಿಸಿ ರದ್ದು ಪಡಿಸುವುದು. ಕೆಎಂಸಿಯನ್ನು ಮತ್ತೆ ಮಾಹಿತಿ ಕಾಯಿದೆಯ ವ್ಯಾಪ್ತಿಗೆ ತರುವುದು. ಕಳೆದ 10 ವರ್ಷಗಳಲ್ಲಿ ಕೆಎಂಸಿಯ ಆಯ-ವ್ಯಯ ತನಿಖೆಗೊಳಪಡಿಸಿ ಪ್ರಕಟಿಸುವುದು, ಕಿರಿಯ ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಯ ನಿಯಮವನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದರಿಂದ ಆ ನಿಯಮದ ನೆಪದಲ್ಲಿ ಕೆಎಂಸಿಯು ಅಫಿಡವಿಟ್ ಪಡೆಯುತ್ತಿದ್ದ ಕ್ರಮವನ್ನು ಕೂಡಲೇ ನಿಲ್ಲಿಸುವುದು ಸೇರಿದಂತೆ ಅನೇಕ ಕ್ರಮಗಳತ್ತ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರು ಗಮನ ಹರಿಸಬೇಕಾಗಿದೆ.
ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸಂತಸ ವ್ಯಕ್ತಪಡಿಸಿರುವ ಬಳ್ಳಾರಿಯ ಐಎಂಎ ಅಧ್ಯಕ್ಷ ಡಾ.ಡಿ.ಶ್ರೀನಿವಾಸಲು ಅತ್ಯಂತ ಅರ್ಹ ವ್ಯಕ್ತಿಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು, ಬಳ್ಳಾರಿ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ.ರಾಘವೇಂದ್ರ, ಉಪಾಧ್ಯಕ್ಷ ಡಾ.ಮಾಣಿಕ್ ರಾವ್ ಕುಲಕರ್ಣಿ, ಜಂಟಿ ಕಾರ್ಯದರ್ಶಿ ಡಾ.ಸಂಗೀತಾ ಕಟ್ಟಿಮನಿ, ಖಜಾಂಚಿ ಡಾ.ಟಿ.ವಾರಿಜಾ ಹಾಗೂ ಸರ್ವ ಸದಸ್ಯರು ನೂತನ ಅಧ್ಯಕ್ಷ ಡಾ.ಯೋಗಾನಂದ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.