ಸಾಮರ್ಥ್ಯ ಪರೀಕ್ಷೆಯ ಹಿನ್ನೆಲೆಯಲ್ಲಿ ಪೀಣ್ಯ ಮೇಲ್ಸೇತುವೆಯನ್ನು ಬಂದ್ ಮಾಡಿರುವುದರಿಂದ ಬುಧವಾರ ಬೆಂಗಳೂರು-ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆಯಿಂದಾಗಿ ವಾಹನ ಸವಾರರು ಹೈರಾಣಾದರು
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಮರ್ಥ್ಯ ಪರೀಕ್ಷೆಯ ಹಿನ್ನೆಲೆಯಲ್ಲಿ ಪೀಣ್ಯ ಮೇಲ್ಸೇತುವೆಯನ್ನು ಬಂದ್ ಮಾಡಿರುವುದರಿಂದ ಬುಧವಾರ ಬೆಂಗಳೂರು-ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆಯಿಂದಾಗಿ ವಾಹನ ಸವಾರರು ಹೈರಾಣಾದರು.
ರಾಜ್ಯದ 18ಕ್ಕೂ ಅಧಿಕ ಜಿಲ್ಲೆಗಳಲ್ಲದೆ, ಗೋವಾ. ಮಹಾರಾಷ್ಟ್ರ ಮತ್ತಿತರ ರಾಜ್ಯಗಳನ್ನೂ ಸಂಪರ್ಕಿಸುವ ರಸ್ತೆ ಇದಾಗಿದ್ದು, ದಿನವೂ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ.
ಪೀಣ್ಯ ಮೇಲ್ಸೇತುವೆಯ ಸಾಮರ್ಥ್ಯ ಪರೀಕ್ಷಿಸಲು ಮಂಗಳವಾರ ರಾತ್ರಿ 11ರಿಂದ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಮೂರು ದಿವಸ ನಿರ್ಬಂಧ ಹೇರಿದ್ದು ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾಯಿತು.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಕಚೇರಿ, ಕಾರ್ಖಾನೆಗಳಿಗೆ ತೆರಳುವವರು ಸಂಚಾರ ದಟ್ಟಣೆಯಿಂದಾಗಿ ಬುಧವಾರ ಪಡಿಪಾಟಲುಪಟ್ಟರು. ಬೆಳಗ್ಗೆ ಏಳೂವರೆಯಿಂದಲೇ ಸಂಚಾರ ದಟ್ಟಣೆಯ ಬಿಸಿ ಒಂದಷ್ಟು ತಟ್ಟಲಾರಂಭಿಸಿತು.
ಒಂಬತ್ತು ಗಂಟೆಯಾಗುತ್ತಿದ್ದಂತೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಯಶವಂತಪುರದ ಗೋವರ್ಧನ್ ಚಿತ್ರಮಂದಿರ ಭಾಗದಿಂದಲೂ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಪರದಾಡುವಂತಾಯಿತು.
ಗೊರಗುಂಟೆ ಪಾಳ್ಯ ಸಿಗ್ನಲ್, ಎಸ್‌ಆರ್‌ಎಸ್, ಜಾಲಹಳ್ಳಿ ಕ್ರಾಸ್, ಟಿ.ದಾಸರಹಳ್ಳಿ, 8ನೇ ಮೈಲಿ, ನಾಗಸಂದ್ರ ಮತ್ತಿತರ ಪ್ರದೇಶಗಳಲ್ಲಿ ‘ಪೀಕ್ ಅವರ್’ ನಲ್ಲಂತೂ ವಾಹನಗಳ ಸವಾರರು ಎರಡ್ಮೂರು ಕಿ.ಮೀ. ಸಂಚರಿಸಲು ಗಂಟೆಗಟ್ಟಲೆ ಸಮಯ ಪೋಲು ಮಾಡುವಂತಾಯಿತು.
ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮೊದಲೇ ಮನವಿ ಮಾಡಿದ್ದರೂ ಇದರ ಅರಿವಿಲ್ಲದವರು ಫ್ಲೈ ಓವರ್‌ನಲ್ಲಿಯೇ ಸಂಚರಿಸಲು ‘ಸಿದ್ಧ’ವಾಗಿ ಬಂದದ್ದು ಕೆಲವೆಡೆ ಕಂಡುಬಂತು.
ಗೊರಗುಂಟೆ ಪಾಳ್ಯದಿಂದ ಪಾರ್ಲೆ ಜಿ ಫ್ಯಾಕ್ಟರಿವರೆಗೂ ವಾಹನ ದಟ್ಟಣೆ ಉಂಟಾಗಿ ಒಂದೊಂದು ಟ್ರಾಫಿಕ್ ಸಿಗ್ನಲ್ ದಾಟಲು 20ರಿಂದ 30 ನಿಮಿಷ ಬೇಕಾಗಿದ್ದರಿಂದ ವಾಹನ ಸವಾರರು ಸಂಕಷ್ಟ ಅನುಭವಿಸಬೇಕಾಯಿತು.
10 ನಿಮಿಷದಲ್ಲಿ ತಲುಪಬೇಕಿದ್ದ ಸ್ಥಳವನ್ನು ಒಂದು ಗಂಟೆಯಾದರೂ ತಲುಪಲಾಗುತ್ತಿಲ್ಲ ಎಂದು ಸವಾರರು ಬೇಸರ ವ್ಯಕ್ತಪಡಿಸಿದರು.‘ವ್ಯವಸ್ಥೆ’ ವಿರುದ್ಧ ಆಕ್ರೋಶ
ಮೇಲ್ಸೇತುವೆ ನಿರ್ಮಿಸುವಾಗಲೇ ಸರಿಯಾಗಿ ನಿರ್ಮಾಣ ಮಾಡಿದ್ದರೆ ನಮಗೆ ಇಂದು ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಪರಸ್ಪರ ಕಿತ್ತಾಡುವುದನ್ನು ಬಿಟ್ಟು ರಾಜಕಾರಣಿಗಳು ಸರಿಯಾಗಿ ಕೆಲಸ ಮಾಡಬೇಕು.
ಕಚೇರಿಗೆ ತಡವಾಗಿ ತೆರಳಿದರೆ ಮ್ಯಾನೇಜರ್ ಹತ್ತಿರ ನಾವು ಬೈಸಿಕೊಳ್ಳಬೇಕು. ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು, ಕಚೇರಿಗೆ ತೆರಳುವವರು ಏನು ಮಾಡಬೇಕು’ ಎಂದು ಬೈಕ್ ಸವಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಬೈಕ್ ಸವಾರರು ಗೊರಗುಂಟೆ ಪಾಳ್ಯದವರೆಗೂ ಆಗಮಿಸಿ ಮೇಲ್ಸೇತುವೆ ಬಂದ್ ಆಗಿದ್ದನ್ನು ಗಮನಿಸಿ ಸರ್ವೀಸ್ ರಸ್ತೆಯಲ್ಲಿ ಚಲಿಸಲು ಹಿಂದೇಟು ಹಾಕಿ ಏಕಮುಖ ಸಂಚಾರ ರಸ್ತೆಯಲ್ಲೇ ಹಿಂದಿರುಗಲು ಮುಂದಾದಾಗ ಸಂಚಾರ ಪೊಲೀಸರು ತಿಳಿಹೇಳಿ ಸರ್ವೀಸ್ ರಸ್ತೆಯಲ್ಲೇ ತೆರಳುವಂತೆ ಸೂಚಿಸಿದ್ದು ಕಂಡುಬಂತು.
ಬಿಎಂಟಿಸಿ ಬಸ್‌ಗಳೂ ನಿಧಾನವಾಗಿ ಚಲಿಸಿದ್ದರಿಂದ ಅದರಲ್ಲಿದ್ದ ಪ್ರಯಾಣಿಕರು ಗೊಣಗುಡುತ್ತಲೇ ಪ್ರಯಾಣಿಸಿದರು. ಆಟೋ ಚಾಲಕರಂತೂ ಹೀಗಾದರೆ ಬಾಡಿಗೆ ಗಿಟ್ಟುವುದಿಲ್ಲ. ನಮ್ಮ ದಿನದ ಕೂಲಿಯ ಪಾಡೇನು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಚಾರ ದಟ್ಟಣೆ ಅಧಿಕವಾಗಿದ್ದರಿಂದ ಹೆಚ್ಚುವರಿಯಾಗಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಪೊಲೀಸರೂ ಸಹ ಸಂಚಾರ ದಟ್ಟಣೆ ನಿವಾರಿಸಲು ಸಂಚಾರ ಪೊಲೀಸರಿಗೆ ಸಹಕಾರ ನೀಡಿದರು.
ಆ್ಯಂಬುಲೆನ್ಸ್‌ಗಳ ಪರದಾಟ: ಬೆಂಗಳೂರು-ತುಮಕೂರು ಹೆದ್ದಾರಿಯು ಹಲವು ಜಿಲ್ಲೆಗಳನ್ನು ಸಂಪರ್ಕಿಸುವುದರಿಂದ ಹೆಚ್ಚನ ಚಿಕಿತ್ಸೆಗಾಗಿ ರಾಜ್ಯದ ಇತರ ಭಾಗಗಳಿಂದ ರೋಗಿಗಳನ್ನು ಬೆಂಗಳೂರಿಗೆ ಆ್ಯಂಬುಲೆನ್ಸ್‌ನಲ್ಲಿ ಕರೆತರುವವರ ಸಂಖ್ಯೆ ಹೆಚ್ಚಿದ್ದು ಟ್ರಾಫಿಕ್ ಜಾಮ್‌ನಿಂದಾಗಿ ಆ್ಯಂಬುಲೆನ್ಸ್‌ಗಳೂ ಪರದಾಡುವಂತಾಗಿದೆ. ಬುಧವಾರವೂ ಹಲವು ಆ್ಯಂಬುಲೆನ್ಸ್‌ಗಳು ನಗರ ಪ್ರವೇಶಿಸಲು ಹರಸಾಹಸ ಪಡಬೇಕಾಯಿತು.
ಮೆಟ್ರೋಗೆ ಮುಗಿಬಿದ್ದ ಜನತೆ: ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಜನರು ಮೆಟ್ರೋ ರೈಲುಗಳಿಗೆ ಮುಗಿಬಿದ್ದದ್ದು ಕಂಡುಬಂತು. ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಇಂಡಸ್ಟ್ರಿ, ಗೊರಗುಂಟೆ ಪಾಳ್ಯ ಮೆಟ್ರೋ ಸ್ಟೇಷನ್‌ಗಳಲ್ಲಿ ಎಂದಿಗಿಂತ ಭಾರೀ ಸಂಖ್ಯೆಯಲ್ಲಿ ಜನರು ಪ್ರಯಾಣಿಸಿದರು.
ನಗರಕ್ಕೆ ಆಗಮಿಸುವವರು ಟ್ರಾಫಿಕ್ ಜಾಮ್ ನೋಡಿ ತಮ್ಮ ವಾಹನಗಳನ್ನು ನಾಗಸಂದ್ರದ ಮೆಟ್ರೋ ನಿಲ್ದಾಣದ ಬಳಿ ಪಾರ್ಕಿಂಗ್ ಮಾಡಿ ಮೆಟ್ರೋ ಹತ್ತಿದರು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿದ್ದವರೂ ಮೆಟ್ರೋ ಹತ್ತಲು ಮುಂದಾಗಿದ್ದರಿಂದ ಇಲ್ಲಿ ಪ್ರಯಾಣಿಕರ ಸಂಖ್ಯೆ ವಿಪರೀತ ಹೆಚ್ಚಾಗಿ ಮೆಟ್ರೋ ಪ್ರವೇಶಿಸಲು, ಟಿಕೆಟ್ ಪಡೆಯಲು ಕಿ.ಮೀ.ವರೆಗೂ ಸರದಿ ಸಾಲಿನಲ್ಲಿ ನಿಂತು ಪರದಾಡಿದರು.
ಟೋಲ್ ಸಂಗ್ರಹಕ್ಕೆ ಆಕ್ರೋಶ: ಫ್ಲೈ ಓವರ್ ಮುಚ್ಚಿದ್ದರೂ ಟೋಲ್ ಸಂಗ್ರಹಿಸುತ್ತಿದ್ದಾರೆ ಎಂದು ತುಮಕೂರು ಭಾಗದಿಂದ ಆಗಮಿಸಿದ ಕೆಲ ವಾಹನ ಸವಾರರು ಟೋಲ್ ಸಿಬ್ಬಂದಿ ಬಳಿ ವಾಗ್ವಾದವನ್ನೂ ನಡೆಸಿದರು. ಆದರೆ ಟೋಲ್ ಸಿಬ್ಬಂದಿ ಇದಕ್ಕೆ ಸೂಕ್ತ ಉತ್ತರ ನೀಡಿ ಸವಾರರನ್ನು ಸಮಾಧಾನಪಡಿಸಿದರು.
‘ಟೋಲ್ ಅನ್ನು ಈ ಫ್ಲೈ ಓವರ್‌ಗೆ ಮಾತ್ರ ಸಂಗ್ರಹಿಸುತ್ತಿಲ್ಲ. ಗೊರಗುಂಟೆ ಪಾಳ್ಯದಿಂದ ನೆಲಮಂಗಲದವರೆಗೂ 19 ಕಿ.ಮೀ. ವರೆಗಿನ ದೂರಕ್ಕೆ ಟೋಲ್ ಲೆಕ್ಕಾಚಾರ ಹಾಕಲಾಗುತ್ತದೆ. ಈ ಫ್ಲೈ ಓವರ್ ದೂರ 4.1 ಕಿ.ಮೀ. ಮಾತ್ರ. ಆದ್ದರಿಂದ ಇದಕ್ಕಾಗಿ ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸಲು ಆಗುವುದಿಲ್ಲ.
ಟೋಲ್ ಸಂಗ್ರಹಿಸಬಾರದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಟೋಲ್ ಸಿಬ್ಬಂದಿ ಕೃಷ್ಣಮೂರ್ತಿ ಪ್ರತಿಕ್ರಿಯಿಸಿದ್ದಾರೆ.ಫ್ಲೈಓವರ್ ಸಾಮರ್ಥ್ಯ ಪರೀಕ್ಷಿಸಿದ ತಜ್ಞರು
ಪೀಣ್ಯ ಮೇಲ್ಸೇತುವೆಯ ಸಾಮರ್ಥ್ಯ ಪರೀಕ್ಷಿಸಲು 30 ಟನ್ ತೂಕದ 16 ಟ್ರಕ್‌ಗಳನ್ನು ನಾಗಸಂದ್ರದ ಪಾರ್ಲೆ ಜಿ ಫ್ಯಾಕ್ಟರಿ ಭಾಗದಿಂದ ಮಂಗಳವಾರ ರಾತ್ರಿ ಕಾರ್ಯಾಚರಣೆಗೆ ಬಳಸಿಕೊಂಡ ತಜ್ಞರು, ವಿವರಗಳನ್ನು ದಾಖಲಿಸಿಕೊಂಡಿದ್ದಾರೆ.
ಎರಡು ಪಿಲ್ಲರ್‌ಗಳ ಮೇಲೆ ಗಂಟೆಗೆ ಎರಡರಂತೆ ತಲಾ 8 ಟ್ರಕ್‌ಗಳನ್ನು ನಿಲ್ಲಿಸಿ ಪಿಲ್ಲರ್‌ಗಳ ಸಾಮರ್ಥ್ಯ ಪರೀಕ್ಷಿಸಿದ್ದಾರೆ. ಪ್ರತಿ ಹಂತದಲ್ಲಿ ಪಿಲ್ಲರ್‌ನ ತುದಿಯಲ್ಲಿರುವ ಸ್ಪ್ರಿಂಗ್‌ಗಳು ಎಷ್ಟು ಕೆಳ ಭಾಗಕ್ಕೆ ಹೋಗಿವೆ ಎಂದು ನಮೂದಿಸಿಕೊಂಡಿದ್ದಾರೆ.
ಈ 16 ಟ್ರಕ್‌ಗಳನ್ನೂ ಜ.18ರ ಬೆಳಗಿನವರೆಗೂ ಬಿಡಲಿದ್ದು, ಬಳಿಕ ಪ್ರತಿ ಒಂದು ಗಂಟೆಗೊಮ್ಮೆ ಎರಡೆರಡು ಟ್ರಕ್‌ಗಳನ್ನು ಮೇಲ್ಸೇತುವೆಯಿಂದ ಕೆಳಕ್ಕೆ ತಂದು ಪಿಲ್ಲರ್‌ನ ಸ್ಪ್ರಿಂಗ್‌ಗಳ ಚಲನೆಯನ್ನು ದಾಖಲಿಸಿಕೊಳ್ಳಲಿದ್ದಾರೆ.