ಪೀಣ್ಯ ಮೇಲ್ಸೇತುವೆ ಶೀಘ್ರ ಸಂಚಾರಕ್ಕೆ ಮುಕ್ತ

KannadaprabhaNewsNetwork |  
Published : Dec 15, 2025, 03:00 AM IST
Peenya | Kannada Prabha

ಸಾರಾಂಶ

ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಗೆ ಕಳೆದ ನಾಲ್ಕು ವರ್ಷದಿಂದ ಹಿಡಿದಿದ್ದ ‘ಗ್ರಹಣ’ಕ್ಕೆ ಕೊನೆಗೂ ಮುಕ್ತಿ ಸಿಗುವ ಕಾಲ ಬಂದಿದೆ. 1200 ಕೇಬಲ್‌ ಬದಲಾವಣೆಯ ಪೈಕಿ ಕೇವಲ 30 ಕೇಬಲ್‌ ಅಳವಡಿಕೆಯಷ್ಟೇ ಬಾಕಿ ಇದೆ.

ಸಿದ್ದು ಚಿಕ್ಕಬಳ್ಳೇಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಗೆ ಕಳೆದ ನಾಲ್ಕು ವರ್ಷದಿಂದ ಹಿಡಿದಿದ್ದ ‘ಗ್ರಹಣ’ಕ್ಕೆ ಕೊನೆಗೂ ಮುಕ್ತಿ ಸಿಗುವ ಕಾಲ ಬಂದಿದೆ. 1200 ಕೇಬಲ್‌ ಬದಲಾವಣೆಯ ಪೈಕಿ ಕೇವಲ 30 ಕೇಬಲ್‌ ಅಳವಡಿಕೆಯಷ್ಟೇ ಬಾಕಿ ಇದೆ.

ಬಾಕಿ ಉಳಿದಿರುವ ಕೇಬಲ್‌ ಅಳವಡಿಕೆಗೆ ಎರಡು ತಿಂಗಳು ಕಾಲಾವಕಾಶ ಬೇಕಾಗಲಿದೆ. ಈ ಕಾರ್ಯ ಪೂರ್ಣಗೊಂಡ ಬಳಿಕ, ಗುತ್ತಿಗೆದಾರರಿಗೆ ವಿಧಿಸಿದ್ದ ಷರತ್ತಿನಂತೆ ‘ಲೋಡ್‌ ಟೆಸ್ಟ್‌’ ನಡೆಸಿದ ಬಳಿಕ ಮೇಲ್ಸೇತುವೆಯು ವಾರದ ಎಲ್ಲ ದಿನವೂ ಎಲ್ಲ ಬಗೆಯ ವಾಹನಗಳಿಗೆ ಮುಕ್ತವಾಗಲಿದೆ. ಇದರಿಂದಾಗಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಈ ಭಾಗದಲ್ಲಿ ಉಂಟಾಗಿದ್ದ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ದೊರಕಿದಂತಾಗಲಿದೆ.

ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯ ಭಾಗದಲ್ಲಿ ಬರುವ ಈ ಮೇಲ್ಸೇತುವೆ ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯದಿಂದ ಪಾರ್ಲೆ ಜಿ ಫ್ಯಾಕ್ಟರಿವರೆಗೂ 4.2 ಕಿ.ಮೀ. ಉದ್ದವಿದ್ದು, ರಾಜ್ಯದ 20ಕ್ಕೂ ಅಧಿಕ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಅಷ್ಟೇ ಅಲ್ಲ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೂ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು ದಿನವೂ ಸಹಸ್ರಾರು ವಾಹನಗಳು ಈ ಮೇಲ್ಸೇತುವೆಯಲ್ಲಿ ಸಂಚರಿಸಲಿವೆ.

2021 ರಲ್ಲೇ ಬಾಗಿದ್ದ 3 ಕೇಬಲ್‌:

ತುಮಕೂರು ರಸ್ತೆಯ ಎಂಟನೇ ಮೈಲಿ ಜಂಕ್ಷನ್‌ ಸಮೀಪ 102 ಮತ್ತು 103 ನೇ ಪಿಲ್ಲರ್‌ ನಡುವಿನ ಮೂರು ಕೇಬಲ್‌ ಬಾಗಿದ್ದರಿಂದ 25 ಡಿಸೆಂಬರ್‌ 2021 ರಲ್ಲಿ ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ವು ನಿಷೇಧಿಸಿತ್ತು. ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ತಜ್ಞರು ಮೇಲ್ಸೇತುವೆಯ ಪರಿಶೀಲನೆ ನಡೆಸಿ ಹೆಚ್ಚು ಟೈರ್‌ ಹೊಂದಿರುವ ಭಾರೀ ವಾಹನಗಳು (ಮಲ್ಟಿ ವ್ಹೀಲ್‌ ವೆಹಿಕಲ್ಸ್‌) ಸಂಚರಿಸಿದ್ದರಿಂದ ಕೇಬಲ್‌ಗಳು ಬಾಗಿವೆ ಎಂದು ವರದಿ ನೀಡಿದ್ದರು.

ಬಳಿಕ ಮೇಲ್ಸೇತುವೆಯನ್ನು ಲೋಡ್‌ ಟೆಸ್ಟಿಂಗ್‌ ಸೇರಿದಂತೆ ಹಲವು ವಿಧಗಳ ಪರೀಕ್ಷೆಗೆ ಒಳಪಡಿಸಿದಾಗ ಭಾರೀ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ಯೋಗ್ಯವಾಗಿಲ್ಲ ಎಂಬ ವರದಿ ಬಂದಿತ್ತು. ಆಗ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಮೊದಲ ಹಂತದಲ್ಲಿ 120 ಪಿಲ್ಲರ್‌ ನಡುವೆ ತಲಾ ಎರಡರಂತೆ 240 ಕೇಬಲ್‌ಗಳನ್ನು ಹೊಸದಾಗಿ ಅಳವಡಿಸಿ ಮೇಲ್ಸೇತುವೆ ಭದ್ರಪಡಿಸಲಾಗಿತ್ತು.

1200 ಕೇಬಲ್‌ ಬದಲಾವಣೆ:

ಎರಡನೇ ಹಂತದಲ್ಲಿ 120 ಪಿಲ್ಲರ್‌ಗಳ ನಡುವೆ ಇದ್ದ ತಲಾ 10 ರಂತೆ 1200 ಕೇಬಲ್‌ಗಳನ್ನೂ ಬದಲಾಯಿಸುವ ಕಾರ್ಯ ಪ್ರಾರಂಭಿಸಲಾಗಿತ್ತು. ಹೊಸ ಕೇಬಲ್‌ಗಳನ್ನು ಅಳವಡಿಸಿದ ಬಳಿಕ ಕಾಂಕ್ರೀಟ್‌ (ಸಿಮೆಂಟ್‌ ಗ್ರೌಟಿಂಗ್‌) ಹಾಕಬೇಕಿದ್ದರಿಂದ ಪ್ರತಿ ಬುಧವಾರ ಬೆಳಗ್ಗೆ 6 ರಿಂದ ಗುರುವಾರ ಬೆಳಗ್ಗೆ 6 ಗಂಟೆಯವರೆಗೂ ಮೇಲ್ಸೇತುವೆಯ ಮೇಲೆ ಭಾರೀ ವಾಹನಗಳ ಸಂಚಾರವನ್ನು ಮಾತ್ರ ನಿಷೇಧಿಸಲಾಗಿತ್ತು.

ಇದೀಗ ಕೇಬಲ್‌ ಅಳವಡಿಕೆಯ ಕಾರ್ಯ ಪೂರ್ಣಗೊಳ್ಳುತ್ತಾ ಬರುತ್ತಿದೆ. ಕೇವಲ 30 ಕೇಬಲ್‌ ಅಳವಡಿಕೆ ಮಾತ್ರ ಬಾಕಿ ಇದ್ದು, ಎರಡು ತಿಂಗಳ ಬಳಿಕ ಮೇಲ್ಸೇತುವೆ ಸದೃಢವಾಗಲಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಪುನಃ ಲೋಡ್‌ ಟೆಸ್ಟ್‌ ನಡೆಸಿದ ಬಳಿಕವಷ್ಟೇ ವಾರದ ಎಲ್ಲ ದಿನವೂ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆಯನ್ನು ಮುಕ್ತಗೊಳಿಸಲಾಗುವುದು ಎಂದು ಮೂಲಗಳು ಸ್ಪಷ್ಟಪಡಿಸಿವೆ.

* 20ಕ್ಕೂ ಅಧಿಕ ಜಿಲ್ಲೆಗಳನ್ನು ಸಂಪರ್ಕಿಸುವ ರಸ್ತೆ ಬ್ರಿಡ್ಜ್‌

* ಮೇಲ್ಸೇತುವೆ ರಿಪೇರಿ ಕಾರ್ಯ ಅಂತಿಮ ಹಂತಕ್ಕೆ

* 1200 ಕೇಬಲ್‌ ಬದಲಾವಣೆ ಕೆಲಸ ಶೀಘ್ರ ಮುಕ್ತಾಯ

* 2 ತಿಂಗಳಲ್ಲಿ ಎಲ್ಲ ಬಗೆಯ ವಾಹನ ಸಂಚಾರಕ್ಕೆ ಮುಕ್ತ

* 4 ವರ್ಷದ ಗ್ರಹಣಕ್ಕೆ ಕೊನೆಗೂ ಸಿಗಲಿದೆ ಮುಕ್ತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ