ರಸ್ತೆಗಳಲ್ಲಿ ಕೇಜ್ ವ್ಹೀಲ್ ಟ್ರ್ಯಾಕ್ಟರ್‌ ಓಡಿಸಿದ್ರೆ ದಂಡ: ಎಚ್ಚರಿಕೆ

KannadaprabhaNewsNetwork | Published : Aug 9, 2024 12:31 AM

ಸಾರಾಂಶ

ರೈತರು ತಮ್ಮ ಟ್ರ್ಯಾಕ್ಟರ್‌ಗಳಿಗೆ ಕೇಜ್ ವ್ಹೀಲ್ ಹಾಕಿಕೊಂಡು ರಸ್ತೆಯಲ್ಲಿ ಸಂಚರಿಸದೆ ಹೊಲದಲ್ಲೇ ಕೇಜ್ ವ್ಹೀಲ್ ಅಳವಡಿಸಿಕೊಳ್ಳುವಂತೆ ಜಾಗೃತಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಗ್ರಾಮೀಣ ಭಾಗದಲ್ಲಿ ಟ್ರ್ಯಾಕ್ಟರ್‌ಗಳಿಗೆ ಕೇಜ್ ವ್ಹೀಲ್ ಹಾಕಿಕೊಂಡು ಸಾರ್ವಜನಿಕ ರಸ್ತೆ ಹಾಳುಮಾಡುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿರುವ ಟ್ರ್ಯಾಕ್ಟರ್ ಚಾಲಕರ ಮತ್ತು ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದಾವಣಗೆರೆ ತಾಲೂಕಿನ ಹದಡಿ ಪೊಲೀಸ್ ಠಾಣೆ ಉಪನಿರೀಕ್ಷಕ ಜೆ.ಸಂಜೀವ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ ತಾಲೂಕಿನ ಕಾಶೀಪುರ ಗ್ರಾಮದ ಶ್ರೀ ಕಾಶೀಲಿಂಗೇಶ್ವರ ಸಭಾಭವನದಲ್ಲಿ ರೈತರು ತಮ್ಮ ಟ್ರ್ಯಾಕ್ಟರ್‌ಗಳಿಗೆ ಕೇಜ್ ವ್ಹೀಲ್ ಹಾಕಿಕೊಂಡು ರಸ್ತೆಯಲ್ಲಿ ಸಂಚರಿಸದೆ ಹೊಲದಲ್ಲೇ ಕೇಜ್ ವ್ಹೀಲ್ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿ ಮಾತನಾಡಿ, ಹಲವು ವರ್ಷಗಳಿಂದ ಕೇಜ್ ವ್ಹೀಲ್ ಹಾಕಿಕೊಂಡು ರಸ್ತೆಯಲ್ಲಿ ಸಂಚರಿಸಬಾರದು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಕೆಲ ರೈತರು ತಮ್ಮ ಮನೆಯಿಂದಲೇ ಟ್ರ್ಯಾಕ್ಟರ್‌ಗಳಿಗೆ ಕೇಜ್ ವ್ಹೀಲ್ ಹಾಕಿಕೊಂಡು ರಸ್ತೆ ಮೂಲಕ ತಮ್ಮ ಹೊಲಗಳಿಗೆ ಸಂಚಾರ ಮಾಡುತ್ತಿದ್ದಾರೆ. ಇದರಿಂದ ರಸ್ತೆಗೆ ಹಾನಿಯುಂಟಾಗಿ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಮೊದಲ ಹಂತವಾಗಿ ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಂತರದ ದಿನಗಳಲ್ಲಿ ರಸ್ತೆಗಳಲ್ಲಿ ಕೇಜ್ ವ್ಹೀಲ್ ಟ್ರಾಕ್ಟರ್ ಸಂಚರಿಸುತ್ತಿರುವುದು ಗಮನಕ್ಕೆ ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಸುಮಾರು 10 ಟ್ರ್ಯಾಕ್ಟರ್‌ಗಳ ಮೇಲೆ ಸ್ಥಳದಲ್ಲೇ ದಂಡ ವಿಧಿಸಿ ಕೇಸ್ ದಾಖಲಿಸಲಾಗಿದೆ ಎಂದರು.

ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ 45 ಹಳ್ಳಿಗಳಲ್ಲಿ ಹಾಗೂ ಠಾಣೆ ಅಧಿಕೃತ ಜಾಲತಾಣದಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ಗ್ರಾಮದಲ್ಲೂ ಗುಪ್ತ ಮಾಹಿತಿದಾರರನ್ನು ನೇಮಿಸಲಾಗಿದ್ದು, ಅವರ ನೀಡುವ ಟ್ರ್ಯಾಕ್ಟರ್‌ಗಳ ಫೋಟೋ ಆಧಾರವಾಗಿಟ್ಟುಕೊಂಡು ಕೇಸ್ ದಾಖಲು ಮಾಡಲಾಗುತ್ತಿದೆ. ಮುಖ್ಯವಾಗಿ ಗ್ರಾಮದಲ್ಲಿ ಪ್ರತಿ ವಿದ್ಯುತ್ ಕಂಬ, ಮುಖ್ಯ ರಸ್ತೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸುವುದರಿಂದ ಗ್ರಾಮದಲ್ಲಿನ ಅನೈತಿಕ ಚಟುವಟಿಕೆಗಳು, ಕಳ್ಳಕಾಕರ ಗುರುತುಗಳು ಹಾಗೂ ಗ್ರಾಮದ ಎಲ್ಲಾ ಚಲನವಲನಗಳ ಮೇಲೆ ನಿಗವಹಿಸಲು ಅನುಕೂಲವಾಗುತ್ತದೆ. ಆದ್ದರಿಂದ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಸಿಸಿ ಕ್ಯಾಮೆರಾ ಬೀದಿ ದೀಪ ಅಳವಡಿಸಿಕೊಳ್ಳಿ ಎಂದು ಹೇಳಿದರು.

ಬರೀ ನಗರದಲ್ಲಿ ಅಲ್ಲದೇ ಹಳ್ಳಿಗಳಲ್ಲೂ ಅಪಘಾತಗಳಾಗಿ ಸಾವು ನೋವು ಸಂಭಂವಿಸಿವೆ. ಆದ್ದರಿಂದ ಹಳ್ಳಿಗಳಲ್ಲೂ ಬೈಕ್ ಚಾಲಕರು ಹೆಲ್ಮೆಟ್ ಧರಿಸಬೇಕು ಎಂದ ಅವರು, ರೈತರು ಇನ್ನಾದರು ಜಾಗೃತಗೊಂಡು ರಸ್ತೆಗೆ ಹಾನಿ ಮಾಡಿ ಸರ್ಕಾರಕ್ಕೆ ನಷ್ಟವಾಗುವುದನ್ನು ತಪ್ಪಿಸಬೇಕು ಇಲ್ಲಾವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಕಾಶೀಪುರ ಗ್ರಾಮದ ಕಲ್ಲೇಶ, ಕೆ.ಎಸ್.ಓಂಕಾರಮೂರ್ತಿ, ಈಶಣ್ಣ, ಪಂಚಾಕ್ಷರಿ, ಕೆ.ಪಿ.ರುದ್ರಪ್ಪ, ಕೆ.ಪಿ.ಶಿವಕುಮಾರ್, ಮೆದಕೇರಪ್ಪ, ರೇವಣಸಿದ್ದಪ್ಪ, ವಿನೋದ್ ಕುಮಾರ್ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

Share this article