ಖಾಲಿ ನಿವೇಶನ ಸ್ವಚ್ಛತೆ ನಿರ್ಲಕ್ಷಿಸಿದರೆ ದಂಡ: ಪುರಸಭೆ ಮುಖ್ಯಾಧಿಕಾರಿ ಎಚ್ಚರಿಕೆ

KannadaprabhaNewsNetwork | Published : Jun 3, 2024 12:32 AM

ಸಾರಾಂಶ

ಹೊನ್ನಾಳಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳನ್ನು ಹೊಂದಿರುವ ಆಸ್ತಿ ಮಾಲೀಕರು ಹಾಗೂ ಬಡಾವಣೆಯ ಮಾಲೀಕರು ತಮ್ಮ ಖಾಲಿ ನಿವೇಶನ ಹಾಗೂ ಬಡಾವಣೆಗಳಲ್ಲಿ ಕಳೆ ಗಿಡಗಳು, ಪೊದೆಗಳು ಬೆಳೆಯದಂತೆ ಸ್ವಚ್ಛತೆ ಕಾಪಾಡಬೇಕು. ಇಲ್ಲವಾದಲ್ಲಿ ಸಾರ್ವಜನಿಕರ ಆರೋಗ್ಯ ಸಂರಕ್ಷಣೆ, ಉತ್ತಮ ಪರಿಸರ ಸಂರಕ್ಷಣೆ ಹಿನ್ನೆಲೆ ಪುರಸಭೆ ವತಿಯಿಂದಲೇ ಸ್ವಚ್ಛಗೊಳಿಸಲಾಗುವುದು. ಆದರೆ, ಆಸ್ತಿ ಮಾಲೀಕರಿಂದ ನಿವೇಶನ ಸ್ವಚ್ಛತಾ ಕಾರ್ಯಕ್ಕೆ ತಗುಲುವ ವೆಚ್ಚವನ್ನು ಪ್ರತಿ ಚದರ ಮೀಟರ್‌ಗೆ ₹20 ರಂತೆ ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ನಿರಂಜನಿ ತಿಳಿಸಿದ್ದಾರೆ.

- ಚದರ ಮೀಟರ್‌ಗೆ ₹20ರಂತೆ ದಂಡ ವಿಧಿಸಿ ವಸೂಲಿ- - - ಕನ್ನಡಪ್ರಭ ವಾತ್ರೆ ಹೊನ್ನಾಳಿ

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳನ್ನು ಹೊಂದಿರುವ ಆಸ್ತಿ ಮಾಲೀಕರು ಹಾಗೂ ಬಡಾವಣೆಯ ಮಾಲೀಕರು ತಮ್ಮ ಖಾಲಿ ನಿವೇಶನ ಹಾಗೂ ಬಡಾವಣೆಗಳಲ್ಲಿ ಕಳೆ ಗಿಡಗಳು, ಪೊದೆಗಳು ಬೆಳೆಯದಂತೆ ಸ್ವಚ್ಛತೆ ಕಾಪಾಡಬೇಕು. ಇಲ್ಲವಾದಲ್ಲಿ ಸಾರ್ವಜನಿಕರ ಆರೋಗ್ಯ ಸಂರಕ್ಷಣೆ, ಉತ್ತಮ ಪರಿಸರ ಸಂರಕ್ಷಣೆ ಹಿನ್ನೆಲೆ ಪುರಸಭೆ ವತಿಯಿಂದಲೇ ಸ್ವಚ್ಛಗೊಳಿಸಲಾಗುವುದು. ಆದರೆ, ಆಸ್ತಿ ಮಾಲೀಕರಿಂದ ನಿವೇಶನ ಸ್ವಚ್ಛತಾ ಕಾರ್ಯಕ್ಕೆ ತಗುಲುವ ವೆಚ್ಚವನ್ನು ಪ್ರತಿ ಚದರ ಮೀಟರ್‌ಗೆ ₹20 ರಂತೆ ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ನಿರಂಜನಿ ತಿಳಿಸಿದ್ದಾರೆ.

ಖಾಲಿ ನಿವೇಶನ ಮತ್ತು ಬಡಾವಣೆಗಳಲ್ಲಿ ಕಳೆ ಗಿಡಗಳು, ಜಾಲಿ ಮರಗಳು ಅತಿ ಹೆಚ್ಚಾಗಿ ಬೆಳೆದಿವೆ. ಸೊಳ್ಳೆಗಳು ಹೆಚ್ಚಾಗುತ್ತಿದ್ದು, ಪರಿಸರಕ್ಕೆ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ವಿವಿಧ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ. ಅಕ್ಕಪಕ್ಕದ ಮನೆಗಳ ಮಾಲೀಕರು ಮತ್ತು ಸಾರ್ವಜನಿಕರು ಪದೇಪದೆ ದೂರು ನೀಡಿ, ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆ ಸಂಬಂಧಿಸಿದ ನಿವೇಶನಗಳ ಮಾಲೀಕರು ತುರ್ತಾಗಿ ಖಾಲಿ ಜಾಗಗಳು, ನಿವೇಶನಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಈಗಾಗಲೇ ಈ ವಿಷಯವನ್ನು ಪುರಸಭೆ ವಾಹನ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಈ ಕಾರ್ಯ ಯಶಸ್ವಿಯಾಗಲು ಪುರಸಭೆಯೊಂದಿಗೆ ನಾಗರಿಕರು ಸಹಕರಿಸಬೇಕು. ಹೊನ್ನಾಳಿ ಪಟ್ಟಣವನ್ನು ಸ್ವಚ್ಛ ಮತ್ತು ಸುಂದರ ಪಟ್ಟಣವನ್ನಾಗಿಸಲು ಕೈ ಜೋಡಿಸುವಂತೆ ಪುರಸಭೆ ಮುಖ್ಯಾಧಿಕಾರಿ ನಿರಂಜನಿ ಎಚ್. ಮನವಿ ಮಾಡಿದ್ದಾರೆ.

- - - -1ಎಚ್.ಎಲ್.ಐ3: ಎಚ್.ನಿರಂಜನಿ

Share this article