ಚನ್ನಪಟ್ಟಣ: ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಿಸಿರುವ ಎಸ್‌ಐಟಿಯಿಂದ ಸೂಕ್ತ ತನಿಖೆ ನಡೆಯುವ ವಿಶ್ವಾಸವಿಲ್ಲದ ಕಾರಣ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕು ಎಂದು ಜೆಡಿಎಸ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ಪುಟ್ಟಸಿದ್ದೇಗೌಡ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಮುಜುಗರ ಉಂಟುಮಾಡುವ ಉದ್ದೇಶದಿಂದಲೇ ಪೆನ್‌ಡ್ರೈವ್ ಹಂಚಲಾಗಿದೆ. ರಾಜಕೀಯಕ್ಕಾಗಿ ಇಂತಹ ಕೀಳುಮಟ್ಟದ ಕೆಲಸ ಮಾಡಿದವರು ಉತ್ತಮರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಸ್‌ಐಟಿ ರಾಜ್ಯ ಸರ್ಕಾರದ ಅಧೀನದಲ್ಲಿದ್ದು ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಕರಣ ಸೂಕ್ತ ತನಿಖೆಗೆ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಶತ್ರುವನ್ನು ಸೋಲಿಸಬೇಕು ಅದನ್ನು ಬಿಟ್ಟು ಈ ರೀತಿ ಕೆಟ್ಟ ಕೆಲಸ ಮಾಡಬಾರದು. ಪ್ರಜ್ವಲ್ ತಪ್ಪು ಮಾಡಿದ್ದರೆ ಅವರಿಗೆ ತಕ್ಕ ಶಿಕ್ಷೆ ಆಗಲಿ. ಆದರೆ ವಿಡಿಯೋವನ್ನು ಬ್ಲರ್ ಮಾಡದೇ ಹಂಚಿದ್ದು, ಆ ಮಹಿಳೆಯರ ಜೀವನ ಏನಾಗಬೇಕು. ಆದ್ದರಿಂದ ಈ ವಿಡಿಯೋ ಮಾಡಿರುವವರು, ಅದನ್ನು ಆಚೆಗೆ ತಂದವರು ಎಲ್ಲರೂ ತಪ್ಪಿತಸ್ಥರೇ ಆಗಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಈ ಪ್ರಕರಣ ೨೦೧೯ರಲ್ಲಿ ನಡೆದಿದೆ ಎನ್ನಲಾಗಿದೆ. ಆದರೆ, ಈಗ ಚುನಾವಣೆ ಸಮಯದಲ್ಲಿ ಏಕೆ ಬಿಡುಗಡೆ ಮಾಡಿದರು. ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿ ಇಂತಹ ಹೀನ ಕೃತ್ಯ ಮಾಡಿರುವ ಶಂಕೆ ಇದೆ. ನಾಲ್ಕು ಗೋಡೆ ಮಧ್ಯೆ ನಡೆದಿರುವುದನ್ನು ಇವರು ಜಗಜ್ಜಾಹೀರು ಮಾಡಿದ್ದಾರೆ. ಇಂತಹ ಹೇಯ ಕೃತ್ಯ ನಡೆಸಿರುವುದು ಖಂಡನೀಯ ಎಂದರು.
ಕೀಳುಮಟ್ಟದ ರಾಜಕೀಯ ಮಾಡಬಾರದು. ಮಾಜಿ ಪ್ರಧಾನಿ ದೇವೇಗೌಡರು ಈ ಪ್ರಕರಣದಿಂದ ವಿಚಲಿತರಾಗಬಾರದು. ನಾವೆಲ್ಲ ಅವರೊಂದಿಗೆ ಇದ್ದೇವೆ. ಜೆಡಿಎಸ್ ಅನ್ನು ನಾವೆಲ್ಲ ಒಗ್ಗೂಡಿ ಕಟ್ಟೋಣ ಎಂದರು.ಪತ್ರಿಕಾಗೋಷ್ಠಿಯಲ್ಲಿ ತಿಟ್ಟಮಾರನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅಜಿತ್, ಮುಖಂಡರಾದ ಮಂಜುನಾಥ್ ಮುಖಂಡರಾದ ರಘು, ಕೆಂಗಲ್ ಮೂರ್ತಿ, ಅನಿಲ್, ಕಾಮರಾಜು, ಕೃಷ್ಣಪ್ಪ, ಕೂಡ್ಲೂರು ರವಿ ಇತರರಿದ್ದರು.ಪೊಟೋ ೭ಸಿಪಿಟಿ೨: ಮಾಗಡಿ ತಾಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಜೆಡಿಎಸ್ ಹಿರಿಯ ಮುಖಂಡ ಪುಟ್ಟಸಿದ್ದೇಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.