ಕನ್ನಡಪ್ರಭ ವಾರ್ತೆ ಬೆಳಗಾವಿರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಮಾಡಿದ ಸಾಧನೆ, ಜಾರಿಗೆ ತಂದಿರುವ ವಿವಿಧ ಯೋಜನೆ ಮತ್ತು ನಾವು ಮಾಡಿರುವ ಅಭಿವೃದ್ಧಿ ಯೋಜನೆಗಳನ್ನು ಜನರು ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದಾರೆ. ಬೆಳಗಾವಿ ಲೋಕಸಭೆ ಕ್ಷೇತ್ರದಾದ್ಯಂತ ಕಾಂಗ್ರೆಸ್ ಅಭ್ಯರ್ಥಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದ ವಿವಿಧ ತಾಲೂಕುಗಳಲ್ಲಿ ಎರಡು ಸುತ್ತಿನ ಪ್ರಚಾರ ಕೈಗೊಂಡ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಳಗಾವಿ ಲೋಕಸಭೆ ಕ್ಷೇತ್ರದ ಎಲ್ಲ ತಾಲೂಕುಗಳಲ್ಲಿ ಪ್ರಚಾರ ಕಾರ್ಯ ನಡೆಸಲಾಗಿದೆ. ಕೆಲವು ತಾಲೂಕುಗಳಲ್ಲಿ ಎರಡು ಸುತ್ತು ಪ್ರಚಾರ ನಡೆಸಲಾಗಿದೆ. ಎಲ್ಲ ಕಡೆ ಕಾರ್ಯಕರ್ತರ ಸಭೆ ಪೂರ್ಣಗೊಂಡಿದೆ. ಜಿಲ್ಲಾ ಪಂಚಾಯತಿ ಕ್ಷೇತ್ರವಾರು ಮತ್ತು ಅನೇಕ ಕಡೆ ಹೋಬಳಿ ಮಟ್ಟದಲ್ಲಿ ಸಾರ್ವಜನಿಕ ಸಭೆ ನಡೆಸಲಾಗಿದೆ. ಹೋದಲ್ಲೆಲ್ಲ ಜನರಿಂದ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳಲ್ಲೂ ಸ್ಥಳೀಯ ಶಾಸಕರು ಮತ್ತು ಪಕ್ಷದ ಪ್ರಮುಖರ ಉಪಸ್ಥಿತಿಯಲ್ಲಿ ಮೊದಲ ಸುತ್ತಿನಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗಿದೆ. ನಂತರದಲ್ಲಿ ಮುಖಂಡರ ಜೊತೆ ಜಿಪಂ ಮಟ್ಟದ ಮತ್ತು ಕೆಲವೆಡೆ ಹೋಬಳಿ ಮಟ್ಟದ ಸಾರ್ವಜನಿಕ ಸಭೆ ನಡೆಸಲಾಗಿದೆ. ಇನ್ನು ಕೆಲವೆಡೆ ರೋಡ್ ಶೋ ನಡೆಸಲಾಗಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅವರವರ ವ್ಯಾಪ್ತಿಯಲ್ಲಿ ಪ್ರತಿ ಹಳ್ಳಿಹಳ್ಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ ಎಂದರು.
ಅಭಿವೃದ್ಧಿ ಮತ್ತು ಗ್ಯಾರಂಟಿಗೆ ಜನರ ಮೆಚ್ಚುಗೆ:ಕಾಂಗ್ರೆಸ್ ಪಕ್ಷ ದೇಶಕ್ಕೆ ನೀಡಿರುವ ಕೊಡುಗೆ, ಮಾಡಿರುವ ಅಭಿವೃದ್ಧಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಕೆಲಸ ಹಾಗೂ ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿ ಕಂಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಜೈ ಎನ್ನುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಾವು ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಜನರು ತಿಳಿದುಕೊಂಡಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ಸ್ವಾಭಿಮಾನ ಮತ್ತು ಕ್ಷೇತ್ರದ ಅಭಿವೃದ್ಧಿ ಬೇಕಾಗಿದೆ. ಹಾಗಾಗಿ ನಾವು ಈ ಬಾರಿ ಬೇರೆ ಏನನ್ನೂ ಯೋಚಿಸದೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುತ್ತೇವೆ ಎಂದು ಜನರು ಸ್ವಯಂ ಪ್ರೇರಿತರಾಗಿ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಪ್ರಚಾರದ ವೇಳೆ ಅಲ್ಲಲ್ಲಿ ವಿವಿಧ ಸಮಾಜದ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭೇಟಿಯಾಗಿ ಚರ್ಚಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರಿಂದ ಬೆಳಗಾವಿಗೆ ಹೇಗೆಲ್ಲ ಅನ್ಯಾಯವಾಗಿದೆ ಎನ್ನುವುದನ್ನು ಜನರೇ ನಮ್ಮ ಗಮನಕ್ಕೆ ತರುತ್ತಿದ್ದಾರೆ. ಅಂತಹ ವ್ಯಕ್ತಿ ಕೈಯಲ್ಲಿ ಕ್ಷೇತ್ರ ಕೊಟ್ಟರೆ ನಮಗೆ ಇನ್ನಷ್ಟು ಹಾನಿಯಾಗುವುದು ಖಂಡಿತ. ಹಾಗಾಗಿ ಈ ಬಾರಿ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸಲೇಬೇಕು. ನಾವೆಲ್ಲ ನಮ್ಮ ಏರಿಯಾಗಳಲ್ಲಿ ಜನರ ಮನವೊಲಿಸುತ್ತೇವೆ ಎಂದು ಜನರು ಹೇಳುತ್ತಿದ್ದಾರೆ. ಬೇರೆ ಬೇರೆ ಪಕ್ಷಗಳ ಮುಖಂಡರು ಸಹ ಭೇಟಿಯಾಗಿ ಬೆಂಬಲ ಸೂಚಿಸುತ್ತಿದ್ದಾರೆ ಎಂದರು.ಏ.15ರಂದು ಮೃಣಾಲ್ ಹೆಬ್ಬಾಳ್ಕರ್ ನಾಮಪತ್ರ ಸಲ್ಲಿಸಲಿದ್ದಾರೆ. ನಂತರದಲ್ಲಿ ಮತ್ತೊಂದು ಸುತ್ತಿನ ಪ್ರಚಾರ ಕಾರ್ಯ ನಡೆಯಲಿದೆ. ರಾಜ್ಯಮಟ್ಟದ ನಾಯಕರು ಸಹ ಪ್ರಚಾರಕ್ಕೆ ಬರಲಿದ್ದಾರೆ. ಬದಲಾವಣೆಗಾಗಿ, ಬೆಳಗಾವಿಯ ಸಮಗ್ರ ಅಭಿವೃದ್ಧಿಗಾಗಿ, ಯುವಜನರಿಗೆ ಉದ್ಯೋಗ ಸೃಷ್ಟಿಗಾಗಿ, ಕ್ಷೇತ್ರಕ್ಕೆ ಹೆಚ್ಚಿನ ಉದ್ಯಮ, ಉದ್ಯೋಗ ತರುವುದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಬೇಕೆಂದು ನಾನು ಜನರಲ್ಲಿ ಕೈಮುಗಿದು ಕೇಳುತ್ತೇನೆ. ಎಲ್ಲರೂ ಸೇರಿ ಬೆಳಗಾವಿಯನ್ನು ಜನಸ್ನೇಹಿಯಾಗಿ ಅಭಿವೃದ್ಧಿಪಡಿಸೋಣ.ಲಕ್ಷ್ಮೀ ಹೆಬ್ಬಾಳ್ಕರ್, ಸಚಿವೆ.