ಕನ್ನಡಪ್ರಭ ವಾರ್ತೆ ಕಾಪು
ಕೇಂದ್ರ ಸರ್ಕಾರದ ದುರಾಡಳಿತದಿಂದ ಜನತೆ ಭ್ರಮನಿರಸನಗೊಂಡಿದ್ದಾರೆ. ರಾಜ್ಯ ಸರ್ಕಾರದ ಸುದೃಢ ಅಡಳಿತಕ್ಕೆ ಜನತೆ ಮೆಚ್ಚುಗೆ ಸೂಚಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಪಡೆಯುವುದು ಶತಸಿದ್ಧ ಎಂದು ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ ಅವರನ್ನು ಗುರುವಾರ ರಾತ್ರಿ ಹೆಜಮಾಡಿ ಗಡಿಭಾಗದಲ್ಲಿ ಸಾವಿರಕ್ಕೂ ಅಧಿಕ ಕಾಂಗ್ರೆಸ್ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಚೆಂಡೆ, ಹೂಹಾರ, ಶಾಲು ಹಾಗೂ ಪುಷ್ಪಗುಚ್ಛಗಳೊಂದಿಗೆ ಸೊರಕೆಯವರನ್ನು ಸ್ವಾಗತಿಸಿ ಸಂಭ್ರಮಿಸಿದರು.
ಕಳೆದ ಬಾರಿ ಬಿಜೆಪಿ 25 ಸ್ಥಾನ ಗೆದ್ದರೂ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ. ನಮ್ಮ ತೆರಿಗೆ ಪಾಲನ್ನು ತರಲು ಸಾಧ್ಯವಾಗಲಿಲ್ಲ. ಹಾಗಾಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಲಾಭ ಪಡೆದಿರುವ ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಲಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಖಚಿತವಾಗಿ ಗೆಲ್ಲಲಿದೆ ಎಂದರು.ಪಕ್ಷದ ಪ್ರಮುಖರಾದ ಅಶೋಕ್ ಕುಮಾರ್, ರಮೇಶ್ ಕಾಂಚನ್, ದಿನೇಶ್ ಹೆಗ್ಡೆ ಮೊಳವಳ್ಳಿ, ದೀಪಕ್ ಕೋಟ್ಯಾನ್, ಗೀತಾ ವಾಗ್ಲೆ, ನವೀನ್‌ಚಂದ್ರ ಸುವರ್ಣ, ಸಂತೋಷ್ ಕುಲಾಲ್, ಹರೀಶ್ ಕಿಣಿ, ದಿವಾಕರ ಶೆಟ್ಟಿ ಕಾಪು, ಸುನಿಲ್ ಬಂಗೇರ, ನಾಗೇಶ್ ಉದ್ಯಾವರ, ಎಂ.ಎ.ಗಫೂರ್, ವೈ. ಸುಧೀರ್ ಕುಮರ್, ನವೀನ್‌ಚಂದ್ರ ಜೆ. ಶೆಟ್ಟಿ, ವೈ.ಸುಕುಮಾರ್, ದೀಪಕ್ ಎರ್ಮಾಳ್ ಮತ್ತಿತರರು ಉಪಸ್ಥಿತರಿದ್ದರು.
ಏ.6ಕ್ಕೆ ಸಿದ್ದರಾಮಯ್ಯ - ಡಿಕೆಶಿ ಉಡುಪಿಗೆಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಏಪ್ರಿಲ್ 6ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದ್ದಾರೆ. ಈ ಸಂದರ್ಭ ಪಕ್ಷದ ಬೃಹತ್ ಸಮಾವೇಶವನ್ನು ಆಯೋಜಿಸಲಾಗುತ್ತದೆ ಎಂದು ಸೊರಕೆ ಹೇಳಿದರು.