ಕನ್ನಡಪ್ರಭ ವಾರ್ತೆ ಹನೂರು ರಾಜ್ಯದಲ್ಲಿ 52 ಸಾವಿರ ಕೋಟಿ ರು. ಐದು ಗ್ಯಾರಂಟಿ ಯೋಜನೆಯ ಜೊತೆಗೆ ಚಾಮರಾಜನಗರ ಜಿಲ್ಲೆಯ ರಸ್ತೆ ಸಂಪರ್ಕವಿಲ್ಲದ 31 ಹಾಡಿಗಳಿಗೆ 42 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಶಕ್ತಿ ಸಂಪರ್ಕ ನೀಡಲಾಗುತ್ತಿದೆ, ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹೇಳಿದರು.
ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಹನೂರು ತಾಲೂಕು ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ರಸ್ತೆಗಳು ದುರಸ್ತಿಗೊಂಡಿರುವುದರಿಂದ ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕಿದೆ. ಇದೀಗ ಪಾಲಾರ್ ಹಾಡಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಉಳಿದಂತೆ ಮುಂದಿನ ದಿನಗಳಲ್ಲಿ ಎಲ್ಲಾ ಹಾಡಿಗಳಿಗೂ ವಿದ್ಯುತ್ ಸಂಪರ್ಕ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಹರ್ಷ ವ್ಯಕ್ತಪಡಿಸಿದ ಗ್ರಾಮಸ್ಥರು:ತಲತಲಾಂತರದಿಂದ ವಿದ್ಯುತ್ ನೀಡುವಂತೆ ಮನವಿ ಸಲ್ಲಿಸಲಾಗುತ್ತಿದ್ದರೂ ಇದುವರೆಗೂ ಪಾಲರ್ ಸೋಲಿಗರ ಹಾಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆಗಿರಲಿಲ್ಲ. ಹೀಗಾಗಿ ಗಡಿ ಭಾಗದಲ್ಲಿರುವ ಸೋಲಿಗರ ಹಾಡಿಗೆ ವಿದ್ಯುತ್ ಕಲ್ಪಿಸಿರುವುದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉಳಿದಂತಹ ತಪಲಿನಲ್ಲಿ ಬರುವ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಜೊತೆಗೆ ಮೂಲಭೂತ ಸೌಲಭ್ಯ ನೀಡಲು ಮನವಿ ಮಾಡಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಿತ ನಿಗಮದ ಅಧ್ಯಕ್ಷ ರಮೇಶ್ ಬಂಡಿ ಸಿದ್ದೇಗೌಡ, ಶಾಸಕರಾದ ಎ .ಆರ್ ಕೃಷ್ಣಮೂರ್ತಿ, ಮಾಜಿ ಶಾಸಕ ಆರ್ ನರೇಂದ್ರ, ಜಿಲ್ಲಾಧಿಕಾರಿ ಸಿ.ಟಿ ಶಿಲ್ಪನಾಗ್, ಜಿಪಂ ಸಿಇಒ ಮೋನೋರೋತ್, ಎಸ್ಪಿ ಡಾ. ಬಿ ಟಿ ಕವಿತಾ, ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ, ಚಾಮುಂಡೇಶ್ವರಿ ನಿಗಮದ ವ್ಯವಸ್ಥಾಪಕ ಮುನಿ ರಾಜಗೋಪಾಲ್, ಇಇ ತಬುಸಮಾ, ನಿರ್ಗಮಿತ ವ್ಯವಸ್ಥಾಪಕಿ ಶೀಲಾ, ಉಪವಿಭಾಗಾಧಿಕಾರಿ ಮಹೇಶ್, ತಹಸಿಲ್ದಾರ್ ವೈ ಕೆ ಗುರುಪ್ರಸಾದ್ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಬಿಂದ್ಯಾ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಶ್,ಎಇಇ ಶಂಕರ್,ಎಇ ರಂಗಸ್ವಾಮಿ ಹಾಜರಿದ್ದರು.ಹಾಡಿ ನಿವಾಸಿಗಳಿಗೆ ಬಂತು ಒಳ್ಳೇ ಕಾಲ: ಮೂರು ಅವಧಿಗೆ ಶಾಸಕರಾಗಿದ್ದ ಆರ್. ನರೇಂದ್ರ ಹನೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಈ ಹಿಂದೆ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಲು ಅವರು ಸಹ ಅವಿರತ ಪ್ರಯತ್ನ ಮಾಡಿದ್ದಾರೆ. ಇದೀಗ ಒಳ್ಳೆಯ ಕಾಲ ಬಂದಿದ್ದು ಹಾಡಿಯ ನಿವಾಸಿಗಳಿಗೆ ಸ್ವತಂತ್ರ ನಂತರ ಮೊಟ್ಟ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಈ ಹಿಂದೆ ಅರಣ್ಯದಲ್ಲಿ ವಾಸ ಮಾಡುತ್ತಿದ್ದ ಬುಡಕಟ್ಟು ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂದು ಸಚಿವ ಎಚ್. ಸಿ. ಮಹದೇವಪ್ಪ ಹೇಳಿದರು.123 ಕಿ.ಮೀ. ರಸ್ತೆ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ: ಹಾಡಿಗಳಲ್ಲಿನ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಇವರನ್ನು ಸಮಾಜದ ಮುಖ್ಯ ವಾಹನಿಗೆ ತರುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲು ತೀರ್ಮಾನ ಕೈಗೊಂಡಿದ್ದರು. ಈ ಹಿನ್ನೆಲೆ ಹಂತ ಹಂತವಾಗಿ ಹಾಡಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹಾಡಿಗಳಲ್ಲಿನ 123 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಿಸಲಾಗುವುದು ಎಂದು ಸಚಿವ ಕೆ. ವೆಂಕಟೇಶ್ ಹೇಳಿದರು.