ಜಾಗೃತಿ ಜಾಥಾ ಕಾರ್ಯಕ್ರಮ
ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಎದುರಾಗಿದ್ದು, ಈಗಾಗಲೆ ಜನರು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಿಂದ ಕಂಗಾಲಾಗಿದ್ದಾರೆ. ಸಾಂಸ್ಕೃತಿಕ ದಾಳಿಗಳು ಹೆಚ್ಚಾಗಿ ಸಂವಿಧಾನದ ಮೂಲ ಆಶಯಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಇವುಗಳ ವಿರುದ್ದ ಜನ ಜಾಗೃತರಾಗಿ ಈ ಬಾರಿ ಮತ ಚಲಾಯಿಸಬೇಕು ಎಂದು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ (ಜನ್ನಿ) ಹೇಳಿದರು.
ನಗರದ ಮಹಾವೀರ ವೃತ್ತದ ಬಳಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಏರ್ಪಡಿಸಿದ್ದ ‘ಸಂವಿಧಾನ ಉಳಿವಿಗಾಗಿ ಸಾಂಸ್ಕೃತಿಕ ಪ್ರತಿಶೋಧ’ ಸಮುದಾಯ ಕರ್ನಾಟಕದ ಜಾಥಾ ಕಾರ್ಯಕ್ರಮವನ್ನು ಹಾಸನ ನಗರದ ಮಹಾವೀರ ವೃತ್ತದಲ್ಲಿ ಉದ್ಘಾಟಿಸಿ ಮಾತನಾಡಿದರು.‘ಸಮುದಾಯ ಕರ್ನಾಟಕ ಈ ಬಾರಿ ದೊಡ್ಡ ಮಟ್ಟದಲ್ಲಿ ಸಾಂಸ್ಕೃತಿಕ ಪ್ರತಿರೋಧ ಕೊಡಬೇಕೆಂದು ರಾಜಪ್ಪ ದಳವಾಯಿಯವರ ‘ಜನ ಸತ್ತಿಲ್ಲ’ ಎಂಬ ಹೆಸರಿನ ಕಿರು ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶಿಸುತ್ತಿದ್ದೇವೆ. ಈಗಾಗಲೆ ನಾವು ಬೆಂಗಳೂರು, ಚಾಮರಾಜನಗರ, ಕೋಲಾರ ಜಿಲ್ಲೆಗಳಲ್ಲಿ ಮುಗಿಸಿ ಹಾಸನಕ್ಕೆ ಬಂದಿದ್ದೇವೆ. ಜನರು ಬಹಳ ಪ್ರೀತಿಯಿಂದ ನಮ್ಮನ್ನು ಸ್ವಾಗತಿಸಿ ಪ್ರೋತ್ಸಾಹ ಕೊಡುತ್ತಿದ್ದಾರೆ. ನಾಟಕ ಇಂದಿನಿ ಭ್ರಷ್ಟ ಪರಿಸ್ಥಿತಿಗಳನ್ನು ಎತ್ತಿ ಹಿಡಿದಿದೆ. ಹೀಗೆ ಕಳೆದ ೫೦ ವರ್ಷಗಳಿಂದ ಸಮುದಾಯ ಕರ್ನಾಟಕ ಜನರ ನಡುವೆ ರೈತರು, ಕಾರ್ಮಿಕರು, ದಲಿತರು, ಶೋಷಿತರ ಪರವಾಗಿ ಕೆಲಸ ಮಾಡುತ್ತ ಬಂದಿದೆ. ಇಂದು ಈ ಸರ್ವಾಧಿಕಾರಿ ವಿರುದ್ದ ನಾಟಕ ಕಟ್ಟಿ ಜನರನ್ನು ಎಚ್ಚರಿಸಲು ಬಂದಿದ್ದೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಹೆಸರಿನಲ್ಲಿ ಜನರನ್ನು ರಾಜಕಾರಣಿಗಳು ಜಾತಿ, ಧರ್ಮದ ವಿಷ ಬೀಜ ಬಿತ್ತುವುದು, ಹಣ, ಹೆಂಡ ನೀಡಿ ಮತ ಖರೀದಿಸುವುದು, ಧರ್ಮ ಧರ್ಮಗಳ ನಡುವೆ ಕಂದಕಗಳನ್ನು ತಂದು ಅದನ್ನು ಮತಗಳಾಗಿ ಪರಿವರ್ತಿಸುವುದನ್ನು ನಾಟಕ ತೆರೆದಿಟ್ಟಿದೆ. ಈ ಎಲ್ಲಾ ವಿಷಯಗಳನ್ನು ಒಳಗೊಂಡಂತೆ ನಾಟಕ ಅದ್ಭುತವಾಗಿ ಮೂಡಿ ಬಂದಿದೆ ಎಂದರು.
ಹಾಸನಲ್ಲಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಏರ್ಪಡಿಸಿದ್ದ ‘ಸಂವಿಧಾನ ಉಳಿವಿಗಾಗಿ ಸಾಂಸ್ಕೃತಿಕ ಪ್ರತಿಶೋಧ’ ಕಾರ್ಯಕ್ರಮದಲ್ಲಿ ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ ಮಾತನಾಡಿದರು.