ವಿಶೇಷ ವರದಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿರಾಜಧಾನಿ ಬೆಂಗಳೂರಲ್ಲಿ ಮಹಾನಗರ ಪಾಲಿಕೆ ಬೀದಿ ನಾಯಿಗಳಿಗೆ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಮಾಂಸದೂಟ ಬಡಿಸಲು ತಯಾರಿ ನಡೆದಿದ್ದರೆ, ಅವಳಿ ನಗರದಲ್ಲಿ ಬೀದಿ ನಾಯಿಗಳು ದಾರಿಹೋಕರ ಮೇಲೆ ದಿಢೀರ್ ದಾಳಿ ಮಾಡುತ್ತಿದ್ದು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ರಬಕವಿಯ ಹೊರವಲಯ ಹಾಗೂ ಬನಹಟ್ಟಿ ವೈಭವ ಚಿತ್ರಮಂದಿರ ಸೇರಿದಂತೆ ಅನೇಕ ಕಡೆಗಳಲ್ಲಿ ದ್ವಿಪಥ ರಸ್ತೆಗಳಿದ್ದು, ನಾಯಿಗಳ ಕಚ್ಚಾಡುತ್ತ ದಿಢೀರ್ ರಸ್ತೆ ಮೇಲೆ ಅಡ್ಡಬಂದು ಬೈಕ್ ಸವಾರರು ಬಿದ್ದು ಅಪಘಾತಗಳಾಗುತ್ತಿವೆ. ನಗರದ ಗಾಂಧಿ ವೃತ್ತ, ಲಕ್ಷ್ಮೀ ನಗರ, ಎಂಎಂ ಬಂಗ್ಲೆ, ವೈಭವ ಚಿತ್ರಮಂದಿರ, ಆಸಂಗಿ ವೃತ್ತ, ರಬಕವಿಯ ಭಗೀರಥ ವೃತ್ತ, ಹೊಸೂರು ಕ್ರಾಸ್, ಹಳಿಂಗಳಿ ನಾಕೆ, ಶ್ರೀನಿವಾಸ ಚಿತ್ರಮಂದಿರ, ನಗರಸಭೆ ಮುಂಭಾಗ ಸೇರಿದಂತೆ ಎಲ್ಲೆಡೆಯೂ ನಾಯಿಗಳು ಪರಸ್ಪರ ಕಚ್ಚಾಟದಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.
ರಾತ್ರಿ ವೇಳೆ ರಸ್ತೆ ಮೇಲೆ ಗುಂಪು ಗುಂಪಾಗಿ ಯಾರ ಮೈಮೇಲೆ ಎರಗುತ್ತವೆಯೋ ಎನ್ನುವ ಆತಂಕದಲ್ಲಿ ಜನರಿದ್ದಾರೆ. ಸದ್ಯ ನಾಯಿಗಳ ಕಾಟದ ಹೆಚ್ಚಾದ ಬಗ್ಗೆ ಸ್ಥಳೀಯ ನಗರಸಭೆಗೆ ಹಲವು ಬಾರಿ ಮಾಹಿತಿ ನೀಡಿದರೂ ಅಧಿಕಾರಿಗಳ ಎಂದಿನ ದಿವ್ಯ ನಿರ್ಲಕ್ಷ್ಯತನದ ಕಾರಣ ಜನತೆ ನಾಯಿಕಾಟ ಅನುಭವಿಸುವಂತಾಗಿದೆ. ಬೀದಿನಾಯಿಗಳ ಕಾಟದಿಂದ ಅನೇಕ ಅವಘಡಗಳು ಸಂಭವಿಸುತ್ತಿದ್ದು, ತಕ್ಷಣವೇ ನಗರಸಭೆ ಅಧಿಕಾರಿಗಳು ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕಿದೆ.ಕೆಲಸ ನಿರ್ವಹಿಸಿ ರಾತ್ರಿ ಮನೆಗೆ ತೆರಳುವಾಗ ನಗರದ ಮುಖ್ಯ ಬೀದಿಗಳಲ್ಲಿ ನಾಯಿಗಳು ವಾಹನ ಬೆಂಬತ್ತುವುದು, ಅಡ್ಡ ಬರುವುದು ಸಾಮಾನ್ಯವಾಗಿದೆ. ಅವುಗಳಿಂದ ತಪ್ಪಿಸಿಕೊಂಡು ಮನೆ ಸೇರುವುದೆಂದರೆ ಮಹಾ ಸಂಗ್ರಾಮ ಗೆದ್ದಂತೆ ಭಾಸವಾಗುತ್ತದೆ. ನಗರಸಭೆ ಬೀದಿ ನಾಯಿಗಳ ನಿಗ್ರಹಕ್ಕೆ ಅಗತ್ಯ ಕ್ರಮ ಕೈಗೊಂಡು ನಾಗರಿಕರಲ್ಲಿ ನೆಮ್ಮದಿ ಮೂಡಿಸಬೇಕಿದೆ.
- ಮಲ್ಲಿಕಾರ್ಜುನ ಬಾಲಚಂದ್ರಪ್ಪ ಮುತ್ತೂರ. ವರ್ತಕರು, ರಬಕವಿಬೀದಿ ನಾಯಿಗಳ ಹಾವಳಿ ತಡೆಗೆ ಪಶುಪಾಲನಾ ಇಲಾಖೆ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರು ಇವುಗಳ ಕಾಟದಿಂದ ಮುಕ್ತಿ ಹೊಂದುವಲ್ಲಿ ಶೀಘ್ರ ಕಾರ್ಯ ನಡೆಸಲಾಗುವುದು.
-ರಮೇಶ ಜಾಧವ, ಪೌರಾಯುಕ್ತರು, ರಬಕವಿ-ಬನಹಟ್ಟಿ