ಒಂದು ಲಕ್ಷ ಬುಡಕಟ್ಟು ಸಮುದಾಯಕ್ಕೆ ಹಕ್ಕುಪತ್ರ ವಿತರಣೆ
ಕನ್ನಡಪ್ರಭ ವಾರ್ತೆ ಹೊಸಪೇಟೆರಾಜ್ಯದಲ್ಲಿ ಬಿಜೆಪಿ ದುರಾಡಳಿತಕ್ಕೆ ಬೇಸತ್ತ ರಾಜ್ಯದ ಜನತೆ, ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟು ಅಧಿಕಾರ ನೀಡಿದ್ದಾರೆ. ಇದರ ಫಲವಾಗಿ ಇಂದು ನಾವು ರಾಜ್ಯದ 1 ಲಕ್ಷಕ್ಕೂ ಅಧಿಕ ಬುಡಕಟ್ಟು ಸಮುದಾಯಗಳಿಗೆ ಹಕ್ಕುಪತ್ರ ವಿತರಣೆ ಮಾಡುತ್ತಿದ್ದೇವೆ ಎಂದು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಹಟ್ಟಿ, ತಾಂಡಾಗಳಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯಗಳ ಸಮೀಕ್ಷೆ ಮಾಡಲಾಗಿತ್ತು. ವಿಜಯನಗರ ಜಿಲ್ಲೆಯಲ್ಲಿ 3,500 ಜನರ ಸಮೀಕ್ಷೆಯ ಜತೆಗೆ ರಾಜ್ಯದಲ್ಲಿ ಒಟ್ಟು 1 ಲಕ್ಷ ಕುಟುಂಬಗಳು ವಾಸವಾಗಿರುವ ಜಾಗವನ್ನು ನೋಂದಣಿ ಮಾಡಿ, ಡಿಜಿಟಲ್ ಖಾತೆ ನೀಡಿ, ಅವರಿಗೆ ಹಕ್ಕುಪತ್ರ ನೀಡುವ ಮೂಲಕ ಸರ್ಕಾರ ರಾಜ್ಯದ ಇತಿಹಾಸದಲ್ಲೇ ಬಹುದೊಡ್ಡ ಸಾಧನೆ ಮಾಡಿದೆ ಎಂದರು.ಕಾಂಗ್ರೆಸ್ ಅನುಷ್ಠಾನ ಮಾಡಿರುವ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿ, ರಾಜ್ಯದ ಜನರಿಗೆ ಏನು ಕೊಡುಗೆ ನೀಡಿದೆ ಎಂದು ಜನರ ಮುಂದೆ ಹೇಳಬೇಕು. ಕಲ್ಯಾಣ ಕರ್ನಾಟಕ ಭಾಗವನ್ನು ಅಭಿವೃದ್ಧಿಪಡಿಸಬೇಕೆಂಬ ಕಾರಣಕ್ಕಾಗಿ, ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ₹5 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಅದೇ ರೀತಿಯ ಕ್ರಿಯಾಯೋಜನೆ ಮಾಡಿ, ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ. ದೇಶದಲ್ಲಿ ನುಡಿದಂತೆ ನಡೆದ ಏಕೈಕ ರಾಜ್ಯ ಸರ್ಕಾರ ನಮ್ಮದು ಎಂದರು.
ಈ ವರೆಗೂ ಕೇಂದ್ರ ಸರ್ಕಾರ ದೇಶದ ಜನರಿಗೆ ಸುಳ್ಳು ಹೇಳುತ್ತಾ ಬಂದಿದೆ. ಜನರ ದೈನಂದಿನ ಬದುಕಿಗೆ ಬೇಕಾಗಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಆರಂಭದಲ್ಲಿ ಸಿಲಿಂಡರ್‌ಗೆ ಸಬ್ಸಿಡಿ ನೀಡಿ ಮತ್ತೆ ಕಿತ್ತುಕೊಂಡು ಬೆಲೆ ಏರಿಕೆ ಮಾಡಿದೆ. ಇದರಿಂದ ದೇಶದ ಬಡಜನರ ರಕ್ತ ಹೀರುತ್ತಿದ್ದಾರೆ ಎಂದು ದೂರಿದರು.ಈ ಹಿಂದೆ ದೇಶದಲ್ಲಿ ಯುಪಿಎ ಸರ್ಕಾರ ಇದ್ದಾಗ ದೇಶದ 27 ಕೋಟಿ ಜನರಿಗೆ ಹತ್ತಾರು ಸೌಲಭ್ಯ ನೀಡಿತ್ತು. ಆದರೆ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳ ₹16 ಲಕ್ಷ ಕೋಟಿಗಳ ಸಾಲ ಮನ್ನಾ ಮಾಡಿದೆ. ಅವರು ಬಡವರ, ರೈತರ ಹಾಗೂ ಶೋಷಿತ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿಲ್ಲ. ಈ ದೇಶದಲ್ಲಿ ನೂರು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದೆ ಎಂದರು.ಈ ದೇಶದಲ್ಲಿ ವಿಮಾನ ಅಪಹರಣ, ಸಂಸತ್ತಿನ ಮೇಲೆ ದಾಳಿ, ಪುಲ್ವಾಮಾ ದಾಳಿ, ಪಹಲ್ಗಾಮ್‌ನಲ್ಲಿ ಉಗ್ರದ ದಾಳಿ ನಡೆದಿದ್ದ ಸಂದರ್ಭದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿತ್ತು. ಆದರೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಇಂತಹ ದಾಳಿ ನಡೆದಿಲ್ಲ. ಬಿಜೆಪಿಯಿಂದ ದೇಶದ ಸಮಗ್ರತೆಗೆ ಧಕ್ಕೆ ಮತ್ತು ಅಪಾಯ ಕಾದಿದೆ ಎಂದು ಆರೋಪಿಸಿದರು.