ಗಜೇಂದ್ರಗಡದಲ್ಲಿ ಬಿಡಾಡಿ ದನಗಳ ಹಾವಳಿಗೆ ಬೇಸತ್ತ ಜನ

KannadaprabhaNewsNetwork | Published : Aug 8, 2024 1:33 AM

ಸಾರಾಂಶ

ಗಜೇಂದ್ರಗಡ ಪಟ್ಟಣದಲ್ಲಿ ಮತ್ತೆ ಬೀದಿದನಗಳ ಕಾಳಗಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪಟ್ಟಣದಲ್ಲಿ ಒಂದಿಲ್ಲೊಂದು ಬಡಾವಣೆಯಲ್ಲಿ ಒಂದಿಲ್ಲೊಂದು ಹೊತ್ತಿನಲ್ಲಿ ಬೀದಿ ದನಗಳ ಕಾಳಗ ನಡೆದಿರುತ್ತದೆ. ಇಲ್ಲದಿದ್ದರೆ ರಸ್ತೆಯ ಮಧ್ಯೆ ವಿಶ್ರಾಂತಿ ಪಡೆಯುತ್ತಿರುತ್ತವೆ.

ಎಸ್.ಎಂ. ಸೈಯದ್

ಗಜೇಂದ್ರಗಡ: ಪಟ್ಟಣದಲ್ಲಿ ಮತ್ತೆ ಬೀದಿದನಗಳ ಕಾಳಗಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಒಮ್ಮೆ ಬಸ್ ನಿಲ್ದಾಣ, ಮತ್ತೊಮ್ಮೆ ತರಕಾರಿ ಮಾರುಕಟ್ಟೆ, ಇನ್ನೊಮ್ಮೆ ಜೋಡು ರಸ್ತೆ, ಹೀಗೆ ತಮಗೆ ಮನಸ್ಸಿಗೆ ಬಂದ ರಸ್ತೆಯಲ್ಲೇ ಠಿಕಾಣಿ ಹೂಡುವ ಬೀದಿದನಗಳು ಸಿಟ್ಟಿಗೆದ್ದರೆ ವಾಹನ ಹಾಗೂ ಜನರನ್ನು ಲೆಕ್ಕಿಸದೆ ಕಾಳಗ ನಡೆಸುತ್ತಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ.

ಪಟ್ಟಣದಲ್ಲಿ ಒಂದಿಲ್ಲೊಂದು ಬಡಾವಣೆಯಲ್ಲಿ ಒಂದಿಲ್ಲೊಂದು ಹೊತ್ತಿನಲ್ಲಿ ಬೀದಿ ದನಗಳ ಕಾಳಗ ನಡೆದಿರುತ್ತದೆ. ಇಲ್ಲದಿದ್ದರೆ ರಸ್ತೆಯ ಮಧ್ಯೆ ವಿಶ್ರಾಂತಿ ಪಡೆಯುತ್ತಿರುತ್ತವೆ. ಬೀದಿ ದನಗಳ ಕಾಳಗ ಆರಂಭವಾದರೆ ಜನತೆ ಈ ಪ್ರದೇಶದಲ್ಲಿ ಭಯದಲ್ಲೇ ಓಡಾಡಬೇಕು. ಇತ್ತಿಚೆಗೆ ಜಿಲ್ಲೆಯಲ್ಲಿ ದನದ ಸಿಟ್ಟಿಗೆ ವ್ಯಕ್ತಿ ಬಲಿಯಾದ ಘಟನೆ ನಡೆದಿದ್ದರೂ ಸ್ಥಳೀಯ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಅಧಿಕಾರಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ವ್ಯಾಪಾರ ನಡೆಸುವವರು, ಗ್ರಾಹಕರು ಸದಾ ಭಯದಲ್ಲೇ ಇರುತ್ತಾರೆ. ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕುವಂತೆ ಹಲವಾರು ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಬೀದಿದನಗಳ ಹಾವಳಿ ಕುರಿತು ಮನವಿ ಮಾಡಿದಾಗ ಅಧಿಕಾರಿಗಳು ಪ್ರಕಟಣೆ ಹೊರಡಿಸಿ, ಸುಮ್ಮನಾಗುತ್ತಾರೆ ಎಂದು ಜನತೆ ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣದ ಕಾಲಕಾಲೇಶ್ವರ ವೃತ್ತ, ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಕಿತ್ತೂರ ರಾಣಿ ಚೆನ್ನಮ್ಮ ವೃತ್ತ ಹಾಗೂ ತರಕಾರಿ ಮಾರುಕಟ್ಟೆ ಅಕ್ಕಪಕ್ಕದಲ್ಲಿ ಸಾರ್ವಜನಿಕರು ಮುಂಜಾನೆ ಹಾಗೂ ಸಾಯಂಕಾಲ ದನಗಳ ಗುಂಪು ಬೀಡು ಬಿಟ್ಟಿರುತ್ತದೆ. ಕೆಲವು ದಿನಗಳ ಹಿಂದೆ ಪಟ್ಟಣದಲ್ಲಿ ಬೀದಿ ದನಗಳ ಗುಂಪಿನಲ್ಲಿ ಕಾಳಗ ಆರಂಭವಾಗಿ, ಪೆಟ್ರೊಲ್ ಬಂಕ್‌ಗೆ ನುಗ್ಗಿದ್ದವು. ಕೆಲವರು ಕಾದಾಟ ಬಿಡಿಸಲು ನೀರು ಹಾಕಿದರು, ಬಡಿಗೆಯಿಂದ ಬಡಿದರು. ಆದರೂ ಜಗ್ಗಿರಲಿಲ್ಲ. ಈ ಘಟನೆ ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ಪಟ್ಟಣದಲ್ಲಿ ಈ ಹಿಂದೆ ಹಲವಾರು ಬಾರಿ ಪುರಸಭೆ ಅಧಿಕಾರಿಗಳು ದನಗಳ ಮಾಲೀಕರಿಗೆ ಬೀದಿಯಲ್ಲಿ ಬಿಡದಂತೆ ಸೂಚನೆ ನೀಡಿದ್ದಾರೆ. ದಂಡ ಹಾಕುವುದಾಗಿ ಎಚ್ಚರಿಸಿದ್ದಾರೆ. ಕೆಲಕಾಲದ ಆನಂತರ ಬೀದಿಗಳಲ್ಲಿ ಮತ್ತೆ ದನಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಪುರಸಭೆ ಅಧಿಕಾರಿಗಳು ಪಟ್ಟಣದಲ್ಲಿರುವ ದನಗಳ ಮಾಲೀಕರಿಗೆ ಒಂದು ತಿಂಗಳ ಕಾಲವಕಾಶ ನೀಡಿ, ಬಿಡಾಡಿ ದನಗಳನ್ನು ಹಿಡಿದು ಗೋಶಾಲೆ ಬಿಟ್ಟರೆ ಮಾತ್ರ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಲು ಸಾಧ್ಯ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

Share this article