ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ, ಕಂಬಿಬಾಣೆ, 7ನೇ ಹೊಸಕೋಟೆ, ಮತ್ತಿಕಾಡು, ಭೂತನಕಾಡು ಹಾಗೂ ಮಿನುಕೊಲ್ಲಿ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆಗಳು ಹಗಲು ರಾತ್ರಿಯ ಪರಿವೇ ಇಲ್ಲದೆ ಕಾಫಿ ತೋಟಗಳಲ್ಲಿ ಉಪಟಳ ಮುಂದುವರೆಸಿದೆ. ಮನೆಯಂಗಳಕ್ಕೆ, ಮನೆ ಬಾಗಿಲಿಗೆ, ಜನವಸತಿ ಪ್ರದೇಶದಲ್ಲಿ ಎಗ್ಗಿಲ್ಲದೆ ಸಂಚರಿಸುತ್ತಿರುವುದು ಆತಂಕ ಉಂಟುಮಾಡಿದೆ.ಕಳೆದ 15 ದಿನಗಳಿಂದ ಕೊಡಗರಹಳ್ಳಿ ಉಪ್ಪುತೋಡು, 7ನೇ ಹೊಸಕೋಟೆ, ಕಂಬಿಬಾಣೆ, ಅತ್ತೂರು ನಲ್ಲೂರು, ತೊಂಡೂರು ವ್ಯಾಪ್ತಿಯಲ್ಲಿ ದೈತ್ಯ ಸಲಗ, ಮರಿ ಆನೆ ಹಾಗೂ ಚಿಕ್ಕ ಗಾತ್ರದ ಆನೆ ದಿನನಿತ್ಯ ಈ ವ್ಯಾಪ್ತಿಯಲ್ಲಿ ಸಂಚರಿಸುತ್ತಿದೆ. ಸಾಮಾನ್ಯವಾಗಿ ತಡರಾತ್ರಿ ಬಂದು ಬೆಳಗ್ಗಿನ ಆನೆಕಾಡು ಇಲ್ಲವೇ ಮೀಸಲು ಅರಣ್ಯಗಳಿಗೆ ತೆರಳುತ್ತಿದ್ದ ಈ ಆನೆಗಳು ಇತ್ತೀಚೆಗೆ ಕೊಡಗರಹಳ್ಳಿ ಉಪ್ಪುತೊಡು ಕಂಬಿಬಾಣೆ ವ್ಯಾಪ್ತಿಯಲ್ಲಿ ಕಾಫಿತೋಟಗಳಲ್ಲೇ ವಾಸ್ತವ್ಯ ಹೂಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ರೀತಿ ಹೊರೂರು, ಕೆದಕಲ್, ಕಾರೆಕೊಲ್ಲಿ, ಮತ್ತಿಕಾಡು ಭೂತನಕಾಡು, ಮಹಾಲಕ್ಷ್ಮೀ, ಉಲುಗುಲಿ, ಶಾಂಗೀರಿ, ಅಂದಗೋವೆ, ಕಲ್ಲೂರು, ಹೆರೂರು, 7ನೇ ಹೊಸಕೋಟೆ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ತೀವ್ರವಾಗಿದೆ.
ಆನೆಗಳು ವಾಹನಗಳಿಗೆ ದಾಳಿ ನಡೆಸಿ ಪುಡಿಗಟ್ಟುತ್ತಿರುವ ಬಗ್ಗೆ ವರದಿಯಾಗಿದೆ. ಆನೆ ದಾಳಿಗೆ ಸಿಲುಕಿದ ಕಾರನ್ನು ರಿಪೇರಿಗೊಳಿಸಿ ತಂದು ಇಟ್ಟ ದಿನವೇ ಮತ್ತೆ ಕಾಡಾನೆ ದಾಳಿ ನಡೆಸಿ ಕಾರನ್ನು ಪುಡಿಗಟ್ಟಿದೆ. ಇದರೊಂದಿಗೆ ಕಾಫಿ ತೋಟಗಳಲ್ಲಿ ನೆಟ್ಟಿರುವ ಹಣ್ಣಿನ ಗಿಡಗಳನ್ನು ಕಿತ್ತು ಬಿಸಾಡುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಕಾರು ಮಾಲೀಕ ಹರಿನಾಥರೈ ನೋವು ತೋಡಿಕೊಂಡಿದ್ದಾರೆ.ತೋಟದಿಂದ ತೋಟಕ್ಕೆ ಸಂಚಾರ: ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು ರೈತರು ಗದ್ದೆಯತ್ತ ಮುಖಮಾಡಿದ್ದಾರೆ. ಕಾಫಿ ಬೆಳೆಗಾರರು ತೋಟದಲ್ಲಿ ಗೊಬ್ಬರ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಕಾಡಾನೆಗಳು ತೋಟದಿಂದ ತೋಟಕ್ಕೆ ಸಂಚರಿಸುತ್ತಿದ್ದು, ಕೆಲಸದ ಹೊತ್ತಿನಲ್ಲಿ ದಾಳಿ ನಡೆಸುವ ಪ್ರಕರಣಗಳು ಆಗಿಂದಾಗ್ಗೆ ಮರುಕಳಿಸುತ್ತಿವೆ. ಕೆಲವು ದಿನಗಳ ಹಿಂದೆ ಕಂಬಿಬಾಣೆ ಮತ್ತಿಕಾಡು ಮುಖ್ಯ ರಸ್ತೆಯಲ್ಲಿ ಭಾರಿ ಗಾತ್ರದ ಒಂಟಿ ಸಲಗವೊಂದು ಜನವಸತಿ ದಟ್ಟಣೆ ಇರುವ ಪ್ರದೇಶದಲ್ಲೇ ಓಡಾಡಿ ಭೀತಿ ಹುಟ್ಟಿಸಿತು. ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮಕ್ಕಳು ಮಹಿಳೆಯರು ಬಚಾವಾಗಿದ್ದು, ಶಾಲಾ ದಿನಗಳ ಆರಂಭದ ಬಳಿಕ ಪರಿಸ್ಥಿತಿ ಏನು ಎಂಬ ಚಿಂತೆ ಕಾಡಲಾರಂಭಿಸಿದೆ.
ಮೇವು ಮತ್ತು ನೀರಿನ ಕೊರತೆಯಿಂದ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಉಪಶಮನ ಮತ್ತು ಪರಿಹಾರ ನೀಡುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಮಾನವ ಜೀವ ಹಾನಿಗೆ 15 ಲಕ್ಷ ರು., ಆಸ್ತಿ ಫಸಲು ನಷ್ಟಕ್ಕೆ ಪರಿಹಾರ ಈ ಬಗ್ಗೆ ಜನತೆಯಲ್ಲಿ ಅಸಮಾಧಾನವಿದೆ. ಆನೆಗಳನ್ನು ಕಾಲ ಕಾಲಕ್ಕೆ ಹಿಡಿದು ಸ್ಥಳಾಂತರಿಸುವುದು, ಕಾಡಿನಿಂದ ನಾಡಿನತ್ತ ಬಾರದಂತೆ ನೋಡಿಕೊಳ್ಳುವುದು ಅರಣ್ಯ ಇಲಾಖೆಯ ಅದ್ಯತೆಯಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.ಆನೆಗಳ ಗುಂಪು ಸಂಚಾರ: ಕಳೆದ ಕೆಲವು ಸಮಯದಿಂದ ಇಲ್ಲವಾಗಿದ್ದ ಕಾಡಾನೆಗಳ ಸಂಚಾರ ಈ ವ್ಯಾಪ್ತಿಯಲ್ಲಿ ಹಠತ್ತಾಗಿ ಕಾಣಿಸಿಕೊಂಡಿದ್ದು, ಕಳೆದ ಹಲವು ದಿನಗಳಿಂದ 2 ರಿಂದ 4 ಆನೆಗಳ ಗುಂಪು ಸಂಚಾರ ಮಾಡುತ್ತಿವೆ. ಇದರಿಂದಾಗಿ ಬೆಳ್ಳಂಬೆಳಗ್ಗೆ ವಾಯುವಿಹಾರ, ದೂರದ ಊರುಗಳಿಗೆ ಸ್ವಂತ ವಾಹನ ಅಥವಾ ಬಾಡಿಗೆ ವಾಹನಗಳಲ್ಲಿ ತೆರಳುವವರಿಗೆ ಬ್ರೇಕ್ ಬಿದ್ದಿದೆ. ಅನಿವಾರ್ಯ ಸಂದರ್ಭ ಕಾಡಾನೆಗಳು ದಾರಿಯಲ್ಲೇ ಮುಖಾಮುಖಿ ಎದುರಾಗಿ ಕೆಲವು ಕಾರ್ಮಿಕರು ಹಾಗೂ ದ್ವಿಚಕ್ರ ವಾಹನ ಸವಾರರ ಮೇಲೆ ದಾಳಿ ನಡೆಸಿದ ಪ್ರಕರಣಗಳು ಜನಮಾನಸದಲ್ಲಿ ಇನ್ನು ಹಸಿಯಾಗಿರುವಾಗಲೇ ಕಾಡಾನೆಗಳ ಉಪಟಳದಿಂದಾಗಿ ಕೂದಲೆಳೆಯ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ ಘಟನೆಗಳು ಸಂಭವಿಸಿದೆ.
ಕಾಫಿ ಜೊತೆಗೆ ಅಡಕೆ, ಬಾಳೆ ಕೃಷಿ, ಕಿತ್ತಳೆ, ಬೆಣ್ಣೆ ಹಣ್ಣಿನ ಗಿಡಗಳನ್ನು ನೆಟ್ಟವರು ಇದೀಗ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವಂತಾಗಿದೆ. ಈ ಸಂದರ್ಭ ಹೆಚ್ಚು ವನ್ಯಜೀವಿ ಮಾನವ ಸಂಘರ್ಷ ಜೊತೆಗೆ ಕೃಷಿಕರ ಆಸ್ತಿಪಾಸ್ತಿ ಫಸಲು ನಷ್ಟಗೊಳ್ಳುವುದರೊಂದಿಗೆ ಮಾನವ ಪ್ರಾಣ ಹಾನಿ ಸಂಭವಿಸುವುದಕ್ಕೆ ಮುನ್ನಡಿ ಬರೆದಂತೆ ಆಗಿದೆ.ಈಗಾಗಲೇ ರಾಜ್ಯಸರ್ಕಾರ ಆನೆ ಹಾವಳಿ ತಡೆ ಕ್ಪಿಪ್ರಪಡೆಯನ್ನು ರಚಿಸಿದೆ. ಜೊತೆಗೆ ಮಾನವ ಪ್ರಾಣಹಾನಿ ಬೆಳೆ ಮತ್ತು ಕೃಷಿ ಹಾನಿಗೆ ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಿದರೂ ಇದು ಕೃಷಿಕನ ಖರ್ಚುವೆಚ್ಚಗಳಿಗೆ ಸರಿದೂಗೂವುದಿಲ್ಲ. ಈ ಹಿನ್ನೆಲೆಯಲ್ಲಿ ಆನೆ ಹಾವಳಿ ತಡೆಯಲು ಆನೆ ಹಿಡಿದು ಸ್ಥಳಾಂತರ ಮಾಡುವುದು ಏಕೈಕ ಪರಿಹಾರ ಎಂದು ಬೆಳೆಗಾರರು ಅಭಿಪ್ರಾಯಿಸಿದ್ದಾರೆ. ಸ್ಥಳಾಂತರ , ಪರಿಹಾರಗಳಿಗೆ ಸರ್ಕಾರ ಮುಂದಾಗದಿರುವುದಕ್ಕೆ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಡಾನೆಗಳ ಮಾಹಿತಿ ದೊರೆತ ಕೂಡಲೇ ಅರಣ್ಯ ಇಲಾಖೆ ಕ್ಷಿಪ್ರಪಡೆ ಟ್ರ್ಯಾಕ್ ಮಾಡಿ ಸಮೀಪದ ಅರಣ್ಯಕ್ಕೆ ಅಟ್ಟುತ್ತದೆ. ಇದು ಅವೈಜ್ಞಾನಿಕವಾದ ಕ್ರಮವಾಗಿದ್ದು, ಜನರಿಗೆ ಜೀವಪಾಯವಿದೆ. ಕಾಫಿ, ಏಲಕ್ಕಿ, ಕರಿಮೆಣಸು ಇತರೆ ಗಿಡಗಳು ಕಾಡಾನೆಗಳ ಕಾಲುತುಳಿತಕ್ಕೆ ಸಿಲುಕಿ ನಾಶಗೊಳ್ಳುತ್ತಿವೆ. ಹೀಗಾಗಿ ಶಾಶ್ವತ ಪರಿಹಾರ ಎನ್ನುವುದು ಮರೀಚಿಕೆ.ಕೆದಕಲ್ ಹೊರೂರು ಭಾಗದಲ್ಲಿ ದಿನದ 24 ಗಂಟೆಯು ಕಾಡಾನೆಗಳು ಅಕ್ಕ ಪಕ್ಕದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದೆ. ಕಾಫಿ ಬೆಳೆಗಾರರಿಗೆ ಕೂಲಿ ಕಾರ್ಮಿಕರಿಗೆ ಜೀವ ಅಪಾಯ ತಪ್ಪಿದ್ದಲ್ಲ. ಬುಧವಾರ ಕಾರೆಕೊಲ್ಲಿ ತೋಟದ ಮಾಲೀಕರಾದ ರಾಮನಾಥನ್ ಚೆಟ್ಟಿಯಾರ್ ಅವರಿಗೆ ಅವರ ಮನೆಯ ದಾರಿಯಲ್ಲಿಯೇ ಭಾರಿ ಗಾತ್ರದ ಸಲಗ ಎದುರಾಗಿದೆ. ಕೂದಲೆಳೆಯಲ್ಲಿ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಹಾರ ಅರಸಿಕೊಂಡು ಮನೆಯಂಗಳಕ್ಕೆ ಕಾಡಾನೆಗಳು ಬರುತ್ತಿದೆ. ಮನೆಯ ಮುಂದಿನ ಹೂವಿನ ತೋಟ, ಹುಲ್ಲು ಮತ್ತು ವಾಹನಗಳ ಶೆಡ್ ಹಾಗೂ ಕೊಟ್ಟಿಗೆಗಳ ಬಳಿ ಸಂಚರಿಸುತ್ತಿದೆ ಎಂದು ಕಾಫಿ ಬೆಳೆಗಾರ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯರಾದ ಸಂಜುಪೊನ್ನಪ್ಪ ತಿಳಿಸಿದರು.
ಇತ್ತೀಚೆಗೆ ಕಾಡಾನೆಗಳ ಹಾವಳಿ ಮಿತಿಮೀರಿದ್ದು ತೋಟ ಕಾರ್ಮಿಕರು ಈ ವ್ಯಾಪ್ತಿಯಲ್ಲಿ ಜೀವ ಕೈಯಲ್ಲಿ ಹಿಡಿದು ಕೆಲಸ ನಿರ್ವಹಿಸಬೇಕಾಗಿದೆ. ಶಾಶ್ವತ ಪರಿಹಾರ ಪ್ರತಿ ಬಾರಿಯೂ ಬೇಡಿಕೆಯನ್ನು ಸಲ್ಲಿಸಿ ಒತ್ತಾಯಿಸಲಾಗುತ್ತಿದ್ದರೂ ನಮ್ಮ ಕೂಗು ಅರಣ್ಯರೋದನವಾಗಿಯೇ ಉಳಿದುಕೊಂಡಿರುವುದು ವಿಷಾದನೀಯ ಎಂದು ಕಂಬಿಬಾಣೆ ಪಂಚಾಯಿತಿ ಸದಸ್ಯ ಆರ್.ಆರ್.ಮೋಹನ ಹೇಳಿದರು.