ಕನ್ನಡಪ್ರಭ ವಾರ್ತೆ ಹನೂರು
ಜಾತ್ರೆ ಹಬ್ಬ ವಿಶೇಷ ದಿನಗಳ ಮೊದಲ ದಿನ ಶ್ರೀ ಮಠಕ್ಕೆ ಕೊಂಡೊಯ್ಯುವುದು ಹಿಂದಿನಿಂದ ನಡೆದು ಬಂದಿರುವ ಪದ್ಧತಿ. ಸಾಲೂರು ಮಠಕ್ಕೂ ಮಾದಪ್ಪನ ದೇವಾಲಯಕ್ಕೂ ಅವಿನಾವಭಾವ ಸಂಬಂಧದ ಪ್ರತೀಕದಂತೆ ಧಾರ್ಮಿಕವಾಗಿ ಸತ್ತಿಗೆ ಸೂರಪಾನಿ ಮೆರವಣಿಗೆ ಮೂಲಕ ವಾದ್ಯ ಮೇಳಗಳೊಂದಿಗೆ ಮಠಕ್ಕೆ ಬರಲಾಯಿತು.
ಚಿನ್ನದ ತೇರಿನ ಉತ್ಸವಕ್ಕೆ ಮುಗಿ ಬಿದ್ದ ಭಕ್ತರು:ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ ಹಾಗೂ ವಿವಿಧ ವಾಹನಗಳ ಮೂಲಕ ಸುಕ್ಷೇತ್ರಕ್ಕೆ ಆಗಮಿಸಿರುವ ಭಕ್ತರು ರಾತ್ರಿ ವೇಳೆ ಜರುಗಿದ ಚಿನ್ನದ ತೇರನ್ನು ನೋಡಲು ಮುಗಿ ಬಿದ್ದರು. ಚಿನ್ನದ ತೇರು ಬರುತ್ತಿದ್ದಂತೆ ಭಕ್ತರು ಉಘೇ ಉಘೇ ಮಾದಪ್ಪ ಘೋಷಣೆಗಳನ್ನು ಕೂಗಿದರು. ಚಿನ್ನದ ತೇರು ದೇವಾಲಯ ಸುತ್ತ ಸುತ್ತುತ್ತಿದಂತೆ ಭಕ್ತರು ಕೂಡ ಹಿಂಬಾಲಿಸಿ ತೆರಳಿದರು.
ಕಳೆದ 4-5 ದಿನಗಳಿಂದ ನಿರಂತರವಾಗಿ ಕಾಲ್ನಡಿಗೆ ಮೂಲಕ ಆಗಮಿಸಿ ಬೀಡು ಬಿಟ್ಟಿರುವ ಭಕ್ತರು ಸೇರಿದಂತೆ ಮಹಾ ಶಿವರಾತ್ರಿ ಬೆಟ್ಟದಲ್ಲೇ ಕಳೆಯಲು ವಿವಿಧಡೆಯಿಂದ ಬಂದಿರುವ ಭಕ್ತರು ಒಂದಡೆ ಸೇರಿರುವುದರಿಂದ ಮಲೆಮಹಾದೇಶ್ವರ ಬೆಟ್ಟ ದೇವಾಲಯದ ಸುತ್ತ ಮುತ್ತಲ ಪ್ರದೇಶದಲ್ಲಿ ಭಾರಿ ಜನೋಸ್ತಮ ಕಂಡುಬಂತು.
ಮಹಾ ಶಿವರಾತ್ರಿ ಅಂಗವಾಗಿ ದೇವಾಲಯದ ಒಳಗೆ ಹಾಗೂ ಹೊರಗೆ ಸೇರಿದಂತೆ ಸುಕ್ಷೇತ್ರದ ವಿವಿಧೆಡೆ ವಿಜೃಂಭಣೆಯ ಅತ್ಯಾಕರ್ಷಕ ವಿದ್ಯುತ್ ದೀಪಾಲಂಕಾರವನ್ನು ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗಿದೆ. ದೇವಾಲಯದ ರಾಜಗೋಪುರ ತರೆಹೆವಾರಿ ಬಣ್ಣ ಬಣ್ಣಗಳಿಂದ ಕಂಗೋಳಿಸುವಂತೆ ಅಲಂಕರಿಸಲಾಗಿದೆ. ದೇವಾಲಯದ ಇನ್ನಿತರೆಡೆಯೂ ಕೂಡ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದ್ದು ರಾತ್ರಿ ವೇಳೆ ಮನಮೋಹಕವಾಗಿ ಕಂಗೋಳಿಸುತ್ತಿದೆ.
ಮಲೆಮಹದೇಶ್ವರನ ಸನ್ನಿದಿಗೆ ಬಂದಿರುವ ಭಕ್ತರು ಹುಲಿ ವಾಹನ ಉತ್ಸವ, ಬಸವ ವಾಹನ ಉತ್ಸವ, ರುದ್ರಾಕ್ಷಿ ಮಂಟಪ ಉತ್ಸವ, ದಂಡುಗೋಲು ಉತ್ಸವ, ಪಂಜಿನ ಉತ್ಸವ, ಬೆಳ್ಳಿ ರಥದ ಉತ್ಸವ ಸೇರಿದಂತೆ ಮುಡಿ ಸೇವೆ, ಉರುಳು ಸೇವೆ, ರಜಾ ಹೊಡೆಯುವ (ಕಸ ಹೊಡೆಯುವುದು) ಸೇರಿದಂತೆ ವಿವಿಧ ಸೇವೆ ಉತ್ಸವಗಳನ್ನು ಮಾಡುವ ಮೂಲಕ ತಮ್ಮ ಹರಕೆ ತೀರಿಸಿದರು. ವಿವಿಧೆಡೆ ಬೀಡು ಬಿಟ್ಟಿರುವ ಮಾದಪ್ಪನ ಭಕ್ತರು ಭಕ್ತಿ ಪರವಶತೆಯಿಂದ ಮಾದಪ್ಪನ ಮೇಲಿನ ಹಾಡುಗಳನ್ನು ಹಾಡುತ್ತಾ ಕುಣಿಯುತ್ತಾ ಮಾದಪ್ಪನ ಧ್ಯಾನ ಮಾಡಿದರು.
5 ದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಬರುವ ಭಕ್ತಾದಿಗಳಿಗೆ ಸಾಲೂರು ಮಠದಲ್ಲೂ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತಾದಿಗಳು ಶ್ರೀಗಳಿಂದ ಆಶೀರ್ವಾದ ಪಡೆದರು.