ಮಿಂಚೇರಿ ಯಾತ್ರೆಗೆ ಊರು ತೊರೆದ ಬಚ್ಚಬೋರನಹಟ್ಟಿ ಮಂದಿ

KannadaprabhaNewsNetwork |  
Published : Dec 24, 2023, 01:45 AM IST
ಚಿತ್ರದುರ್ಗ ಮೂರನೇ ಪುಟದ  ಲೀಡ್  | Kannada Prabha

ಸಾರಾಂಶ

ಸಾಂಸ್ಕೃತಿಕ ವೈಭವ ಅನಾವರಣಗೊಳಿಸಿದ ಎತ್ತಿನ ಬಂಡಿಗಳ ಸಾಲು, ಹಾದಿಯುದ್ದಕ್ಕೂ ಖುಷಿಯ ಕಲರವ. ಗಾದ್ರಿ ಗುಡ್ಡದತ್ತ ಪಯಣ, 140 ಟ್ರಾಕ್ಟರ್, 69 ಟೆಂಪೋ,70 ಎತ್ತಿನ ಗಾಡಿಗಳ ಮೆರವಣಿಗೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗಐದು ವರ್ಷಕ್ಕೊಮ್ಮೆ ನಡೆಯುವ ಮಿಂಚೇರಿ ಯಾತ್ರೆ ಈ ಸಲ ಭಾರಿ ಸದ್ದು ಮಾಡಿದೆ. ಹಳ್ಳಿಯೊಂದರ ಆಚರಣೆಗಷ್ಟೇ ಇದುವರೆಗೂ ಸೀಮಿತವಾಗಿದ್ದ ಸಂಭ್ರಮ, ಇದೀಗ ಜಿಲ್ಲೆಯಾದ್ಯಂತ ಪಸರಿಸಿದೆ. ಬುಡಕಟ್ಟು ಜನರ ಆಚರಣೆ ಸಾಕ್ಷಿಕರಿಸಲು ಕಣ್ಣು ಹಾಯಿಸಿದಷ್ಟೂ ದೂರದವರೆಗೆ ಎತ್ತಿನ ಬಂಡಿಗಳು, ಟ್ರಾಕ್ಟರ್, ಟೆಂಪೋಗಳು ಸಾಲು ಗಟ್ಟಿದ್ದವು. ರಾಷ್ಟ್ರೀಯ ಹೆದ್ದಾರಿ ಗುಂಟ ಸಾಗುವಾಗ ದೃಶ್ಯ ಮನಮೋಹಕವಾಗಿತ್ತು. ರೊಟ್ಟಿ ಬುತ್ತಿ, ಸಿಹಿ ತಿನಿಸುಗಳ ಮಾಡಿಕೊಂಡು .ಯಾತ್ರೆಗೆ ಹೊರಟ ಬಚ್ಚಬೋರನಹಟ್ಟಿ ಜನ, ಜಾನುವಾರಗಳಗೆ ಬೇಕಾಗುವ ಮೇವನ್ನೂ ಒಯ್ದರು.

ಚಿತ್ರದುರ್ಗ ತಾಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ಜನರು ಸಿರಿಗೆರೆ ಸಮೀಪದ ಮಿಂಚೇರಿ ಬೆಟ್ಟದಲ್ಲಿರುವ ಗಾದ್ರಿಪಾಲನಾಯಕ ಸ್ವಾಮಿಯ ಪೂಜೆಗೆಂದು ಪ್ರತಿ ಐದು ವರ್ಷಕ್ಕೊಮ್ಮೆ ತೆರಳುತ್ತಾರೆ. ಇದಕ್ಕಾಗಿ ಹದಿನೈದು ದಿನಗಳಿಂದಲೇ ಸಿದ್ಧತೆಗಳು ನಡೆದಿರುತ್ತವೆ. ಇಡೀ ಊರಿನ ಮನೆಗಳಿಗೆ ಬೀಗ ಹಾಕಿ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ವಯಸ್ಸಾದವರೊಂದಿಷ್ಟು ಮಂದಿ ಹೊರತು ಪಡಿಸಿದರೆ ಉಳಿದವರು ಮಿಂಚೇರಿ ಯಾತ್ರೆ ಸಂಗಡ ಹೆಜ್ಜೆ ಹಾಕುತ್ತಾರೆ.

ಈ ಮೊದಲು ಐವತ್ತು ಎತ್ತಿನಗಾಡಿಗಳಲ್ಲಿ ತೆರಳುತ್ತಿದ್ದ ಬಚ್ಚಬೋರನಹಟ್ಟಿ ಮಂದಿ ಈ ಭಾರಿಯಂತೂ ಸಾಂಸ್ಕೃತಿಕ ಸ್ಪರ್ಶವನ್ನೇ ನೀಡಿದರು.140 ಟ್ರಾಕ್ಟರ್, 69 ಟೆಂಪೋ,70 ಎತ್ತಿನ ಗಾಡಿಗಳನ್ನು ಇದಕ್ಕಾಗಿ ಸಜ್ಜುಗೊಳಿಸಿದ್ದರು. ಎತ್ತಿನ ಗಾಡಿಗಳ ನೋಡಲು ದಾರಿಯುದ್ದಕ್ಕೂ ರಸ್ತೆ ಇಕ್ಕೆಲಗಳಲ್ಲಿ ಜನತೆ ಜಮಾಯಿಸಿದ್ದರು.

ಚಕ್ಕಡಿಗಳಿಗೆ ತಾಡಪಾಲುಗಳ ಕಟ್ಟಿ ನೆರಳು ಮಾಡಲಾಗಿತ್ತು. ಆಹಾರ ಪದಾರ್ಥ, ಪುಟ್ಟಮಕ್ಕಳು, ಮಹಿಳೆಯರು ಬಂಡಿಯಲ್ಲಿ ಕುಳಿತಿದ್ದರೆ, ಉಳಿದವರು ಹೆಜ್ಜೆ ಹಾಕಿದರು. ಗಾದ್ರಿಪಾಲನಾಯಕ ಸ್ವಾಮಿ ಭಾವಚಿತ್ರ, ಮದಕರಿ ನಾಯಕ, ಮಹರ್ಷಿ ವಾಲ್ಮೀಕಿ ಭಾವಚಿತ್ರಗಳು ಈ ಭಾರಿಯ ಯಾತ್ರೆಯಲ್ಲಿ ಗೋಚರಿಸಿದ್ದು ವಿಶೇಷವಾಗಿತ್ತು.

ಗಂಗಾ ಪೂಜೆ ನೆರವೇರಿಸಿದ ನಂತರ ಶನಿವಾರ ಮುಂಜಾನೆ ಬಚ್ಚಬೋರನಹಟ್ಟಿಯಲ್ಲಿ ಎತ್ತಿನ ಬಂಡಿಗಳು ಸಾಲು ಗಟ್ಟಿದವು. ಬಚ್ಚಬೋರನಹಟ್ಟಿ ಗ್ರಾಮದಿಂದ ಹೊರಟ ಮಿಂಚೇರಿ ಯಾತ್ರೆ ಚಿತ್ರದುರ್ಗ ಹೊರವಲಯ ವೆಂಕಟರಮಣಸ್ವಾಮಿ ದೇವಸ್ಥಾನದ ಬಳಿ ಬಂದಾಗ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.

ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಖುದ್ದು ಹಾಜರಿದ್ದು, ಮಿಂಚೇರಿ ಜಾತ್ರೆಗೆ ಹೂ ಮಳೆಗರೆದು ಬೀಳ್ಕೊಟ್ಟರು. ನಗರಸಭೆ ಮಾಜಿ ಅಧ್ಯಕ್ಷರುಗಳಾದ ಬಿ.ಕಾಂತರಾಜ್, ಸಿ.ಟಿ.ಕೃಷ್ಣಮೂರ್ತಿ, ಎಚ್.ಜೆ.ಕೃಷ್ಣಮೂರ್ತಿ, ಜಿಪಂ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ನಗರಸಭೆ ಸದಸ್ಯ ದೀಪು, ಮುಖಂಡರಾದ ಗೋಪಾಲಸ್ವಾಮಿ ನಾಯಕ, ಅಂಜಿನಪ್ಪ, ಗ್ರಾಮದ ಮುಖಂಡರಾದ ಬೋರಯ್ಯ, ರಮೇಶ್, ನೆಲಗೆತನ ಬೋರಯ್ಯ, ಬಸವರಾಜು, ಬಿ.ಬೋರಯ್ಯ, ಪ್ರಹ್ಲಾದ್, ಸಣ್ಣ ಬೋರಯ್ಯ, ಪಾಲಯ್ಯ, ಪಾಪಣ್ಣ, ಮೂರ್ತಿ, ದೀಪು, ಕಾಟಿಹಳ್ಳಿ ಕರಿಯಣ್ಣ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

ವೆಂಕಟರಮಣಸ್ವಾಮಿ ದೇವಸ್ಥಾನ ದಾಟಿದ ನಂತರ ಎತ್ತಿನ ಬಂಡಿಗಳು ರಾಷ್ಟ್ರೀಯ ಹೆದ್ದಾರಿ ಪ್ರವೇಶ ಮಾಡಿ ಮುರುಘಾಮಠ, ಮಾದಾರ ಗುರುಪೀಠ, ಭೋವಿ ಗುರುಪೀಠ, ಎಸ್ಸೆನ್ ಸ್ಮಾರಕ ದಾಟಿ ಸಂಜೆ 7ಕ್ಕೆ ಕ್ಯಾಸಾಪುರದ ಬಯಲು ತಲುಪಿತು. ಎಲ್ಲ ಗಾಡಿಗಳನ್ನು ನಿಲ್ಲಿಸಿ ಅಲ್ಲಿಯೇ ರಾತ್ರಿ ಬಿಡಾರ ಹಾಕಲಾಗುತ್ತದೆ. ರಾತ್ರಿ ಭಜನೆ, ಕೋಲಾಟ, ಸೋಬಾನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಏರ್ಪಾಡು ಮಾಡಲಾಗಿತ್ತು. ಭಾನುವಾರ ಮಧ್ಯಾಹ್ನ ಸಿರಿಗೆರೆ ಡಿ.ಮದಕರಿಪುರದ ವರತಿನಾಯಕ ಕೆರೆ ದಂಡೆಯಲ್ಲಿ ಬೀಡು ಬಿಡುವ ಯಾತ್ರೆ ತುಸು ವಿಶ್ರಾಂತಿ ನಂತರ ಮುಂದಕ್ಕೆ ಸಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!