ಕನ್ನಡಪ್ರಭ ವಾರ್ತೆ ಪಾಂಡವಪುರ
ಹಳ್ಳಿಗಳಲ್ಲಿ ದೇವಾಲಯಗಳ ನಿರ್ಮಾಣದಿಂದ ಜನರಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿ ಪರಸ್ಪರ ನಂಬಿಕೆ ಬೆಳೆಯುತ್ತಿದೆ ಎಂದು ಆದಿಚುಂಚನಗಿರಿ ಮೈಸೂರು ಶಾಖಾಮಠದ ಪೀಠಾಧ್ಯಕ್ಷ ಸೋಮಶೇಖರನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಹೆಗ್ಗಡಹಳ್ಳಿ ಹೊರವಲಯಲ್ಲಿ ಕಾವೇರಿ-ಹೇಮಾವತಿ ಹಾಗೂ ಲೋಕಪಾವನಿ ಸಂಗಮದ ದಡದಲ್ಲಿರುವ ಶ್ರೀಪಟ್ಟಲದಮ್ಮ ದೇವರ ವಿಮಾನ ಗೋಪುರ, ಶ್ರೀಬೋರೇದೇವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಸಮುದಾಯ ಭವನ, ಬಯಲು ರಂಗಮಂದಿರ ಲೋಕಾರ್ಪಣೆ ಕಾರ್‍ಯಕ್ರಮದಲ್ಲಿ ಮಾತನಾಡಿದರು.
ದೇವಸ್ಥಾನಗಳು ಹೃದಯ ಇದ್ದಂತೆ, ಮನುಷ್ಯನಿಗೆ ಹೃದಯ ಹೇಗೆ ಮುಖ್ಯವೋ ಗ್ರಾಮಗಳಿಗೆ ದೇವಸ್ಥಾನಗಳು ಸಹ ಅಷ್ಟೇ ಮುಖ್ಯ. ದೇವಸ್ಥಾನಗಳು ನಮಗೆ ನಮ್ಮ ಪೂರ್ವಿಕರು ಕೊಟ್ಟಂತಹ ಕೊಡುಗೆಗಳು. ಅವುಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದರ ಜತೆಗೆ ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲ ಮೇಲಿದೆ ಎಂದರು.ಮುಂದಿನ ದಿನಗಳಲ್ಲಿ ಶ್ರೀಪಟ್ಟಲದಮ್ಮ ದೇವಿಯು ನಮ್ಮೆಲ್ಲರನ್ನು ಕಾಪಾಡಿಕೊಳ್ಳುವುದರ ಜತೆಗೆ ನಮ್ಮ ಮಕ್ಕಳಿಗೆ ವಿದ್ಯೆ, ಬುದ್ಧಿ, ಶ್ರದ್ಧೆಭಕ್ತಿ, ನಾಡು ಕಟ್ಟುವ ಶಕ್ತಿ, ತಂದೆ-ತಾಯಿ, ಗುರು-ಹಿರಿಯರನ್ನು ಪ್ರೀತಿಸಿಗೌರವಿಸುವ ಮಾನವೀಯ ಗುಣಗಳನ್ನು ದಯಪಾಲಿಸಲಿದೆ ಎಂದು ಹಾರೈಸಿದರು.
ಶಾಸಕ ದರ್ಶನ್‌ಪುಟ್ಟಣ್ಣಯ್ಯ ಮಾತನಾಡಿ, ಗ್ರಾಮಸ್ಥರೆಲ್ಲ ಸೇರಿಕೊಂಡು ಶ್ರೀಪಟ್ಟಲದಮ್ಮ ದೇವಸ್ಥಾನ, ಸಮುದಾಯ ಭವನ ಲೋಕಾರ್ಪಣೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇವಸ್ಥಾನಗಳಿಂದ ಜನರಲ್ಲಿ ದೈವಭಕ್ತಿ ಬೆಳೆಯುವುದರ ಜತೆಗೆ ಶಾಂತಿ, ನೆಮ್ಮದಿಯಿಂದ ನೆಲೆಸಲು ಸಹಕಾರಿಯಾಗಲಿವೆ ಎಂದರು.ಇದೇ ವೇಳೆ ಹೆಗ್ಗಡಹಳ್ಳಿ, ಕಾಳೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರನ್ನು ಅಭಿನಂದಿಸಲಾಯಿತು. ಇದಕ್ಕೂ ಮುನ್ನ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅನುದಾನ ಹಾಗೂ ಗ್ರಾಮಸ್ಥರ ಸಹಕಾರದಿಂದ ನಿರ್ಮಿಸಲಾದ ಸಮುದಾಯ ಭವನವನ್ನು ಶಾಸಕರು ಉದ್ಘಾಟಿಸಿದರು.
ಕಾರ್‍ಯಕ್ರಮದಲ್ಲಿ ಕಲಾವಿದರಾದ ಚಂದ್ರಪ್ರಭ, ಗೊಬ್ಬರಗಾಲ ತಂಡದಿಂದ ಹಾಸ್ಯ ಕಾರ್‍ಯಕ್ರಮ ನಡೆಸಿಕೊಟ್ಟರು. ಗ್ರಾಮರಂಗ ಸಾಂಸ್ಕೃತಿಕ ವೇದಿಕೆಯ ಶಾಂತ ನಂಜುಂಡಸ್ವಾಮಿ ತಂಡದಿಂದ ಭಕ್ತಿಸಿಂಚನ ನಡೆಯಿತು. ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ, ಗ್ರಾಪಂ ಸದಸ್ಯ ಎಚ್.ಜೆ.ರಾಮಕೃಷ್ಣ, ಗ್ರಾಪಂ ಅಧ್ಯಕ್ಷೆ ಭಾಗ್ಯ, ಉಪಾಧ್ಯಕ್ಷ ರಂಗಸ್ವಾಮಿ, ಸುಂಕಾತೊಣ್ಣೂರು ಗ್ರಾಪಂ ಅಧ್ಯಕ್ಷೆ ಜಯಶೀಲಮ್ಮ, ಜೆಡಿಎಸ್ ಮುಖಂಡ ಚಿಕ್ಕಾಡೆ ಚೇತನ್ ತಿಮ್ಮೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಲಯನ್ ಕ್ಲಬ್ ಮಾಜಿ ಅಧ್ಯಕ್ಷ ಶಿವಕುಮಾರ್, ಮಾಜಿ ಸದಸ್ಯ ಈರೇಗೌಡ, ಕೆ.ಎಂ.ಪುಟ್ಟಸ್ವಾಮಿಗೌಡ, ಡೇರಿ ಅಧ್ಯಕ್ಷೆ ದೇವಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಕೇಬಲ್ ಚಂದ್ರು, ಆಡಳಿತ ಮಂಡಳಿ ಅಧ್ಯಕ್ಷ ರಾಮೇಗೌಡ, ಉಪಾಧ್ಯಕ್ಷ ಎಚ್.ವೀರೇಗೌಡ, ಕಾರ್‍ಯದರ್ಶಿ ಎಚ್.ಜೆ.ರಾಮಕೃಷ್ಣ, ಖಜಾಂಚಿ ಗೌಡಪ್ಪ, ನಿರ್ದೇಶಕರಾದ ಪುಟ್ಟಸ್ವಾಮಿ, ನಿಂಗೇಗೌಡ (ಅಪ್ಪಣ), ನಿಂಗೇಗೌಡ, ಚನ್ನೇಗೌಡ, ಚಿಕ್ಕಚನ್ನೇಗೌಡ, ಕರೀಗೌಡ, ಎಚ್.ಜೆ. ಪ್ರಕಾಶ್, ಬಸವರಾಜು, ಗಿರೀಶ್, ಕಾಳೇನಹಳ್ಳಿ ಆನಂದ್ ಸೇರಿದಂತೆ ಗ್ರಾಮಸ್ಥರು, ಮುಖಂಡರು, ಭಕ್ತಾದಿಗಳು ಭಾಗವಹಿಸಿದ್ದರು.