ಜನರಿಗೆ ಕಾಂಗ್ರೆಸ್‌ ಮೇಲೆ ವಿಶ್ವಾಸವಿದೆ: ಸಚಿವ ಮಧು ಬಂಗಾರಪ್ಪ

KannadaprabhaNewsNetwork | Published : Apr 6, 2024 12:47 AM

ಸಾರಾಂಶ

ಭದ್ರಾವತಿಯಲ್ಲಿ ಶಾಸಕ ಸಂಗಮೇಶ್ವರ್‌ರವರ ಗೃಹ ಕಛೇರಿಯಲ್ಲಿ ಸಚಿವ ಎಸ್. ಮಧು ಬಂಗಾರಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಗ್ಗೆ ಮತದಾರರಿಗೆ ನಂಬಿಕೆ ಇದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದು ತಿಳಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದರು.

ಅವರು ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ರವರ ಗೃಹ ಕಚೇರಿಯಲ್ಲಿ ಮಾತನಾಡಿ, ನಮ್ಮದು ರಾಜಕೀಯ ಕುಟುಂಬ ಜಿಲ್ಲೆಯ ಮತದಾರರ ನಾಡಿಮಿಡಿತ ಏನೆಂದು ತಿಳಿದುಕೊಂಡಿದ್ದೇವೆ. ಮತದಾರರಿಗೆ ಸುಳ್ಳು ಭರವಸೆ ನೀಡುವವರು ನಾವಲ್ಲ. ಜನರಿಗೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿದೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರ ಮನೆಗಳಿಗೂ ತಲುಪಿದೆ ಎಂಬ ವಿಶ್ವಾಸವಿದೆ. ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದರು.

ರಾಮನ ಹೆಸರಿನಲ್ಲಿ, ಕೃಷ್ಣನ ಹೆಸರಿನಲ್ಲಿ ಚುನಾವಣೆ ಮಾಡುವುದು ಬಿಜೆಪಿ ಸಂಸ್ಕೃತಿ. ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಮತ ಕೇಳುವುದು ಕಾಂಗ್ರೆಸ್ ಸಂಸ್ಕೃತಿ. ಕಾಂಗ್ರೆಸ್ ಶಕ್ತಿ ಎಂದರೆ ಸರ್ವ ಜನಾಂಗದವರ ಶಕ್ತಿ. ನನ್ನ ಬೂತ್ ನನ್ನ ಜವಾಬ್ದಾರಿ ಎಂಬ ಧ್ಯೇಯ ವಾಕ್ಯದಡಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಿದೆ. ಬೂತ್‌ಮಟ್ಟದಿಂದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸುವ ಮೂಲಕ ಮತಯಾಚನೆ ನಡೆಸಲಾಗುತ್ತಿದೆ ಎಂದರು.

ವಿಐಎಸ್‌ಎಲ್‌ಗೆ 500 ಕೋ.ರು. ಬಂಡವಾಳ:

ಪಕ್ಷದ ಅಭ್ಯರ್ಥಿ ಗೀತಾ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ 500 ಕೋಟಿ ರು. ಬಂಡವಾಳ ಹೂಡಿಕೆ ಮಾಡಿಸಿ ಕಾಯಕಲ್ಪ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಬಿ.ಕೆ ಸಂಗಮೇಶ್ವರ ಮಾತನಾಡಿ, ರಾಮಮಂದಿರದ ಹೆಸರಿನಲ್ಲಿ ಮತ ಕೇಳುತ್ತಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ರಾಜ್ಯ ಹಾಗೂ ರಾಷ್ಟ್ರದಲ್ಲಿ ಕೋಮುಗಲಭೆ ಸೃಷ್ಟಿಸಿ ಅಧಿಕಾರ ನಡೆಸುವ ತಂತ್ರಗಾರಿಕೆ ಬಿಜೆಪಿಯವರದ್ದಾಗಿದೆ. ಜೆಡಿಎಸ್ ಒಂದು ನಾಟಕ ಕಂಪನಿ. ಜೆಡಿಎಸ್‌ನವರಿಗೆ ನೀತಿ ಮತ್ತು ಸೈದ್ಧಾಂತಿಕತೆ ಎಂಬುದು ಇಲ್ಲ. ಇಷ್ಟು ದಿನಗಳ ಕಾಲ ಮೋದಿಯವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿದ್ದವರು ಇಂದು ಅದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಮುದಾಯ ಭವನಗಳಿಗೆ ಅನುದಾನ ನೀಡಿರುವುದು ಕೇಂದ್ರ ಸರ್ಕಾರವಲ್ಲ. ಸಂಸದ ರಾಘವೇಂದ್ರ ಅಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನೀರಾವರಿ ಇಲಾಖೆ ಅನುದಾನದಡಿ ಸಮುದಾಯ ಭವನಗಳಿಗೆ ಅನುದಾನ ನೀಡಿರುವುದು. ಸಂಸದ ರಾಘವೇಂದ್ರ ಸುಳ್ಳು ಹೇಳಿ ತಿರುಗುತ್ತಿದ್ದಾರೆಂದು ಆರೋಪಿಸಿದರು.

ಶಾಸಕ ಕೆಸಂಗಮೇಶ್ವರ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಸ್. ಕುಮಾರ್ ಎಚ್.ಎಲ್ ಷಡಕ್ಷರಿ, ಎಸ್. ಮಣಿಶೇಖರ್, ಬಿ.ಕೆ ಮೋಹನ್, ಲತಾ ಚಂದ್ರಶೇಖರ್, ಕಾಂತರಾಜ್, ಎಂ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article