ಜನತೆಯ ವಿಶ್ವಾಸ ಕಳೆದುಕೊಂಡ ಮೋದಿ ಆಡಳಿತ

KannadaprabhaNewsNetwork | Published : May 2, 2024 12:15 AM

ಸಾರಾಂಶ

ಈ ಮೊದಲು 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಕನಸು ಕಂಡಿದ್ದ ಬಿಜೆಪಿ ಈ ಲೋಕಸಭಾ ಚುನಾವಣೆಯಲ್ಲಿ 200 ಸ್ಥಾನಗಳಲ್ಲೂ ಗೆಲುವು ಸಾಧಿಸುವುದಿಲ್ಲ.

ಹುಬ್ಬಳ್ಳಿ:

ನರೇಂದ್ರ ಮೋದಿ ಆಡಳಿತದಿಂದ ಪ್ರಜಾಪ್ರಭುತ್ವದ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಹೇಳಿದರು.

ಇಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಪ್ರಧಾನಿಯಾದ ಮೇಲೆ ಪ್ರಜಾಪ್ರಭುತ್ವದ ಮೇಲೆ ಜನರಿಗೆ ವಿಶ್ವಾಸವೇ ಇಲ್ಲದಂತಾಗಿದೆ. ಚುನಾವಣಾ ಪೂರ್ವದಲ್ಲಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹುರುಪಿನಲ್ಲಿ ಇದ್ದರು. ಈಗ ಆ ಹುರುಪು ಕಾಣುತ್ತಿಲ್ಲ. ಪ್ರಜಾಪ್ರಭುತ್ವದ ಮೇಲೆ ಜನರ ವಿಶ್ವಾಸ ಕುಂದುತ್ತಿದೆ. ನಾಗಲ್ಯಾಂಡ್‌ನ ಆರು ಜಿಲ್ಲೆಯಲ್ಲಿ ಮತದಾನ ಸರಿಯಾಗಿ ಆಗಿಲ್ಲ. ನಾಲ್ಕು ಲಕ್ಷ ಜನರು ಮತದಾನ ಮಾಡಿಲ್ಲ ಎಂದು ಆರೋಪಿಸಿ ಕೆಲ ರಾಜ್ಯಗಳ ಅಂಕಿ-ಅಂಶಗಳನ್ನು ನೀಡಿದರು.

ಜೋಶಿನ ಮನೆಗೆ ಕಳಿಸಿ:

ಮಹದಾಯಿ, ಕಳಸಾ-ಬಂಡೂರಿ ಯೋಜನೆ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ವಿಳಂಬಕ್ಕೆ ಕಾರಣವಾಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಮನೆಗೆ ಕಳುಹಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಧಾರವಾಡ ಲೋಕಸಭೆಗೆ ಆಯ್ಕೆಯಾದರೆ ಈ ಮಾರ್ಗ ಆರಂಭಕ್ಕೆ ಹಸಿರು ನಿಶಾನೆ ಕೊಡಲಾಗುವುದು.

ಈ ಭಾಗದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾದರೂ ಯಾವೊಂದು ಕೆಲಸ ಮಾಡಿಲ್ಲ. ಮಹದಾಯಿ ಹಾಗೂ ಧಾರವಾಡ-ಬೆಳಗಾವಿ ರೈಲ್ವೆ ಮಾರ್ಗ ಯೋಜನೆ ವಿಳಂಬಕ್ಕೂ ಜೋಶಿ ಅವರೇ ಕಾರಣ ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆ ಮೊದಲು 20 ದಿನಗಳಲ್ಲಿ ನಡೆಯುತ್ತಿದ್ದವು. ಈಗ 2 ತಿಂಗಳು ಮೀರಿ ನಡೆಯುತ್ತಿದೆ. ಒನ್ ನೇಷನ್, ಒನ್ ಎಲೆಕ್ಷನ್ ಎಂದು ಹೇಳಿ ನಡೆಸಿದರೆ ವರ್ಷಪೂರ್ತಿ ಚುನಾವಣೆ ನಡೆಯಲಿದೆ ಎಂದ ಅವರು, ಚುನಾವಣೆ ಪೂರ್ವದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದ ಮೋದಿ, ದ್ವಿಗುಣ ಗೊಳಿಸುವುದಿರಲಿ ಅವರ ಆದಾಯ ಕಸಿದುಕೊಳ್ಳುವ ಕಾರ್ಯ ಮಾಡಿದ್ದಾರೆ. ಇಷ್ಟೇ ಅಲ್ಲದೆ ಅವರ ವಿಕಸಿತ ಭಾರತದ ಕಲ್ಪನೆಯೂ ಸಮಪರ್ಕವಾಗಿಲ್ಲ. ದೇಶದ ಸಾಲ ಮೂರುಪಟ್ಟು ಮಾಡಿದ್ದಾರೆ. ಬರೀ ಭರವಸೆ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಜನರು ಮೋದಿ ಮತ್ತು ಅಮಿತ್‌ ಶಾ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ. ಈ ಮೊದಲು 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಕನಸು ಕಂಡಿದ್ದ ಬಿಜೆಪಿ ಈ ಲೋಕಸಭಾ ಚುನಾವಣೆಯಲ್ಲಿ 200 ಸ್ಥಾನಗಳಲ್ಲೂ ಗೆಲುವು ಸಾಧಿಸುವುದಿಲ್ಲ ಎಂದು ಭವಿಷ್ಯ ನುಡಿದರು.

ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ, ಮಹಾನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ಹು-ಡಾ ಅಧ್ಯಕ್ಷ ಶಾಕೀರ ಸನದಿ, ಮಹಾನಗರ ಪಾಲಿಕೆ ಪ್ರತಿಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲಾ, ಸಿರಾಜ ಕುಡಚಿವಾಲೆ, ವಸಂತ ಲದ್ವಾ, ಪ್ರೇಮನಾಥ ಚಿಕ್ಕತುಂಬಳ ಸೇರಿದಂತೆ ಹಲವರಿದ್ದರು.

Share this article