ಕನ್ನಡಪ್ರಭ ವಾರ್ತೆ ಬ್ಯಾಡಗಿ
ಬ್ರಿಟಿಷರಿಂದ ಕಸಿದು ರಾಜಕಾರಣಿಗಳ ಕೈಯಲ್ಲಿ ದೇಶವನ್ನು ಕೊಟ್ಟಾಗ ನಾವು ಎರಡನೇ ಬಾರಿ ಸ್ವಾತಂತ್ರ್ಯ ಕಳೆದುಕೊಂಡಿದ್ದೇವೆ. ದೇಶವನ್ನು ಇಬ್ಭಾಗ ಮಾಡಿ ನಮ್ಮ ಎರಡು ಬಾಹುಗಳನ್ನು ಕತ್ತರಿಸಿ ಅಂಗವಿಕಲರನ್ನಾಗಿ ಮಾಡಲಾಗಿದೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ರಾಜಕೀಯ ವ್ಯವಸ್ಥೆಯ ಹರಿಹಾಯ್ದರು.ತಾಲೂಕಿನ ಚಿಕ್ಕಬಾಸೂರಿನಲ್ಲಿ ನಡೆಯುತ್ತಿರುವ ಸಿದ್ಧರಾಮೇಶ್ವರ 851ನೇ ಜಯಂತಿ ಹಾಗೂ ನೊಳಂಬ ಸಮಾವೇಶದ ಮೊದಲ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕಿತ್ತೂರು ವೀರರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ ಮಾದರಿಯಲ್ಲಿ ಅಂದೊಂದು ದಿವಸ ದೇಶದ ಮಹಾರಾಜರು ಒಗ್ಗಟ್ಟಾಗಿದ್ದರೇ ಬ್ರಿಟಿಷರ ದೇಶದೊಳಕ್ಕೆ ಬರುತ್ತಿರಲಿಲ್ಲ, ಅಂದು ಮೊದಲ ಬಾರಿ ಸ್ವಾತಂತ್ರ್ಯ ಕಳೆದುಕೊಂಡಿದ್ದೇವು. ಇನ್ನೂ ಬ್ರಿಟಿಷರ ಕೈಯಲ್ಲಿದ್ದ ದೇಶವನ್ನು ರಾಜಕಾರಣಿಗಳ ಕೈಗೆ ಕೊಟ್ಟು ದೇಶದ ಜನರು ಎರಡನೇ ಬಾರಿ ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ ಎಂದರು.
ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಸೈನ್ಯದಲ್ಲಿ ಉನ್ನತ ಹುದ್ದೆ ನೀಡುವುದಾಗಿ ನೀಡಿದಂತಹ ಆಹ್ವಾನವನ್ನು ತಿರಸ್ಕರಿಸಿದ ಹಾಕಿ ಮಾಂತ್ರಿಕನೆಂದೇ ಖ್ಯಾತಿ ಪಡೆದ ಕ್ರೀಡಾಪಟು ಧ್ಯಾನಚಂದ್ ತೋರಿದ ರಾಷ್ಟ್ರಪ್ರೇಮವನ್ನು ಇಂದಿನ ರಾಜಕಾರಣಿಗಳು ಅನುಸರಿಸಿದಲ್ಲಿ ದೇಶ ಸುಭದ್ರವಾಗಿ ಮುಂದುವರೆಯಲು ಸಾಧ್ಯವೆಂದರು.ಲಿಂಗಾಯತರನ್ನು ಶೂದ್ರರನ್ನಾಗಿ ಮಾಡಲು ನಿರ್ಧರಿಸಲಾಗಿತ್ತು:
1915ರಲ್ಲಿಯೇ ಪಂಚಮಸಾಲಿ, ನೊಳಂಬರು, ಸಾದರು ಸೇರಿದಂತೆ ಲಿಂಗಾಯತ ಸಮಾಜದ ಎಲ್ಲ ಉಪಜಾತಿಗಳನ್ನು ಶೂದ್ರ ವರ್ಗಕ್ಕೆ ಸೇರಿಸಲು ವೀರಶೈವ ಮಹಾಸಭಾ ಅಂದೆಯೇ ನಿರ್ಧರಿಸಿತ್ತು, ಆದರೆ ಮೈಸೂರು ಒಡೆಯರ ಸಂಸ್ಥಾನದಲ್ಲಿದ್ದ ಹಾಲುಕುರ್ಕೆ ಬಸವಲಿಂಗಪ್ಪ ವಿರೋಧ ಪಡಿಸಿದ್ದರಿಂದ ಹಾನಗಲ್ಲ ಕುಮಾರ ಶಿವಯೋಗಿಗಳು ತಮ್ಮ ನಿರ್ಣಯವನ್ನು ಬದಲಾವಣೆ ಮಾಡಿದ್ದಾಗಿ ತಿಳಿಸಿದರು.ಆಣೂರು ಬುಡಪನಹಳ್ಳಿ ಸೇರಿದಂತೆ ರಾಜ್ಯದ ನೂರಾರು ಏತ ನೀರಾವರಿಗಳಿಗೆ ಅನುದಾನ ಒದಗಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಜ್ಞಾಪಿಸಿಕೊಳ್ಳಬೇಕಾಗುತ್ತದೆ. ಅಂತಹ ದೂರದೃಷ್ಟಿ ರಾಜಕಾರಣಿಗಳು ಅವಶ್ಯವಿದ್ದು ಹೀಗಾಗಿ ಜನರನ್ನು ಜಾಗೃತಗೊಳಿಸುವ ಕಾರ್ಯವು ನೊಳಂಬ ಸಮಾಜದ ಜನರಿಂದ ಆಗಬೇಕಾಗಿದೆ ಎಂದರು.