ಸೋಮರಡ್ಡಿ ಅಳವಂಡಿ
ಪಡಿತರ ಚೀಟಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳಿಗೆ ಆಧಾರ್ ಜೋಡಣೆ ಹಾಗೂ ಇ-ಕೆವೈಸಿ ಕಡ್ಡಾಯವಾಗಿರುವ ಬೆನ್ನಲ್ಲೇ, ಆಧಾರ್ ಕಾರ್ಡ್‌ಗೆ ಸ್ವಂತ ಮೊಬೈಲ್ ಸಂಖ್ಯೆ ಅಳವಡಿಸಿಕೊಳ್ಳಲು ಜಿಲ್ಲೆಯ ಜನರು ಪರದಾಡುತ್ತಿದ್ದಾರೆ. ಕೊಪ್ಪಳ ನಗರದ ಜಿಲ್ಲಾಡಳಿತ ಭವನದಲ್ಲಿರುವ ಆಧಾರ್ ತಿದ್ದುಪಡಿ ಕೇಂದ್ರ ಹಾಗೂ ಕರ್ನಾಟಕ ಒನ್ ಕಚೇರಿ ಎದುರು ಜಿಲ್ಲೆಯ ವಿವಿಧೆಡೆಯಿಂದ ಬಂದಿರುವ ಜನರು ರಾತ್ರಿ ಹೊತ್ತಿನಿಂದಲೇ ಸರದಿಗಾಗಿ ಕಾಯುತ್ತಿದ್ದಾರೆ.
ಸರದಿಗಾಗಿ ಚೀಲ, ಚಪ್ಪಲಿ!: ಆಧಾರ್ ತಿದ್ದುಪಡಿಗಾಗಿ ಬೆಳಗ್ಗೆಯೇ ಬಂದು ಸರದಿಯಲ್ಲಿ ನಿಂತರೂ ಅವಕಾಶ ಸಿಗುವುದು ಖಚಿತವಲ್ಲ. ಹೀಗಾಗಿ ಕೆಲವರು ರಾತ್ರಿ ಹೊತ್ತೇ ಕಚೇರಿ ಎದುರು ಬಂದು ಚೀಲ, ಚಪ್ಪಲಿ ಇತರ ವಸ್ತುಗಳನ್ನು ಇಟ್ಟು ಸರದಿಗಾಗಿ ಕಾಯುತ್ತಿದ್ದಾರೆ. ಬೆಳಗಾಗುವವರೆಗೂ ಅಲ್ಲಿಯೇ ಕುಳಿತು, ನಿದ್ದೆಗೆ ಜಾರುತ್ತಾ, ಮತ್ತೆ ಎದ್ದು ಸರದಿ ತಪ್ಪದಂತೆ ನೋಡಿಕೊಳ್ಳುತ್ತಿದ್ದಾರೆ.ಮಹಿಳೆಯರು, ವೃದ್ಧರು ಹಾಗೂ ಅಂಗವಿಕಲರೂ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಕಚೇರಿ ಎದುರು ರಾತ್ರಿ ಕಳೆದವರ ಮುಖದಲ್ಲಿ ನಿದ್ದೆಯಿಲ್ಲದ ಆಯಾಸ ಒಂದೆಡೆಯಾದರೆ, ಇಂದು ತಮ್ಮ ಸರದಿ ಬರುತ್ತದೆಯೇ ಎಂಬ ಆತಂಕ ಮತ್ತೊಂದೆಡೆ. ಸರ್ಕಾರದ ಸೌಲಭ್ಯ ಕಳೆದುಕೊಳ್ಳಬಾರದು ಎಂಬ ಅನಿವಾರ್ಯತೆಯೇ ಅವರನ್ನು ಈ ಸಂಕಷ್ಟಕ್ಕೆ ತಳ್ಳಿದೆ.
''''ರಾತ್ರಿ ಇಡೀ ಕಾದರೂ ಹಿಂದಿನ ದಿನವೂ ನಮ್ಮ ಸರದಿ ಬಂದಿಲ್ಲ. ಪ್ರತಿದಿನ ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಇಂದು ಊರಿಗೆ ತೆರಳುವುದಿಲ್ಲ. ಇಲ್ಲಿಯೇ ರಾತ್ರಿ ಕಾದು, ಹೇಗಾದರೂ ಆಧಾರ್ ತಿದ್ದುಪಡಿ ಮಾಡಿಸಿಕೊಂಡು ಹೋಗುತ್ತೇವೆ’ ಎಂದು ನಿಂಗಮ್ಮ ಕಣ್ಣೀರು ಹಾಕುತ್ತ ಅಳಲು ತೋಡಿಕೊಂಡರು.
ಅಂಗವಿಕಲ ವೆಂಕಪ್ಪನಿಗೂ ತಪ್ಪದ ಸಂಕಷ್ಟ: ಅಂಗವಿಕಲ ವೆಂಕಪ್ಪ ಅವರಿಗೂ ಆಧಾರ್ ತಿದ್ದುಪಡಿ ಅನಿವಾರ್ಯವಾಗಿದೆ. ಇದುವರೆಗೆ ಅವರ ಆಧಾರ್ ಕಾರ್ಡ್‌ಗೆ ಮನೆಯವರ ಮೊಬೈಲ್ ಸಂಖ್ಯೆ ಜೋಡಣೆಯಾಗಿತ್ತು. ಇದೀಗ ಸ್ವಂತ ಮೊಬೈಲ್ ಸಂಖ್ಯೆ ಅಳವಡಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮಾಸಾಶನ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳಿಗೆ ತೊಂದರೆಯಾಗಬಹುದು ಎಂಬ ಆತಂಕದಿಂದ ಅವರು ಕೂಡ ಆಧಾರ್ ಕೇಂದ್ರದ ಎದುರು ಸರದಿಗಾಗಿ ಕಾಯುತ್ತಿದ್ದರು.
50 ಮಂದಿಗೆ ಮಾತ್ರ ಅವಕಾಶ: ಕರ್ನಾಟಕ ಒನ್ ಕಚೇರಿಯಲ್ಲಿ ಪ್ರತಿದಿನ 50 ಮಂದಿಗೆ ಹಾಗೂ ಆಧಾರ್ ತಿದ್ದುಪಡಿ ಕೇಂದ್ರದಲ್ಲಿಯೂ ಸೀಮಿತ ಸಂಖ್ಯೆಯ ಫಲಾನುಭವಿಗಳಿಗೆ ಮಾತ್ರ ತಿದ್ದುಪಡಿ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಏಕಕಾಲಕ್ಕೆ ಆಧಾರ್‌ಗೆ ಮೊಬೈಲ್ ಸಂಖ್ಯೆ ಅಳವಡಿಸುವುದು ಸೇರಿದಂತೆ ವಿವಿಧ ತಿದ್ದುಪಡಿ ಕಾರ್ಯ ನಡೆಯುತ್ತಿರುವುದರಿಂದ ವೆಬ್‌ಸೈಟ್ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ನಿಗದಿತ ಸಂಖ್ಯೆಯ ಫಲಾನುಭವಿಗಳ ತಿದ್ದುಪಡಿ ಕಾರ್ಯ ಪೂರ್ಣಗೊಳಿಸುವುದೂ ಕಷ್ಟವಾಗುತ್ತಿದೆ ಎಂದು ಕರ್ನಾಟಕ ಒನ್ ಸಿಬ್ಬಂದಿ ತಿಳಿಸಿದ್ದಾರೆ.
ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್ ತಿದ್ದುಪಡಿ ಮಾಡುವ ವ್ಯವಸ್ಥೆ ಕಲ್ಪಿಸಿ, ಜನರು ರಾತ್ರಿ ಕಳೆಯುವ ಪರಿಸ್ಥಿತಿಗೆ ಅಂತ್ಯ ಹಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.