ಬಣ್ಣದೋಕುಳಿಯಲ್ಲಿ ಮಿಂದೆದ್ದ ಬೆಳಗಾವಿ ಜನತೆ

KannadaprabhaNewsNetwork | Published : Mar 15, 2025 1:02 AM

ಸಾರಾಂಶ

ರಂಗಿನಾಟ ನಗರದ ಬಡಾವಣೆಗಳಲ್ಲಿ ರಂಗು ರಂಗಿನ ಚಿತ್ತಾರ ಬಿಡಿಸಿದಂತೆ ಕಂಡು ತಂದಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕುಂದಾನಗರಿ ಜನರು ಬಣ್ಣದಾಟದಲ್ಲಿ ಮಿಂದೇಳುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಗುರುವಾರ ರಾತ್ರಿ ಕಾಮದಹನ ಮಾಡಿ, ಮಧ್ಯರಾತ್ರಿಯವರೆಗೆ ಹಾಡು, ಕುಣಿತದಲ್ಲಿ ತೊಡಗಿದ್ದ ಯುವಕರು ಶುಕ್ರವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಭರ್ಜರಿಯಾಗಿ ಬಣ್ಣದ ಸಂಭ್ರಮದಲ್ಲಿ ತೇಲಾಡಿದರು.

ಸೂರ್ಯೋದಯವಾಗುತ್ತಲೇ ನೇಸರನನ್ನು ನಾಚಿಸುವಂತೆ ಚಿಣ್ಣರು ಕೆಂಪು ಬಣ್ಣದೊಂದಿಗೆ ಸ್ವಾಗತಿಸಿದರು. ರಂಗಿನಾಟ ನಗರದ ಬಡಾವಣೆಗಳಲ್ಲಿ ರಂಗು ರಂಗಿನ ಚಿತ್ತಾರ ಬಿಡಿಸಿದಂತೆ ಕಂಡು ತಂದಿತು. ವೈವಿಧ್ಯಮಯವಾಗಿರುವ ಬಣ್ಣಗಳನ್ನು ಪರಸ್ಪರ ಮೈಮೇಲೆ ಎರಚುವ ಮೂಲಕ ಕುಣಿದು ಕುಪ್ಪಳಿಸಿದರು. ಹೀಗಾಗಿ ಇಡೀ ದಿನ ಒಲವಿನ ಬಣ್ಣದ ಹಬ್ಬವು ಎಲ್ಲೆಡೆ ಮೆರಗಿನಿಂದ ಕೂಡಿತ್ತು.

ಜಿಲ್ಲೆಯ ಎಲ್ಲಡೆ ಜನರು ಶಾಂತಿಯುತವಾಗಿ ಹೋಳಿ ಆಚರಣೆ ಸಂಭ್ರಮಿಸಿದರು. ಕಿರಿಯರು ಮತ್ತು ಹಿರಿಯರು ಎಂಬ ವಯಸ್ಸಿನ ಭೇದ ಮರೆತು ಎಲ್ಲರೂ ಬಣ್ಣದ ರಂಗಿನಾಟದಿಂದ ಖುಷಿಗೊಂಡರು. ಎದುರಿಗೆ ಸಿಕ್ಕವರಿಗೆ ಹ್ಯಾಪಿ ಹೋಳಿ ಎನ್ನುತ್ತಲೇ ಬಣ್ಣ ಎರಚಿ ಜತೆಗೆ ಪರಿಚಯಸ್ಥರು ಆತ್ಮೀಯರನ್ನು ತಬ್ಬಿ ಹೋಳಿ ಹಬ್ಬದ ಶುಭಾಶಯ ಹೇಳುತ್ತಿರುವುದು ಸಾಮಾನ್ಯವಾಗಿ ಕಂಡು ಬಂದಿತು.ಸಣ್ಣ ಮಕ್ಕಳಂತೂ ಕೈಯಲ್ಲಿ ಪಿಚಕಾರಿ ಹಿಡಿದುಕೊಂಡು ಎಲ್ಲರಿಗೂ ಬಣ್ಣ ಹಾಕುವ ಮೂಲಕ ಖುಷಿಪಟ್ಟರು. ಯುವಕರು ತಮ್ಮ ಗೆಳೆಯರೊಂದಿಗೆ ಬಣ್ಣದಾಟವಾಡಿ ಗಮನ ಸೆಳೆದರು. ಯಾರಾದರೂ ಬೈಕ್‌ ಮೇಲೆ ಹೋಗುತ್ತಿರುವುದು ನೋಡಿದ ಕೂಡಲೇ ಪಿಚಕಾರಿ ಮೂಲಕವೇ ಬಣ್ಣ ಎರಚಿ ಖುಷಿಗೊಂಡರು.

ಬೆಳಗಾವಿಯ ಪಾಂಗುಳ ಗಲ್ಲಿ, ಖಡಕ್‌ ಗಲ್ಲಿ, ಮಹಾಂತೇಶ ನಗರ, ಸದಾಶಿವ ನಗರ, ಎಚ್‌.ಡಿ.ಕುಮಾರಸ್ವಾಮಿ ಬಡಾವಣೆ, ಸಹ್ಯಾದ್ರಿ ನಗರ, ಗಣೇಶಪುರ, ರಾಮತೀರ್ಥ ನಗರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಯುವ ಜನತೆ ಬಣ್ಣದಾಟ ಜೋರಾಗಿತ್ತು. ಕೆಲವೊಂದು ಬಡಾವಣೆಗಳಲ್ಲಿ ಯುವ ಜನತೆ ಧ್ವನಿವರ್ದಕ ಬಳಸಿಕೊಂಡು ನೃತ್ಯ ಮಾಡಿದರು. ಶಿಳ್ಳೆ. ಕೇಕೆ ಹೊಡೆದು ಸಂಭ್ರಮಸಿದರು.

ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಟಿಳಕವಾಡಿಯ ವ್ಯಾಕ್ಸಿನ ಡಿಪೋ ಮೈದಾನದಲ್ಲಿ ಆಯೋಜಿಸಲಾಗಿದ್ದ ಹೋಳಿ ಮಿಲನ್‌ ಕಾರ್ಯಕ್ರಮ ಹೋಳಿ ಹಬ್ಬಕ್ಕೆ ಮೆರಗು ನೀಡಿತು. ಯುವಕರು, ಯುವತಿಯರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಚಲನಚಿತ್ರ ಗೀತೆಗಳ ನಿನಾದಕ್ಕೆ ತಕ್ಕಂತೆ ಯವ ಸಮುದಾಯ ಹೆಜ್ಜೆ ಹಾಕಿತು. ಸ್ವತಃ ಶಾಸಕ ಅಭಯಪಾಟೀಲ ಕೂಡ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿ, ಸಂಭ್ರಮಿಸಿರುವುದು ಗಮನ ಸೆಳೆಯಿತು. ಇನ್ನು ಪಾಂಗುಳ ಗಲ್ಲಿಯ ಅಶ್ವಥಾಮ ದೇವಸ್ಥಾನದ ಎದುರು ಜನರು ಉರುಳು ಸೇವೆ ಮಾಡಿ, ಕುಣಿದು ಕುಪ್ಪಳಿಸಿದರು. ರಸ್ತೆಯುದ್ದಕ್ಕೂ ಹಲಗೆ ಹೊಡೆದು ಸಂಭ್ರಮಿಸಿದರು.

ಬೈಕ್‌ ಮೇಲೆ ಭರ್ಜರಿ ಸವಾರಿ:

ಯುವ ಜನತೆ ಬೈಕ್‌ ಮೇಲೆ ಕುಳಿತುಕೊಂಡು ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದರು. ಇದೇ ವೇಳೆ ಹ್ಯಾಪಿ ಹೋಳಿ ಎನ್ನುತ್ತಲೇ ಜೋರಾಗಿ ಕೂಗುತ್ತಿದ್ದರು. ತಮಗೆ ತೀರಾ ಆತ್ಮೀಯರು ಸಿಕ್ಕರೇ ಅವರಿಗೆ ಮೈ ತುಂಬ ಬಣ್ಣ ಹಾಕುವ ಖುಷಿ ಪಡುತ್ತಿರುವುದು ಕಂಡು ಬಂದಿತು. ಇಡಿ ಬೆಳಗಾವಿ ನಗರವೇ ಬಣ್ಣದಲ್ಲಿ ಮುಳುಗಿತ್ತು. ಈ ಬಾರಿ ಎಲ್ಲಿ ನೋಡಿದ್ದಲ್ಲಿ ಬೈಕ್‌ಗಳ ಆರ್ಭಟವೇ ಕಂಡುಬಂದಿತು. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ನಗರಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

Share this article