ಹುಬ್ಬಳ್ಳಿ: ಬಂಟರ ಅಭಿವೃದ್ಧಿ ನಿಗಮಕ್ಕೆ ಹುಬ್ಬಳ್ಳಿ-ಧಾರವಾಡದ ಬಂಟರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭರವಸೆ ನೀಡಿದ್ದಾರೆ.
ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹು-ಧಾ ಬಂಟರ ಸಂಘ ಭಾನುವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹ ಕೂಟ ಸಮಾರಂಭದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯೇ ಬಂಟರ ಸಂಘದ ಮುಖಂಡರನ್ನು ಭೇಟಿ ಮಾಡಿ ಮಾತನಾಡಿದರು.ಕಾರ್ಯ ಬಾಹುಳ್ಯದ ಹಿನ್ನೆಲೆಯಲ್ಲಿ ಭಾನುವಾರದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗುತ್ತಿರಲಿಲ್ಲ. ಹೀಗಾಗಿ ಶನಿವಾರವೇ ತಮ್ಮೆಲ್ಲರ ಭೇಟಿಗೆ ಬಂದಿದ್ದೇನೆ. ಬಂಟರು ಯಾವತ್ತೂ ಶ್ರಮಜೀವಿಗಳು. ಸ್ವಾಭಿಮಾನಿಗಳೂ ಆದ ಬಂಟರು ಯಾರಿಗೂ ಕೇಡು ಬಯಸುವವರಲ್ಲ. ಹೀಗಾಗಿ ಬಂಟರ ಅಭಿವೃದ್ಧಿ ನಿಗಮಕ್ಕೆ ಹು-ಧಾ ನಗರದವರನ್ನೇ ಅಧ್ಯಕ್ಷರನ್ನಾಗಿ ನೇಮಿಸಲಾಗುವುದು ಎಂದರು.
ಇದೇ ವೇಳೆ ಹುಬ್ಬಳ್ಳಿ-ಧಾರವಾಡ ಬಂಟರ ಸಂಘದಿಂದ ಡಿ.ಕೆ. ಶಿವಕುಮಾರ ಅವರನ್ನು ಸನ್ಮಾನಿಸಲಾಯಿತು.ಹು-ಧಾ ಬಂಟರ ಸಂಘದ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಉಪಾಧ್ಯಕ್ಷರಾದ ಪ್ರದೀಪ ಪಕ್ಕಲ್ ಮತ್ತು ಶಾಂತಾರಾಮ ಶೆಟ್ಟಿ, ಕಾರ್ಯದರ್ಶಿ ಸತೀಶ ಡಿ. ಶೆಟ್ಟಿ, ಉಪ ಕಾರ್ಯದರ್ಶಿ ರಾಜೇಂದ್ರ ವಿ. ಶೆಟ್ಟಿ, ಖಜಾಂಚಿ ಸುಧೀರ ಜೆ. ಶೆಟ್ಟಿ, ದಿನೇಶ ಶೆಟ್ಟಿ ಸೇರಿದಂತೆ ಮಾಜಿ ಕಾರ್ಯಾಧ್ಯಕ್ಷರು, ಸಂಘದ ಸದಸ್ಯರು ಇದ್ದರು.
ನವಲಗುಂದದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಅದ್ಧೂರಿ ಸ್ವಾಗತನವಲಗುಂದ ಪಟ್ಟಣದ ಲಿಂಗರಾಜ ಸರ್ಕಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಅದ್ಧೂರಿ ಸ್ವಾಗತ ಕೋರಿ ಸನ್ಮಾನಿಸಲಾಯಿತು. ಬಾಗಲಕೋಟೆಯಿಂದ ಹುಬ್ಬಳ್ಳಿಗೆ ತೆರಳುವ ವೇಳೆ ಮೊದಲ ಬಾರಿಗೆ ನವಲಗುಂದಕ್ಕೆ ಆಗಮಿಸಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಶಾಸಕ ಎನ್.ಎಚ್. ಕೋನರಡ್ಡಿ, ಧಾರವಾಡ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ, ನವಲಗುಂದ ಬ್ಲಾಕ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಪ್ರಕಾಶ ಶಿಗ್ಲಿ, ಮಾಂತೇಶ ಭೋವಿ, ಹನಮಂತಪ್ಪ ತಳವಾರ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು. ಇದಕ್ಕೂ ಮುಂಚೆ ಮುಖಂಡರು ಶಿರಸಂಗಿ ಲಿಂಗರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.