ಶ್ರೀನಗರ, ಉರಿ, ಬಾರಾಮುಲ್ಲಾ ಜನರೀಗ ನಿರಾಳ

KannadaprabhaNewsNetwork |  
Published : May 11, 2025, 11:45 PM ISTUpdated : May 12, 2025, 10:33 AM IST
ಮಾರುಕಟ್ಟೆ | Kannada Prabha

ಸಾರಾಂಶ

  ಶ್ರೀನಗರದ ನಿವಾಸಿಗಳು ಈಗ ನಿಟ್ಟುಸಿರು ಬಿಡುತ್ತಿದ್ದಾರೆ. ಭಾನುವಾರ ರಾತ್ರಿವರೆಗೂ ಇಡೀ ಕಾಶ್ಮೀರ ಕಣಿವೆಯಲ್ಲಿ ಎಲ್ಲಿಯೂ ಒಂದೇ ಒಂದು ಶೆಲ್ ಸದ್ದು ಕೇಳಿ ಬಂದಿಲ್ಲ. ಎಲ್ಲೆಡೆ ಶಾಂತತೆ ಕಂಡು ಬಂತು. ಶ್ರೀನಗರ, ಉರಿ, ಬಾರಾಮುಲ್ಲಾಗಳಲ್ಲಿ ಸಹಜ ಸ್ಥಿತಿ ಮರಳುತ್ತಿದೆ.

ಡೆಲ್ಲಿ ಮಂಜು

*ಕನ್ನಡಪ್ರಭ ಪ್ರತ್ಯಕ್ಷ ವರದಿ*

  ಶ್ರೀನಗರ/ ಉರಿ:  ಕಳೆದ ಎರಡು-ಮೂರು ವಾರಗಳಿಂದ ಸದಾ ಆತಂಕ, ನೋವು, ದುಗುಡಗಳಿಂದ ಕಾಲ ಕಳೆದಿದ್ದ ಶ್ರೀನಗರದ ನಿವಾಸಿಗಳು ಈಗ ನಿಟ್ಟುಸಿರು ಬಿಡುತ್ತಿದ್ದಾರೆ. ಭಾನುವಾರ ರಾತ್ರಿವರೆಗೂ ಇಡೀ ಕಾಶ್ಮೀರ ಕಣಿವೆಯಲ್ಲಿ ಎಲ್ಲಿಯೂ ಒಂದೇ ಒಂದು ಶೆಲ್ ಸದ್ದು ಕೇಳಿ ಬಂದಿಲ್ಲ. ಎಲ್ಲೆಡೆ ಶಾಂತತೆ ಕಂಡು ಬಂತು. ಶ್ರೀನಗರ, ಉರಿ, ಬಾರಾಮುಲ್ಲಾಗಳಲ್ಲಿ ಸಹಜ ಸ್ಥಿತಿ ಮರಳುತ್ತಿದೆ.

ಕಳೆದ ಎರಡು-ಮೂರು ವಾರಗಳಿಂದ ಸದಾ ಆತಂಕ, ನಿರಾಸೆ, ಆಕ್ರೋಶದ ವಾತಾವರಣ ಕಂಡಿದ್ದ ಶ್ರೀನಗರದ ಲಾಲ್ ಚೌಕ್ ನ ಟವರ್ ಕ್ಲಾಕ್ ಮುಂದೆ ಭಾನುವಾರ ಪರಿವಾಳಗಳು ಸ್ವಚ್ಚಂದವಾಗಿ ಹಾರಾಡುತ್ತಿದ್ದವು. ಪಹಲ್ಗಾಂನಲ್ಲಿ ಉಗ್ರರ ದಾಳಿ ನಡೆದಾಗಿನಿಂದ ಇಲ್ಲಿ ಯಾವಾಗಲೂ ಪ್ರತಿಭಟನೆ, ಪಾಕಿಸ್ತಾನ್ ವಿರುದ್ದದ ಧಿಕ್ಕಾರದ ಘೋಷಣೆಗಳೇ ಕೇಳಿ ಬರುತ್ತಿದ್ದವು.ಭಾನುವಾರದ ಮಾರ್ಕೆಟ್ ಓಪನ್ :

ಕದನ ವಿರಾಮ ಘೋಷಣೆಯ ನಂತರವೂ ಉಲ್ಲಂಘನೆ, ಪಾಕಿಸ್ತಾನದ ಕಪಟತನದ ಆಟ ನೋಡಿ ಶ್ರೀನಗರದ ಜನ ಶನಿವಾರ ದಿಕ್ಕೇ ತೋಚದಂತೆ ಕಂಗೆಟ್ಟು ಕೂತಿದ್ದರು. ತಡರಾತ್ರಿಯ ಸಂಧಾನದಿಂದಾಗಿ ಶೆಲ್ ದಾಳಿಗೆ ವಿರಾಮ ಸಿಕ್ಕಿದ್ದು, ಶ್ರೀನಗರದ ಜನತೆಯಲ್ಲಿ ಸಮಾಧಾನ ತಂದಿತ್ತು.

ಇನ್ನು, ಲಾಲ್ ಚೌಕ್ ಬಳಿಯ ಶ್ರೀಸಾಮಾನ್ಯರ ಮಾರುಕಟ್ಟೆ ‘ಸಂಡೇ ಮಾರ್ಕೆಟ್’ ಓಪನ್ ಆಗಿತ್ತು. ಪೋಲೋ ವ್ಯೂ ರೆಸಿಡೆಂಟ್ ಮಾರ್ಕೆಟ್‌ನಿಂದ ಹಿಡಿದು ಲಾಲ್ ಚೌಕ್‌ನ ಟವರ್ ಕ್ಲಾಕ್ ತನಕ ಸಂಡೇ ಬಜಾರ್ ಚಾಚಿಕೊಂಡಿತ್ತು. ಬೆಳಗ್ಗೆಯಿಂದಲೇ ವ್ಯಾಪಾರ ಜೋರಾಗಿತ್ತು.

ಈ ಮಧ್ಯೆ, ನಗರ ಸಹಜ ಸ್ಥಿತಿಗೆ ಬಂದಿದ್ದರೂ, ಜನಸಾಮಾನ್ಯರು ಶಾಂತಚಿತ್ತತೆಯಿಂದ ಓಡಾಡುತ್ತಿದ್ದರೂ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಭದ್ರತೆ ಮಾತ್ರ ಎಲ್ಲೂ ಕಡಿಮೆ ಆಗಿಲ್ಲ. ಬಿಗಿ ಭದ್ರತೆ ಮುಂದುವರಿದಿದೆ.ಉರಿ, ಬಾರಾಮುಲ್ಲಾಗಳಲ್ಲೂ ಸಹಜ ಸ್ಥಿತಿ:

ಇನ್ನು, ಶೆಲ್ ದಾಳಿಗೆ ಹೆಚ್ಚು ತುತ್ತಾಗುತ್ತಿದ್ದ ಉರಿ, ಬಾರಾಮುಲ್ಲಾಗಳಲ್ಲೂ ಕೂಡ ಸಹಜ ಸ್ಥಿತಿ ಮರಳುತ್ತಿದೆ. ಪಾಕಿಸ್ತಾನದ ಶೆಲ್‌ ದಾಳಿಯಿಂದ ಮನೆ ಕಳೆದುಕೊಂಡವರು, ಶೆಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಸಂಬಂಧಿಕರ ಮನೆ ಸೇರಿದ್ದ ನಿವಾಸಿಗಳು ನಿಧಾನವಾಗಿ ತಮ್ಮ ಮನೆಗಳಿಗೆ ತೆರಳಲು ಆರಂಭಿಸಿದ್ದಾರೆ. ಬಾಂಡಿ, ಉರಿ, ಲಗಾಮ್, ಜಿಂಗಲ್ ಹಳ್ಳಿಗಳಲ್ಲಿನ ನಿವಾಸಿಗಳು ತಮ್ಮ, ತಮ್ಮ ಮನೆಗಳ ಕಡೆ ಧಾವಿಸುತ್ತಿದ್ದಾರೆ.ಆದರೆ, ಜಿಲ್ಲಾಡಳಿತ ಈ ಬಗ್ಗೆ ಧಾವಂತ ಪಡುತ್ತಿಲ್ಲ. ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸರು ತಾವಾಗಿಯೇ, ಸ್ವ-ಇಚ್ಛೆಯಿಂದ ತಮ್ಮ ಗ್ರಾಮಕ್ಕೆ ಹೋಗುತ್ತೇವೆ ಎಂದವರನ್ನು ಮಾತ್ರ ಕಳುಹಿಸಿಕೊಡುತ್ತಿದ್ದರು. ಅವರ ಆಧಾರ್ ಕಾಡ್೯ ಪರಿಶೀಲಿಸಿದ ನಂತರವೇ ಮನೆಗೆ ತೆರಳಲು ಅನುಮತಿ ನೀಡುತ್ತಿದ್ದರು.

ನಿರಾಶ್ರಿತರ ಕೇಂದ್ರ ಓಪನ್‌:

ಬಾರಾಮುಲ್ಲಾ ಜಿಲ್ಲಾಡಳಿತ ಮನೆ ಕಳೆದುಕೊಂಡವರಿಗೆ ಆಶ್ರಯ ಕೇಂದ್ರ ತೆರೆದಿದೆ. ಬೋನಿಯಾರ್‌ನಲ್ಲಿ ನಿರಾಶ್ರಿತರ ಕೇಂದ್ರ ತೆರೆದು, 250ಕ್ಕೂ ಹೆಚ್ಚು ಮಂದಿಗೆ ಆಶ್ರಯ ಕಲ್ಪಿಸಿದೆ. ಇಲ್ಲಿ ಮನೆಗಳನ್ನು ಕಳೆದುಕೊಂಡ 35 ಕುಟುಂಬಗಳು ಆಶ್ರಯ ಪಡೆದಿವೆ. ಮನೆ ಕಳೆದುಕೊಂಡವರನ್ನು ಕರೆದುಕೊಂಡು ಬರುವುದರಿಂದ ಹಿಡಿದು, ಅವರಿಗೆ ಆಹಾರ, ಬಟ್ಟೆ, ಮಲಗಲು ವ್ಯವಸ್ಥೆ ಸೇರಿದಂತೆ ಎಲ್ಲಾ ಅನುಕೂಲಗಳನ್ನು ಈ ಕೇಂದ್ರದಲ್ಲಿ ಮಾಡಲಾಗಿದೆ. ಜೊತೆಗೆ 24 ಗಂಟೆಗಳ ಆರೋಗ್ಯಸೇವೆ ಒದಗಿಸಲಾಗಿದೆ. ಬಿಗಿ ಭದ್ರತೆಯಂತೂ ಇದ್ದೆ ಇದೆ. ಕೋಟ್‌:ಪರಿಹಾರ ಬೇಕಿದೆ

ಇದು 75 ವರ್ಷಗಳಿಂದ ಇರುವ ವ್ಯಾಜ್ಯ. ಹಲವು ತಲೆಮಾರುಗಳೇ ಕಳೆದು ಹೋಗಿವೆ. ಹೀಗಾಗಿ, ಮುಂದಿನ ತಲೆಮಾರಿಗೆ ಇದೇ ವ್ಯಾಜ್ಯ ಮುಂದುವರಿಯಬಾರದು. ಇನ್ನು ಸಾಕು, ಭಯೋತ್ಪಾದನೆಗೆ ವಿರಾಮ ಹಾಕಬೇಕು, ಈಗ ಭಾರತಕ್ಕೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಸಮಯ ಬಂದಿದೆ. ಈಗಲಾದರೂ ಕಟ್ಟುನಿಟ್ಟಾಗಿ ನಡೆದುಕೊಳ್ಳಬೇಕು.

- ಪರ್ವೇಜ್, ಶ್ರೀನಗರ ನಿವಾಸಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ