ಕನ್ನಡಪ್ರಭ ವಾರ್ತೆ ಸುರಪುರ
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಾವೀದ್ ಇನಾಂದಾರ, ಸುರಪುರ ಸಗರನಾಡಿನ ಜನರು ಹೃದಯವಂತಿಕೆಯುಳ್ಳವರು. ಇಲ್ಲಿ ಸೇವೆ ಸಲ್ಲಿಸಿದ ಅವಧಿ ನನ್ನ ಪಾಲಿಗೆ ಮರೆಯಲಾಗದ ಅನುಭವಾಗಿದೆ ಎಂದರು.
ಪೊಲೀಸ್ ಸೇವೆಯಲ್ಲಿ ಜಾತಿ, ಧರ್ಮ, ಬಡವ-ಬಲ್ಲಿದ ಎಂಬ ಯಾವುದೇ ಬೇಧಭಾವ ಮಾಡದೆ ಪ್ರತಿಯೊಬ್ಬರನ್ನು ಮನುಷ್ಯರಾಗಿ ಕಂಡು ಸಮಾನ ಗೌರವದಿಂದ ಕೆಲಸ ನಿರ್ವಹಿಸಿದ್ದೇನೆ. ಜಾತಿ, ಧರ್ಮದ ಭೇದದಿಂದ ದೂರವಿದ್ದು, ದರ್ಗಾ, ದೇವಸ್ಥಾನ ಸೇರಿದಂತೆ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೂ ಗೌರವ ನೀಡುತ್ತಾ ಬಂದಿದ್ದೇನೆ. ಎಲ್ಲ ಜಾತಿ, ಧರ್ಮ ಹಾಗೂ ಜನರ ನಂಬಿಕೆಗಳನ್ನು ಗೌರವಿಸುವುದು ನನ್ನ ನಂಬಿಕೆಯಾಗಿದೆ. ಕುವೆಂಪು ಅವರ ವಿಶ್ವಮಾನವ ತತ್ವದಂತೆ ಮನುಷ್ಯ ಧರ್ಮಕ್ಕೆ ಆದ್ಯತೆ ನೀಡುವುದೇ ನನ್ನ ಜೀವನದ ಧ್ಯೇಯವಾಗಿದೆ ಎಂದು ಜಾವೀದ್ ಇನಾಂದಾರ ಹೇಳಿದರು.ಶಹಾಪುರದ ಸಿಪಿಐ ದೀಪಕ್ ಬೋಸರೆಡ್ಡಿ ಮಾತನಾಡಿ, ಜಾವೀದ್ ಇನಾಂದಾರ್ ಅತ್ಯಂತ ದಕ್ಷ, ನಿಷ್ಠಾವಂತ ಮತ್ತು ಪ್ರಾಮಾಣಿಕ ಅಧಿಕಾರಿಗಳಲ್ಲಿ ಒಬ್ಬರು. ಎಷ್ಟೇ ಕಷ್ಟಕರ ಸವಾಲುಗಳು ಎದುರಾದರೂ ಆತುರದ ನಿರ್ಧಾರ ಕೈಗೊಳ್ಳದೆ, ಶಾಂತ ರೀತಿಯಿಂದ ಆಲೋಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುತ್ತಿದ್ದರು. ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಹಿನ್ನಲೆಯಲ್ಲಿ ಸಹೋದ್ಯೋಗಿಗಳು ಹಾಗೂ ಸಿಬ್ಬಂದಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ಸುರಪುರದಲ್ಲಿ ಸೇವೆ ಸಲ್ಲಿಸಿ ಜನರು ಹಾಗೂ ಇಲಾಖೆಯ ಪ್ರೀತಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಶಹಾಪುರದ ಪಿಎಸ್‌ಐ ಎಸ್.ಎಂ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಬೇಟೆಗಾರ, ಶಿವಲಿಂಗ ಹಸನಾಪುರ, ರಾಮುನಾಯಕ ಅರಳಹಳ್ಳಿ, ಹರೀಶ ತ್ರಿವೇದಿ, ಪೊಲೀಸ್ ಪೇದೆ ಭಾಗಣ್ಣ, ಮಹಾಂತೇಶ, ಅರಣ್ಯ ಇಲಾಖೆ ಅಧಿಕಾರಿ ರಾಜಪ್ಪ ಮಾತನಾಡಿದರು.
ಗೋಗಿಯ ಪಿಎಸ್‌ಐ ಶಿವರಾಜ ಪಾಟೀಲ, ಕೆಂಭಾವಿಯ ಪಿಎಸ್‌ಐ ಹಣಮಂತಪ್ಪ, ಪಿಎಸ್‌ಐ ಕೃಷ್ಣಾ ವಿ.ಸುಬೇದಾರ, ಪಿಎಸ್‌ಐ ಸಿದ್ದಣ್ಣ ಯಡ್ರಾಮಿ, ದೇವಾನಂದ ರೆಡ್ಡಿ ಸೇರಿದಂತೆ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘಟನೆಯ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು. ಪಿಐ ಉಮೇಶ ಎಂ ಸ್ವಾಗತಿಸಿದರು. ಶಿಕ್ಷಕ ಮಹಾಂತೇಶ ದೇವರಗೋನಾಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.