ಬಿಸಿಲಾಘಾತಕ್ಕೆ ತತ್ತರಿಸಿದ ಅವಳಿ ತಾಲೂಕು ಜನತೆ

KannadaprabhaNewsNetwork |  
Published : Mar 26, 2025, 01:33 AM IST
ಬಿಸಿಲಿನ ತಾಪಕ್ಕೆ ಬಸವಳಿದ ಜನತೆ ಎಳೆ ನೀರಿಗೆ ಮೊರೆ ಹೋಗಿರುವುದು. | Kannada Prabha

ಸಾರಾಂಶ

ಬೇಸಿಗೆಯ ಆರಂಭದಲ್ಲೇ ರಬಕವಿ-ಬನಹಟ್ಟಿ, ತೇರದಾಳ ಅವಳಿ ತಾಲೂಕಲ್ಲಿ ದಾಖಲೆಯ ೩೯ ಡಿಗ್ರಿಗೆ ತಲುಪಿರುವ ತಾಪಮಾನ ಜನತೆಯನ್ನು ಕಂಗೆಡಿಸಿದೆ. ಈಗಲೇ ಈ ಸ್ಥಿತಿಯಾದರೆ ಏಪ್ರಿಲ್‌, ಮೇ ತಿಂಗಳಲ್ಲಿ ಬಿಸಿಲಿನ ತಾಪದಿಂದ ಪಾರಾಗುವುದು ಹೇಗೆ ಎಂದು ಜನತೆ ಚಿಂತೆಗೀಡಾಗಿದ್ದಾರೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬೇಸಿಗೆಯ ಆರಂಭದಲ್ಲೇ ರಬಕವಿ-ಬನಹಟ್ಟಿ, ತೇರದಾಳ ಅವಳಿ ತಾಲೂಕಲ್ಲಿ ದಾಖಲೆಯ ೩೯ ಡಿಗ್ರಿಗೆ ತಲುಪಿರುವ ತಾಪಮಾನ ಜನತೆಯನ್ನು ಕಂಗೆಡಿಸಿದೆ. ಈಗಲೇ ಈ ಸ್ಥಿತಿಯಾದರೆ ಏಪ್ರಿಲ್‌, ಮೇ ತಿಂಗಳಲ್ಲಿ ಬಿಸಿಲಿನ ತಾಪದಿಂದ ಪಾರಾಗುವುದು ಹೇಗೆ ಎಂದು ಜನತೆ ಚಿಂತೆಗೀಡಾಗಿದ್ದಾರೆ.

ಬೆಳಗ್ಗೆ 9 ಗಂಟೆಯಾದರೆ ಸಾಕು ಬಿರುಬಿಸಿಲು ಆರಂಭವಾಗುತ್ತದೆ. ಜನರು ಮನೆ ಬಿಟ್ಟು ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಿದ್ದು, ಬಿಸಿಗಾಳಿಯ ತೀವ್ರತೆಯಿಂದ ಮಕ್ಕಳು ಆಟಕ್ಕೆ ಬ್ರೇಕ್‌ ಬಿದ್ದಿದೆ. ಮನೆ ಹೊರಗೆ ಕಾಲಿಟ್ಟರೆ ನೆತ್ತಿ ಸುಡುವ ಬಿಸಿಲು ಎಷ್ಟೇ ನೀರು, ತಂಪು ಪಾನಿಯ ಕುಡಿದರೂ ಸಂಕಟ ಕಡಿಮೆ ಆಗುತ್ತಿಲ್ಲ. ಸದ್ಯದ ಹವಾಮಾನ ನೋಡಿದರೆ ಮಳೆಯಾಗುವ ಸಾಧ್ಯತೆ ಕಡಿಮೆ. ತಾಪಮಾನ ಮತ್ತಷ್ಟು ಹೆಚ್ಚಳಗೊಳ್ಳುವ ಲಕ್ಷಣ ಗೋಚರಿಸುತ್ತಿವೆ.

ನೇಕಾರಿಕೆ ವೃತ್ತಿಯನ್ನೇ ನಂಬಿರುವ ಅವಳಿ ನಗರದಲ್ಲಿ ಹೆಚ್ಚಾಗಿ ಪತ್ರಾಸ್ ಶೆಡ್‌ಗಳ ಮನೆಗಳನ್ನೇ ಹೊಂದಿರುವುದರಿಂದ ಕಬ್ಬಿಣದ ಪತ್ರಾಸ್‌ಗಳಿಂದ ಬಿಸಿಲಿಗೆ ಕಾದು ಮನೆಯಲ್ಲಿದ್ದರೂ ಬೆವರಿನ ಸ್ನಾನ ಮಾಡುವಂತಾಗಿದೆ. ಕಾಂಕ್ರೀಟ್ ಮನೆಗಳು ಸಹ ಕಾದ ಕಬ್ಬಲಿಯಂತಾಗಿವೆ. ರಾತ್ರಿಯಾದರೂ ಬೆಂಕಿಯ ಮನೆಯಲ್ಲಿ ಕುಳಿತಂತಾಗುತ್ತಿದೆ. ಇದರಿಂದ ಜನ ರಾತ್ರಿ ಹೊತ್ತು ಮನೆಯಿಂದ ಹೊರಗೆ ತಣ್ಣನೆ ಗಾಳಿಗೆ ಮೈಯೊಡ್ಡಿ ಕುಳಿತುಕೊಂಡರೆ, ಕೆಲವರು ವಿಹಾರಕ್ಕೆ ಹೋಗುತ್ತಿದ್ದಾರೆ.

ತಂಪು ಪಾನೀಯಕ್ಕೆ ಹೆಚ್ಚಿದ ಬೇಡಿಕೆ :

ಬಿಸಿಲಿನ ತಾಪಕ್ಕೆ ಜನತೆ ತಂಪು ಪಾನೀಯ, ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಎಳೆನೀರಿಗೆ ಹೆಚ್ಚಿನ ಬೇಡಿಕೆ ಇದೆ. ₹೩೦ಕ್ಕೆ ಒಂದು ಎಳೆನೀರು ಮಾರಾಟ ಮಾಡಲಾಗುತ್ತಿದೆ. ಲಿಂಬು ಸೋಡಾ, ಶರಬತ್, ಮಜ್ಜಿಗೆ ಮುಂತಾದ ಪಾನೀಯಗಳಿಗೆ ಜನರು ಮುಗಿ ಬಿದ್ದಿದ್ದಾರೆ. ತಂಪು ಪಾನೀಯ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿವೆ.

ಬಿಸಿಲಿನ ತಾಪಕ್ಕೆ ಎಲ್ಲಿಯೇ ಕುಳಿತರೂ, ನಿಂತರೂ ಜನರು ಚಡಪಡಿಸುತ್ತಿದ್ದಾರೆ. ಬೆವರಿನ ಸ್ನಾನದಿಂದ ಬಸವಳಿದು, ಬೆಳಗ್ಗೆ ೮ ಗಂಟೆಯಾಗುತ್ತಿದ್ದಂತೆ ಬಿರು ಬಿಸಿಲು ಜನರನ್ನು ಹಿಂಡಿ ಹಿಪ್ಪೆಯಾಗಿಸುತ್ತಿದೆ. ಮನೆಯಲ್ಲಿ ತಿರುಗುವ ಫ್ಯಾನ್‌ಗಳಿಗೆ ವಿಶ್ರಾಂತಿಯೇ ಇಲ್ಲ. ಕರೆಂಟು ಕೈಕೊಟ್ಟರೆ ಜನ ವಿಲ ವಿಲ ಒದ್ದಾಡುತ್ತಿದ್ದು, ಹೆಸ್ಕಾಂಗೆ ಹಿಡಿಶಾಪ ಹಾಕುತ್ತಿದ್ದಾರೆ. ಒಣ ಹವೆ ಇರುವುದರಿಂದ ಫ್ಯಾನ್‌ಗಳು ಸಹ ಬೆಂಕಿ ಗಾಳಿಯನ್ನೇ ಹೊರಸೂಸುತ್ತಿವೆ. ವೃದ್ಧರು, ರೋಗಿಗಳ ಸ್ಥಿತಿ ದೇವರಿಗೇ ಪ್ರೀತಿ!.

ಕೃಷ್ಣೆ ಖಾಲಿಯಾಗುವ ಭಯ:

ಪಕ್ಕದಲ್ಲೇ ಭೋರ್ಗರೆಯುವ ಕೃಷ್ಣೆ ಬೇಸಿಗೆ ದಾಹ ನೀಗಿಸುವ ಭರವಸೆಯಲ್ಲಿ ಜನರಿದ್ದರು. ಆದರೆ ೪ ಟಿಎಂಸಿ ನೀರನ್ನು ನೆರೆಯ ತೆಲಂಗಾಣ ರಾಜ್ಯಕ್ಕೆ ಹರಿಬಿಟ್ಟ ರಾಜ್ಯ ಸರ್ಕಾರದ ಕ್ರಮದಿಂದ ಜನತೆಯಲ್ಲಿ ಆತಂಕ ಹೆಚ್ಚಿಸಿದೆ. ಬಿಸಿಲ ತಾಪದಿಂದ ಭಾಷ್ಪೀಕರಣ ಕ್ರಿಯೆಯಿಂದ ನದಿ ನೀರು ಬತ್ತುತ್ತಿದೆ. ಜಮಖಂಡಿ ಮತ್ತು ಮುಂದಿನ ಪ್ರದೇಶಗಳಲ್ಲಿ ಕೃಷ್ಣೆಯ ಒಡಲು ಖಾಲಿಯಾಗಿರುವುದರಿಂದ ಹಿಪ್ಪರಗಿ ಜಲಾಶಯದಲ್ಲಿನ ನೀರು ಬಿಡುವ ಅನಿವಾರ್ಯತೆ ಸೃಷ್ಟಿಯಾದರೆ ಅವಳಿ ತಾಲೂಕುಗಳಲ್ಲಿ ನೀರಿನ ಹಾಹಾಕಾರ ಉಂಟಾಗುವುದು ನಿಶ್ಚಿತ. ಜಲಕ್ಷಾಮ ಉಂಟಾಗದಂತೆ ನಗರಸಭೆ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾಗಿ ಹೇಳುತ್ತಿದ್ದರೂ, ಅದಕ್ಕೆ ಮೀಸಲಿಟ್ಟ ಹಣ ಭಾಗ್ಯದ ಪಾಲಾಗುವುದೋ ಎಂಭ ಭಯ ಇಲ್ಲಿನ ಜನತೆಯನ್ನು ಕಾಡುತ್ತಿದೆ.ಫೆಬ್ರುವರಿ ತಿಂಗಳಿಂದ ಬಿಸಲಿನ ತೀವ್ರತೆ ಹೆಚ್ಚಾಗುತ್ತಿದೆ. ಮಾರ್ಚ್ ಮಧ್ಯ ಭಾಗದಿಂದ ಬಿಸಲಿನ ಆರ್ಭಟಕ್ಕೆ ತತ್ತರಿಸುವಂತಾಗಿದೆ. ಕಾರ್ಖಾನೆಗಳಲ್ಲಿ ನೇಯ್ಗೆ ಕೆಲಸದತ್ತಲೂ ಕಾರ್ಮಿಕರಿಗೆ ಆಸಕ್ತಿ ಮೂಡುತ್ತಿಲ್ಲ. ಮನೆಗೆ ತೆರಳಿದರೆ ಬಿಸಿಲಿಗೆ ಕೆಂಡದಂತಾಗಿರುವ ಪತ್ರಾಸ್‌ಗಳು ತಾಪಮಾನ ಏರಿಸಿ ಮಲಗಲೂ ಆಗದ ಸ್ಥಿತಿ ಉಂಟಾಗಿದೆ. ವಾಯುವಿನಲ್ಲೂ ಬಿಸಿ ಆವರಿಸಿದ್ದು, ಬೆವರುಸ್ನಾನ ತಪ್ಪದಂತಾಗಿದೆ.

-- ಶಂಕರ ಆಮಟಿ. ಕೈಮಗ್ಗ ನೇಕಾರ, ಬನಹಟ್ಟಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಸರ ಪ್ರಜ್ಞೆ ಮೂಡಿಸುತ್ತಿರುವ ಕನ್ನಡಪ್ರಭ
ಆಸ್ಪತ್ರೆ ನಿರ್ಮಾಣಕ್ಕೆ ಜಾಗ ನೀಡಲು ಸಿದ್ಧ: ಶಾಸಕ ರವಿಕುಮಾರ್‌