ಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್ ಅಭಿಯಾನಗಳು ಈ ಬಾರಿಯ ದೀಪಾವಳಿಯಲ್ಲಿ ಯಶಸ್ವಿಯಾದಂತಿವೆ. ಇಲ್ಲಿ ಯಾವುದೇ ಅಂಗಡಿಗಳಿಗೆ ತೆರಳಿದರೆ ಅಲ್ಲಿ ಗ್ರಾಹಕರಿಂದ ಬರುವ ಉತ್ತರ ಇದು ಭಾರತದ ಪ್ರಾಡಕ್ಟಾ?..
ಹೌದು! ಮಹಾನಗರದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಿದ್ಧತೆ ಜೋರಾಗಿದೆ. ಈ ಬಾರಿ ಜನತೆ ಸ್ಥಳೀಯವಾಗಿ ತಯಾರಾಗುವ ವಸ್ತುಗಳಿಗೆ ಹೆಚ್ಚಾಗಿ ಮೊರೆ ಹೋಗಿದ್ದಾರೆ. ಪ್ರತಿಬಾರಿ ಜನ ಹಣತೆ, ಆಕಾಶಬುಟ್ಟಿ, ಬಗೆಬಗೆಯ ಲೈಟಿನ ಸರಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ಗೃಹಪಯೋಗಿ ವಸ್ತುಗಳಿಗಾಗಿ ಚೀನಾ ವಸ್ತುಗಳ ಮೊರೆ ಹೋಗುತ್ತಿದ್ದರು. ಆದರೆ, ಈ ಬಾರಿ ಸ್ಥಳೀಯವಾಗಿ ಉತ್ಪಾದನೆಯಾಗುವ, ಮೇಡ್ ಇನ್ ಇಂಡಿಯಾ ವಸ್ತುಗಳನ್ನೇ ಕೇಳಿ ಪಡೆಯುತ್ತಿದ್ದಾರೆ. ಚೀನಾ ವಸ್ತುಗಳು ಇಲ್ಲಿನ ವಸ್ತುಗಳಿಗಿಂತ ಕೊಂಚ ಕಡಿಮೆ ಬೆಲೆಯಲ್ಲಿರುತ್ತವೆ. ಆದರೂ ಗ್ರಾಹಕರು ಅಂಗಡಿಗೆ ಬಂದಾಗ ಇದು ಮೇಡ್ ಇನ್ ಇಂಡಿಯಾ ಪ್ರಾಡಕ್ಟಾ? ಎಂದು ಕೇಳಿ ಪಡೆಯುತ್ತಿದ್ದಾರೆ.ಎಲ್ಲೆಲ್ಲಿ ಖರೀದಿ:
ಹುಬ್ಬಳ್ಳಿಯ ದುರ್ಗದ ಬೈಲ್, ಶಾ ಬಜಾರ್, ದಾಜಿಬಾನ್ ಪೇಟೆ, ಮರಾಠಾ ಗಲ್ಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಕಡೆಗಳಲ್ಲಿ ಹೋಲ್‌ಸೇಲ್ ಅಂಗಡಿಗಳಿವೆ. ಅಲ್ಲದೇ ಮಾರಾಟ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಹತ್ತಾರು ಅಂಗಡಿಗಳನ್ನು ರಸ್ತೆಯ ಮೇಲೆ ಇರಿಸಲಾಗಿದೆ. ಇಲ್ಲಿಗೆ ಭೇಟಿ ನೀಡುವ ಗ್ರಾಹಕರು ಹಾಗೂ ಚಿಕ್ಕಪುಟ್ಟ ವ್ಯಾಪಾರಸ್ಥರು ಸ್ಥಳೀಯವಾಗಿ ತಯಾರಾಗುವ ವಸ್ತುಗಳನ್ನೇ ಕೇಳಿ ಪಡೆಯುತ್ತಿದ್ದಾರೆ.₹1 ಕೋಟಿಗೂ ಹೆಚ್ಚು ವಹಿವಾಟು
ಉತ್ತರ ಕರ್ನಾಟದಲ್ಲಿಯೇ ಹುಬ್ಬಳ್ಳಿ ಮಾರುಕಟ್ಟೆ ಹೆಸರು ಪಡೆದಿದೆ. ಧಾರವಾಡ ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳ ವ್ಯಾಪಾರಸ್ಥರು, ಗ್ರಾಹಕರು ಇಲ್ಲಿಗೆ ಆಗಮಿಸಿ ವಸ್ತುಗಳನ್ನು ಖರೀದಿಸುತ್ತಾರೆ. ನಿತ್ಯಕ್ಕಿಂತ ದೀಪಾವಳಿ ಹಬ್ಬದ ಪೂರ್ವ ಒಂದು ವಾರದ ಕಾಲ ವ್ಯಾಪಾರ ವಹಿವಾಟು ಹೆಚ್ಚಾಗಿರುತ್ತದೆ. ಹಾಗಾಗಿ ಹಬ್ಬ ಪೂರ್ಣಗೊಳ್ಳುವುದರೊಳಗೆ ₹1ಕೋಟಿಗೂ ಅಧಿಕ ವ್ಯಾಪಾರ, ವಹಿವಾಟು ನಡೆಯಲಿದೆ ಎಂದು ಶಾ ಬಜಾರ್‌ನ ಅಂಗಡಿಯ ಮಾಲೀಕ ನೂರಅಹ್ಮದ ನದಾಫ ಕನ್ನಡಪ್ರಭಕ್ಕೆ ತಿಳಿಸಿದರು.ಯಾವ ವಸ್ತುಗಳ ಖರೀದಿ?
ಸ್ಥಳೀಯವಾಗಿಯೇ ಕುಂಬಾರರು ಹಾಗೂ ಹಲವು ತಯಾರಿಕಾ ಘಟಕಗಳು ಬಗೆಬಗೆಯ ಆಕರ್ಷಕ ಪಣತೆಗಳನ್ನು ತಯಾರಿಸುತ್ತಿದ್ದಾರೆ. ನೀರಿನಿಂದ ಹಚ್ಚುವ ದೇಶಿಯ ಹಣತೆಗಳು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇವುಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ವಿವಿಧ ಚಿತ್ತಾಕರ್ಷಕ ಬಣ್ಣಗಳನ್ನು ಹೊಂದಿದ ನೂರಾರು ಬಗೆಯ ಪಣತೆಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ. ಹಾಗೆಯೇ ದೇಶಿಯ ಆಕಾಶಬುಟ್ಟಿ, ಪಿಂಗಾಣಿ ವಸ್ತುಗಳನ್ನೇ ಗ್ರಾಹಕರು ಕೇಳಿ ಪಡೆಯುತ್ತಿದ್ದಾರೆ.ಕುಗ್ಗಿದ ಚೀನಾ ವಸ್ತುಗಳ ಬೇಡಿಕೆ
ದೀಪಾವಳಿ, ಗಣೇಶ ಚತುರ್ಥಿ ಸೇರಿದಂತೆ ಸಭೆ ಸಮಾರಂಭಗಳಲ್ಲಿ ಬಳಕೆಯಾಗುತ್ತಿದ್ದ ಚೀನಿ ವಸ್ತುಗಳ, ಲೈಟಿನ ಸರಗಳ ಬೇಡಿಕೆ ಈ ವರ್ಷ ತುಂಬಾ ಕುಗ್ಗಿದೆ. ಅಲ್ಲದೇ ದೇಶಿಯ ಹಲವು ಕಂಪನಿಗಳು ನೂರಾರು ಶೈಲಿಯಲ್ಲಿ ಲೈಟಿನ ಸರಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವುದು ಚೀನಾ ವಸ್ತುಗಳಿಗೆ ಸೆಡ್ಡು ಹೊಡೆದಂತಿವೆ. ಬರುವ ಗ್ರಾಹಕರು ಲೈಟಿನ ಸರ ಕೇಳಿದಾಗ ಚೈನಾ ವಸ್ತುಗಳನ್ನು ತೋರಿಸದರೆ ಅದನ್ನು ತಿರಸ್ಕರಿಸುತ್ತಿದ್ದಾರೆ. ಬೆಲೆ ಹೆಚ್ಚಾದರೂ ಮೇಡ್ ಇನ್ ಇಂಡಿಯಾ ವಸ್ತುಗಳನ್ನೇ ಕೊಡಿ ಎನ್ನುತ್ತಿದ್ದಾರೆ. ಪ್ರತಿ ವರ್ಷ ದೀಪಾವಳಿಯಲ್ಲಿ ₹60ಲಕ್ಷಕ್ಕೂ ಅಧಿಕ ಚೀನಿ ವಸ್ತುಗಳು ಮಾರಾಟವಾಗುತ್ತಿದ್ದವು. ಈ ಬಾರಿ ₹30 ಲಕ್ಷದಷ್ಚೂ ವ್ಯಾಪಾರ ಆಗುವುದಿಲ್ಲ ಎನ್ನುತ್ತಾರೆ ಹೋಲ್‌ಸೇಲ್ ಅಂಗಡಿಯ ಮಾಲಿಕ ಜೈಶಂಕ ಬಾಕಳೆ.ನಮ್ಮ ದೇಶದಲ್ಲಿ ತಯಾರಾಗುವ ವಸ್ತುಗಳನ್ನು ನಾವೇ ಬಳಸದಿದ್ದರೆ ಹೇಗೆ. ಚೀನಾ ವಸ್ತುಗಳಿಗಿಂತ ಕೊಂಚ ದೇಶಿಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಬೆಲೆ ಹೆಚ್ಚಾದರೂ ಸರಿ ನಾವು ಈ ದೀಪಾವಳಿಯನ್ನು ದೇಶಿಯ ವಸ್ತುಗಳ ಬಳಕೆಯ ಮೂಲಕ ಆಚರಿಸುತ್ತೇವೆ ಎನ್ನುತ್ತಾರೆ ಗ್ರಾಹಕಿ ರೇಖಾ ಕಲ್ಲನಗೌಡ.
ಈ ಬಾರಿ ಚೀನಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಬಹುದು ಎಂದು ಚೀನಿ ವಸ್ತುಗಳನ್ನೇ ಜಾಸ್ತಿ ಹಾಕಿದ್ದೇವೆ. ಅಂಗಡಿಗೆ ಬರುವ ಗ್ರಾಹಕರಲ್ಲಿ ಶೇ. 80ರಷ್ಟು ಜನ ದೇಶಿಯ ವಸ್ತುಗಳನ್ನೇ ನೀಡಿ ಎನ್ನುತ್ತಾರೆ. ತಂದ ವಸ್ತುಗಳೆಲ್ಲ ಹಾಗೆಯೇ ಇದೆ ಎಂದು ಮಾಹಿತಿ ನೀಡುತ್ತಾರೆ ವ್ಯಾಪಾರಿ ಗಣಪತಸಾ ಮೆಹರವಾಡೆ.