ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಅಭಿವೃದ್ಧಿ, ಉದ್ಯೋಗ, ಸಾಹಸ, ಧೈರ್ಯ, ಬುದ್ಧಿಶಕ್ತಿ, ಪರಾಕ್ರಮಗಳು, ಒಳ್ಳೆಯ ಮನಸ್ಸು ಇರುವ ಕಡೆಗೆ ದೇವರ, ಜನರ ಆಶೀರ್ವಾದ ಇರುತ್ತದೆ ಎಂದು ಚನ್ನಮ್ಮನ ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.ತಾಲೂಕಿನ ನೇಗಿನಹಾಳ ಗ್ರಾಮದ ಶ್ರೀ ಮಡಿವಾಳೇಶ್ವರ ಮಠದ ಆವರಣದಲ್ಲಿ ಮಂಗಳವಾರ ತಮ್ಮ 53ನೇ ಜನ್ಮದಿನ ನಿಮಿತ್ತ ಅಭಿಮಾನಿಗಳು, ಸಾರ್ವಜನಿಕರು, ಗ್ರಾಮಸ್ಥರು ಏರ್ಪಡಿಸಿದ್ಧ ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ನೋಟಬುಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದೆರಡು ವರ್ಷಗಳಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕಾರ್ಯ ಮಾಡಿರುವೆ. ಇನ್ನೂ 3 ವರ್ಷ ಅವಧಿ ಇದೆ. ಕಲ್ಪನೆ ಮೀರಿ ಕೆಲಸ ಮಾಡುವ ಭರವಸೆ ಇದೆ. ಸರ್ಕಾರ ಮಟ್ಟದಲ್ಲಿ ಯೋಜನೆಗಳನ್ನು ತರುವುದು ಅಷ್ಟು ಸುಲಭ ಇರುವುದಿಲ್ಲ. ಎಲ್ಲ ಶಾಸಕರಿಂದಲೂ ಪೈಪೋಟಿ ಇರುತ್ತದೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಲೀನ ಆದಾಗ ಮಾತ್ರ ಕೆಲಸಗಳು ಕೈಗೂಡುತ್ತವೆ ಎಂದರು.ಕ್ಷೇತ್ರದ ಜನರ್ಯಾರು ಫೋನ್ ಎತ್ತುವುದಿಲ್ಲ ಅಂತಾ ತಪ್ಪು ಭಾವಿಸಬಾರದು. ಪ್ರತಿಯೊಬ್ಬರ ಭಾವನೆಗೆ ಸ್ಪಂದಿಸಿ ಸೇವೆ ಮಾಡುವೆ. ನೀವೆಲ್ಲರೂ ತಾಳ್ಮೆಯಿಂದ ವರ್ತಿಸಿದರೇ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲ ಆಗುತ್ತದೆ. ಎಲ್ಲರೂ ಸೇರಿ ಕಷ್ಟಪಟ್ಟು ಗೆಲುವು ತಂದು ಕೊಟ್ಟಿದ್ದಿರಿ. ಅದರ ಅರಿವು ನನಗೆ ಇದೆ. ಭೇಟಿ ಆಗಲಿಲ್ಲ, ಮಾತನಾಡಲಿಲ್ಲ ಎಂದು ತಪ್ಪು ತಿಳಿಯುವುದು ಬೇಡ. ಸಮಯ ಓಡುತ್ತಿರುತ್ತದೆ. ಕೆಲಸ ಏನಾಗಬೇಕೆಂದು ಒಂದು ಮನವಿ ನೀಡಿದರೆ ಸಾಕು. ಪರಿಜ್ಞಾನ ಇಟ್ಟುಕೊಂಡು ಕೆಲಸ ಮಾಡುವೆ ಎಂದು ಭರವಸೆ ನೀಡಿದರು.ಒಮ್ಮೊಮ್ಮೆ ವೈಯಕ್ತಿಕ ಕೆಲಸಗಳು ಆಗದೇ ಇದ್ದಾಗ ಸಿಟ್ಟಿನ ನಿರ್ಧಾರಕ್ಕೆ ಬರಬೇಡಿ. ನಿಮ್ಮೆಲ್ಲರ ಪ್ರೀತಿಯಿಂದ ಶಾಸಕ ಆಗಿರುವೆ. ನಾನು ಸೋತಾಗ-ಗೆದ್ದಾಗ ಜತೆಗಿದ್ದ ಯುವಕರನ್ನು, ಹಿರಿಯರನ್ನು ಮತ್ತು ಕ್ಷೇತ್ರದ ಜನರನ್ನು ಎಂದಿಗೂ ದೂರ ಮಾಡಲಾರೆ. ಕೆಲಸದ ಒತ್ತಡದಲ್ಲಿ ಏನೋ ಒಂದು ಅಂದರೂ ಮನೆ ಮಗನೆಂದು ಕ್ಷಮಿಸಬೇಕು. ಸಿಟ್ಟು ಮಾಡಿದರೇ ಉತ್ಸಾಹಕ್ಕೆ ತಡೆಯಾಗುತ್ತದೆ. ಜನರು ಇದ್ದರೇ ಅಧಿಕಾರ, ಅಭಿವೃದ್ಧಿ ಸಾಧ್ಯವೆಂಬ ತಿಳುವಳಿಕೆ ಇದೆ ಎಂದು ತಿಳಿಸಿದರು.ಶಾಸಕ ಬಾಸಾಸಾಹೇಬ ಪಾಟೀಲರ ಪತ್ನಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ಬಾಬಾಸಾಹೇಬರ ಸಹೋದರ ನಾನಾಸಾಹೇಬ ಪಾಟೀಲರು ಈ ವರ್ಷ ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆಸಲಿದ್ದು, ಅವರಿಗೆ ಆಶೀರ್ವದಿಸಬೇಕು ಕೋರಿದರು.ನೇಗಿನಹಾಳ ಸಿದ್ಧಾರೂಢ ಮಠದ ಅದ್ವೈತಾನಂದ ಸ್ವಾಮೀಜಿ, ಹುಣಶೀಕಟ್ಟಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು, ತುರಮರಿಯ ಶಾಂತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸದಾ ಜನರ ನೋವು-ನಲಿವುಗಳಿಗೆ ಸ್ಪಂದಿಸುತ್ತಿರುವ ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಯುವ ಧುರೀಣ ನಾನಾಸಾಹೇಬ ಪಾಟೀಲ, ಕಿತ್ತೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಗನಗೌಡ ಪಾಟೀಲ, ನೇಸರಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಅರಕೇರಿ, ಮಡಿವಾಳಪ್ಪ ಕುಲ್ಲೋಳ್ಳಿ, ಬಸವರಾಜ ತಿಗಡಿ, ಚಂದ್ರಗೌಡ ಪಾಟೀಲ, ಉಮಾ ದೇಸಾಯಿ, ಮುದಕಪ್ಪ ಮರಡಿ, ಸುನೀಲ ಗಿವಾರಿ, ಆಶ್ಪಾಕ್ ಹವಾಲ್ದಾರ, ಕೃಷ್ಣಾ ಬಾಳೇಕುಂದರಗಿ, ಮುಗುಟಸಾಬ ಜಕಾತಿ, ಶಂಕರ ಹೋಳಿ, ಶೇಖಪ್ಪ ಯರಗೊಪ್ಪ, ಬಾಬು ಕತ್ತಿ, ಸಚೀನ್ ಪಾಟೀಲ, ಸುರೇಶ ಹೂಲಿಕಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಿಯಾ ತೋರಣಗಟ್ಟಿ ಕೊರವಂಜಿ ಪಾತ್ರದಲ್ಲಿ ನೋಡುಗರ ಗಮನ ಸೆಳೆದಳು. ಕೃಷ್ಣಾಜಿ ಕುಲಕರ್ಣಿ ಸ್ವಾಗತಿಸಿದರು. ಉಮೇಶ ರುಮೋಜಿ ನಿರೂಪಿಸಿದರು. ಸಾಗರ ಕಾಗತಿದೇಸಾಯಿ, ಶಿವು ಕಲ್ಲೂರ, ಈರಣ್ಣಾ ಉಳವಿ, ಸಾಗರ ಘೋಡಗೇರಿ, ಕಿರಣ ವಾಳದ, ಮೃತ್ಯುಂಜಯ ಪಾಟೀಲ, ಬಸವರಾಜ ಚಿಕ್ಕನಗೌಡರ, ಶಿವಯೋಗಿಗೌಡ ಪಾಟೀಲ ಸೇರಿದಂತೆ ಅನೇಕ ಹಿರಿಯರು, ಗಣ್ಯರು, ಯುವಕರು, ಮಾಜಿ ಸೈನಿಕರ ಸಂಘದ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.ಶುಭ ಕೋರಿದ ಗಣ್ಯರು
ಬಾಬಾಸಾಹೇಬ ಪಾಟೀಲ ಅವರ ಬಂಧುಗಳು, ಅಭಿಮಾನಿಗಳು, ಗಣ್ಯಮಾನ್ಯರು, ಗ್ರಾಮಸ್ಥರು, ಮಹಿಳೆಯರು, ನಾಗರಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು ತಂಡೋಪತಂಡವಾಗಿ ಆಗಮಿಸಿ, ಬಾಬಾಸಾಹೇಬ ಅವರಿಗೆ ಶುಭ ಕೋರಿದರು. 100ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಕಿತ್ತೂರ ಮತಕ್ಷೇತ್ರದ ನಾನಾ ಹಳ್ಳಿಗಳ ಶಾಲೆಗಳಿಗೆ ಒಟ್ಟು 15 ಸಾವಿರ ನೋಟಬುಕ್‌ಗಳನ್ನು ವಿತರಿಸಲಾಯಿತು. ಇದೇ ವೇಳೆ ಮಕ್ಕಳ ಶಿಕ್ಷಣಕ್ಕಾಗಿ 5 ಸರ್ಕಾರಿ ಶಾಲೆಗಳಿಗೆ 5 ಸ್ಮಾರ್ಟ್ ಟಿವಿಗಳನ್ನು ಶಾಸಕರು ತಮ್ಮ ವೈಯಕ್ತಿಕ ಹಣದಿಂದ ವಿತರಿಸಿದರು. ನೇಗಿನಹಾಳದ ಶಾಸಕರ ಬೃಹತ್ ಮನೆ ಹೂಮಾಲೆಗಳಿಂದ ಕಂಗೊಳಿಸಿತು. ಇದೇ ವೇಳೆ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣವನ್ನು ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು. ವಿಶ್ವಗುರು ಬಸವಣ್ಣನವರ ಮೂರ್ತಿಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಲಾಯಿತು. ರಕ್ತದಾನ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಫೇಸಬುಕ್, ವಾಟ್ಸಪ್, ಸ್ಟೇಟಸ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದ ಮೂಲಕ ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಅವರ ಫೊಟೋ ಅಪಲೋಡ್ ಮಾಡಿ, ಕೆಲ ಅಭಿಮಾನಿಗಳು, ಕಾರ್ಯಕರ್ತರು ಶುಭ ಕೋರಿದರು.ಜನ್ಮದಿನ ಆಚರಣೆ ಇಷ್ಟವಿಲ್ಲದ ಸಂಗತಿಯಾದರೂ ತಮ್ಮೆಲ್ಲರನ್ನು ಭೇಟಿಯಾಗಿ ಸಂಭ್ರಮಿಸುವ ಕ್ಷಣವೆಂದು ಭಾಗಿಯಾಗಿದ್ದೇನೆ. ಬರಲಿರುವ ದಿನಗಳಲ್ಲಿ ಕಿತ್ತೂರ ನಾಡು ಸಂಭ್ರಮಿಸುವಂತೆ ಮಾಡುವೆ. ತಪ್ಪುತಡೆಗಳನ್ನು ತಿದ್ಧಿಬುದ್ಧಿ ಹೇಳಿದರೂ ಒಪ್ಪಿಕೊಳುವೆ. ವಿಪಕ್ಷಗಳ ಕೆಲವರು ಹಾಗೆ, ಹೀಗೆ ಅಂತಾ ಹೆಸರು ಹಾಳು ಮಾಡಲು ಪ್ರಯತ್ನಿಸಿದರು. ಆದರೆ, ಕ್ಷೇತ್ರದ ಜನರ ಪ್ರೀತಿವಿಶ್ವಾಸ ಕಂಡು ವಿಸ್ಮಿತನಾಗಿದ್ದೇನೆ.
-ಬಾಬಾಸಾಹೇಬ ಪಾಟೀಲ, ಶಾಸಕರು.ಬಾಬಾಸಾಹೇಬರು ಮೊದಲ ಬಾರಿಗೆ ಶಾಸಕರಾಗಿದ್ದರೂ, ಅವರಿಗೆ 20 ವರ್ಷಗಳಿಂದ ಸಾರ್ವಜನಿಕ ಸೇವೆಯ ಅನುಭವ ಇದೆ. ಈ ಕಾರಣದಿಂದ ಚನ್ನಮ್ಮನ ಕಿತ್ತೂರು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕಾಣುತ್ತಿದೆ.
-ಮೃಣಾಲ್ ಹೆಬ್ಬಾಳಕರ, ಯುವ ಧುರೀಣ.ನನ್ನ ಮಾವನವರಾದ ದಿ.ದೇವನಗೌಡ್ರು ಪಾಟೀಲ ತಮ್ಮ ಜೀವನವನ್ನೇ ಸಮಾಜ ಸೇವೆಗೆ ಅರ್ಪಿಸಿದ್ದಾರೆ. ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದರು. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಹಾಗೂ ಪೂಜ್ಯರ, ಜನರ ಆಶೀರ್ವಾದದಲ್ಲಿ ಮುನ್ನಡೆ ಸಾಧಿಸುತ್ತೇವೆ.
-ರೋಹಿಣಿ ಪಾಟೀಲ, ಶಾಸಕ ಬಾಸಾಸಾಹೇಬ ಪಾಟೀಲರ ಪತ್ನಿ.